ಮಕ್ಕಳ ಆಸಕ್ತಿಗನುಗುಣ ಬೋಧಿಸಿ

ಶಿಡ್ಲಘಟ್ಟ:  ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ. ಹಾಗಾಗಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವ ವಾತಾವರಣ ನಿರ್ವಿುಸಿಕೊಡಬೇಕೆಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹೇಳಿದರು.

ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ(ಪದವಿ ಪ್ರದಾನ) ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣ ಮನೆಯಲ್ಲಿ ಸೃಷ್ಟಿಸಿಕೊಡಬೇಕು. ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತಾರೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಸಿಗುವ ಹಾಗೆ ನೋಡಿಕೊಳ್ಳಬೇಕು ಎಂದರು.

ಮಕ್ಕಳ ಮೇಲೆ ಹೆಚ್ಚು ಅಂಕ ಪಡೆಯುವಂತೆ ಒತ್ತಡ ಹಾಕಬಾರದು. ಬೇರೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ, ಆಸಕ್ತಿಗನುಗುಣವಾಗಿ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.

ನರ್ಸರಿ ವ್ಯಾಸಂಗ ಪೂರ್ಣಗೊಳಿಸಿದ ಯುಕೆಜಿ ಮಕ್ಕಳು ಸ್ವಾಮೀಜಿ ಅವರಿಂದ ಪದವಿ ಸ್ವೀಕರಿಸಿದರು. ಪುಟಾಣಿಗಳು ಮಾಡಿದ ನೃತ್ಯ ನೋಡುಗರ ಗಮನಸೆಳೆಯಿತು. ಬಿಜಿಎಸ್ ಪಬ್ಲಿಕ್ ಶಾಲೆ ಪ್ರಾಚಾರ್ಯ ಆರ್.ಮಹದೇವ್, ಪ್ರಾಧ್ಯಾಪಕರಾದ ಗಂಗಾಧರ್, ಮಧುಸೂದನ್, ಮುಖಂಡರಾದ ಕೆಂಪರೆಡ್ಡಿ, ಶಂಕರ್ ಮತ್ತಿತರರಿದ್ದರು.