ಮಕ್ಕಳ ಆಸ್ಪತ್ರೆಗೆ ಹಠಾತ್ ಭೇಟಿ ಅವ್ಯವಸ್ಥೆಗೆ ಸಚಿವ ತುಕಾರಾಂ ಕಿಡಿ: ನಿರ್ದೇಶಕರಿಗೆ ತರಾಟೆ

ಬೆಂಗಳೂರು: ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಶನಿವಾರ ಹಠಾತ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು.

ಆಸ್ಪತ್ರೆಯಲ್ಲಿ ಕೊಳಕು ಸೇರಿ ನಾನಾ ಅವ್ಯವಸ್ಥೆಗಳನ್ನು ಕಂಡ ಸಚಿವರು, ಅಲ್ಲಿನ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ಆಸ್ಪತ್ರೆಗೆ ಬಂದರೂ ಸಿಬ್ಬಂದಿ ಬಂದಿರಲಿಲ್ಲ. ಹಾಜರಾತಿ ಕೇಳಿದಾಗ ಅನೇಕರು ತಡವಾಗಿ ಬಂದದ್ದು ಬೆಳಕಿಗೆ ಬಂತು. ಅನೇಕರು ಗಂಟೆ ನಂತರ ಆಸ್ಪತ್ರೆಗೆ ಬಂದುದನ್ನು ಸಚಿವರು ಕಂಡು ಅಸಮಾಧಾನ ಹೊರ ಹಾಕಿದರು.

ಆಸ್ಪತ್ರೆಯ ಕಾರಿಡಾರಿನಲ್ಲೇ ಅನೇಕ ರೋಗಿಗಳು ಸಾಲು ಸಾಲಾಗಿ ಕುಳಿತಿರುವುದನ್ನು ಕಂಡ ಸಚಿವರು ಆಸ್ಪತ್ರೆ ನಿರ್ದೇಶಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಅಗತ್ಯ ಸೌಲಭ್ಯ: ಅಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಸಿದ್ಧವಿದೆ. ರೋಗಿಗಳಿಗೆ ಯಾವುದೇ ತೊಂದರೆಯಾಗಬಾರದು. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡ ರೋಗಿಗಳು. ಅವರಿಗೆ ಗುಣ ಮಟ್ಟದ ಚಿಕಿತ್ಸೆ ದೊರೆಯಬೇಕು. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ. ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಸೌಲಭ್ಯ ಒದಗಿಸಲು ಕ್ರಮ

ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅಗತ್ಯತೆಗಳನ್ನು ಒದಗಿಸಲು ವ್ಯತ್ಯಯವಾಗಿತ್ತು. ಈಗ ಚುನಾವಣೆ ಮುಗಿದಿದೆ. ಸರ್ಕಾರ ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಲು ಸರ್ಕಾರ ಸಿದ್ಧವಿದೆ. ಆಸ್ಪತ್ರೆ ಮುಖ್ಯಸ್ಥರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರೋಗಿಗಳಿಗೆ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಿರುವುದಾಗಿ ‘ವಿಜಯವಾಣಿ’ಗೆ ಸಚಿವ ಇ.ತುಕಾರಾಂ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *