ಮಕ್ಕಳ ಏಳಿಗೆಗೆ ಶಿಕ್ಷಕರ ಸೇವೆ ಅಪಾರ

ಕೆಜಿಎಫ್: ವಿದ್ಯಾರ್ಥಿಗಳ ಏಳಿಗೆ ಮೂಲಕ ಶಿಕ್ಷಕರು ಜನಸೇವೆಯಲ್ಲಿ ನಿರತರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಗೌರವ ನೀಡುವುದು ಸಮಾಜದ ಕರ್ತವ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಹೇಳಿದರು.

ನಗರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹಳ್ಳಿಗಾಡಿನಲ್ಲಿ ಹುಟ್ಟಿ, ಉನ್ನತ ಸ್ಥಾನಕ್ಕೆ ಏರಿದ ನನ್ನಂಥ ಅನೇಕರಿಗೆ ಶಿಕ್ಷಕರು ಮತ್ತು ತಂದೆ-ತಾಯಿಗಳ ಪರಿಶ್ರಮ ಕಾರಣವಾಗಿರುತ್ತದೆ. ಅವಕಾಶ ಕೊಟ್ಟರೆ ಎಂಥವರನ್ನೂ ಉನ್ನತ ಸ್ಥಾನಕ್ಕೆ ಏರಿಸುವ ಶಕ್ತಿ ಶಿಕ್ಷಕರಿಗಿದೆ ಎಂದರು.

ಸಮಾಜದಲ್ಲಿ ನ್ಯಾಯಾಧೀಶರು ಮತ್ತು ಶಿಕ್ಷಕರು ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸಬಹುದು. ನ್ಯಾಯಾಧೀಶರು ಅಧಿಕಾರದಿಂದ ಮತ್ತು ಶಿಕ್ಷಕರು ಅವಕಾಶದಿಂದ ಸಮಾಜ ಸೇವೆ ಮಾಡುತ್ತಾರೆ. ಸಮಾಜ ಬೆಳವಣಿಗೆಯಾಗಬೇಕಾದರೆ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಶಿಕ್ಷಕರು ಸಹ ತಮ್ಮ ವ್ಯಾಪ್ತಿಗೆ ಸೀಮಿತಗೊಳ್ಳಬಾರದು ಎಂದು ಸಲಹೆ ನೀಡಿದರು.

ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಮಾತನಾಡಿ, ಇಂದು ಮಕ್ಕಳು ಮತ್ತು ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ. ಶಿಕ್ಷಣ ಕೇಂದ್ರದ ಕಟ್ಟಡ ಪ್ರಮುಖವಾಗದೆ. ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿ ಪ್ರಮುಖರಾಗಿರುತ್ತಾರೆ ಎಂದರು.

ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ಕೋಲಾರ ಜಿಲ್ಲೆ ಸ್ವಚ್ಛ ಭಾರತ್ ಎಂದು ಘೊಷಣೆಯಾಗಲು ಶಿಕ್ಷಕರ ವಹಿಸಿದ ಶ್ರಮ ಅಪೂರ್ವ. ಅವರಿಂದಲೇ ಜಿಲ್ಲೆಗೆ ಉತ್ತಮ ಸ್ಥಾನ ಲಭಿಸಿದೆ ಎಂದರು.

ಕೋಲಾರ ಜಿಲ್ಲಾ ಖಾಸಗಿ ಶಿಕ್ಷಣ ಸಂಘಗಳ ಅಧ್ಯಕ್ಷ ಎಸ್.ಮುನಿಯಪ್ಪ, ಉದ್ಯಮಿ ಮೊಹಮದ್ ಬುಕಾರಿ ಮಾತನಾಡಿದರು. ವಿವಿಧ ಶಾಲೆಗಳಿಂದ ಆಯ್ದ ಉತ್ತಮ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.

ಇಂದು ದೇಶದಲ್ಲಿ ಭಾಷೆ, ಸಂಸ್ಕೃತಿ, ಉಡುಗೆ, ತೊಡುಗೆ ಮೊದಲಾದ ವಿಚಾರದಲ್ಲಿ ಜಗಳಗಳು ನಡೆಯುತ್ತಿವೆ. ಪ್ರತಿಯೊಬ್ಬರಿಗೂ ಎಲ್ಲವನ್ನು ಪಡೆದಕೊಳ್ಳುವ ಹಕ್ಕು ಇದೆ. ಎಲ್ಲರಿಗೂ ಗೌರವ ಕೊಡುವುದನ್ನು ಕಲಿಸಬೇಕು. ಮಕ್ಕಳನ್ನು ದೇಶದ ಪ್ರತಿನಿಧಿಗಳನ್ನಾಗಿ ಮಾಡಬೇಕು. ಹೊಸ ದಾರಿ ಕಂಡುಕೊಳ್ಳಲು ಪ್ರೇರೇಪಿಸಬೇಕು.

| ಮಾರ್ಗರೇಟ್ ಆಳ್ವ, ಮಾಜಿ ರಾಜ್ಯಪಾಲೆ