ಮಕ್ಕಳ ಆರೋಗ್ಯದತ್ತ ಗಮನಹರಿಸಿ

ಹಾನಗಲ್ಲ: ಮಕ್ಕಳ ಉತ್ತಮ ಆರೊಗ್ಯಕ್ಕಾಗಿ ಬಾಲ್ಯದಿಂದಲೇ ವೈದ್ಯರ ಸಲಹೆ ಮೇರೆಗೆ ಲಸಿಕೆ ನೀಡಬೇಕು. ಕಲುಷಿತ ಆಹಾರ, ವಾತಾವರಣದಿಂದ ಮಕ್ಕಳ ಆರೊಗ್ಯ ಸೂಕ್ಷ್ಮವಾಗುತ್ತಿದೆ. ಪಾಲಕರು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.
ಹಾನಗಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಭಾನುವಾರ ಮಗುವಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕು ವೈದ್ಯಾಧಿಕಾರಿ ರವೀಂದ್ರಗೌಡ ಪಾಟೀಲ ವಿವರ ನೀಡಿ, ಹಾನಗಲ್ಲ ಪಟ್ಟಣದಲ್ಲಿ 3,386 ಮಕ್ಕಳಿವೆ. ತಾಲೂಕಿನ 42 ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 25,162 ಐದು ವರ್ಷದೊಳಗಿನ ಮಕ್ಕಳಿವೆ. ತಾಲೂಕಿನಲ್ಲಿ 166 ಬೂತ್​ಗಳಿದ್ದು, 332 ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಬಸ್ ನಿಲ್ದಾಣ, ಅಂಗನವಾಡಿ ಕೇಂದ್ರ ಅಲ್ಲದೆ, ಮನೆ-ಮನೆಗೆ ತೆರಳಿ ಪೊಲಿಯೋ ಲಸಿಕೆ ನೀಡಲಿದ್ದಾರೆ ಎಂದರು.
ಡಾ. ವೈ.ಎಸ್. ಹರೀಶ್, ಡಾ. ಎಸ್.ವೈ. ಹಾದಿಮನಿ, ಡಾ.ಕೆ.ಡಿ. ಬೊಮ್ಮನಹಳ್ಳಿ, ತಾಲೂಕು ಆರೋಗ್ಯ ಮೇಲ್ವಿಚಾರಕ ಎನ್.ಎಚ್.ನಿಂಗಪ್ಪ, ಸಂತೋಷ ಭಜಂತ್ರಿ, ಸಿ.ಎಸ್. ನೆಗಳೂರ, ಸಿ.ಪಿ. ಮೀನಾಕ್ಷಿ. ಎ.ಎಸ್. ರೇಣುಕಮ್ಮ, ಸುಭಾಸ ಚೊಗಚಿಕೊಪ್ಪ ಇತರರು ಉಪಸ್ಥಿತರಿದ್ದರು.