ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಅನಿರೀಕ್ಷಿತವಾಗಿ ಅಲ್ಲಿದ್ದ ಮಕ್ಕಳನ್ನು ಕಂಡು ಅವರ ಬಳಿ ಬಂದು ಅವರೊಂದಿಗೆ ಕೆಲಹೊತ್ತು ಮಾತನಾಡಿ, ಮಕ್ಕಳಲ್ಲಿ ಮಕ್ಕಳಾದ ಘಟನೆಗೆ ತೊಗರಿ ನಾಡು ಕಲಬುರಗಿ ಸಾಕ್ಷಿಯಾಯಿತು.
ವಿಧಾನ ಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಲು ಮಂಗಳವಾರ ಸಂಜೆ ನಗರದ ಪೊಲೀಸ್ ಮೈದಾನದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಸಿಂಧನೂರಿನಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಪ್ರಮುಖರು ಹಾಗೂ ಅಧಿಕಾರಿಗಳು ಬರ ಮಾಡಿಕೊಂಡ ನಂತರ ಕಾರ್ ಹತ್ತುವ ವೇಳೆಯಲ್ಲಿ ಹೆಲಿಪ್ಯಾಡ್ ಹೊರಗಡೆ ಕುತೂಹಲದಿಂದ ಜಾಲರಿಯ ಆಚೆ ನಿಂತುಕೊಂಡಿದ್ದ ಮಕ್ಕಳನ್ನು ಕಂಡು ಅವರತ್ತ ಹೆಜ್ಜೆ ಹಾಕಿದರು.
ಅಲ್ಲಿಂದ ಮಕ್ಕಳಿಗೆ ಏನು ಓದುತ್ತಿದ್ದಿರಿ, ಓದಿ ಮುಂದೇ ಏನಾಗಬೇಕು ಎಂದುಕೊಂಡಿರಿ ಎಂದು ಪ್ರಧಾನಿಗಳು ಪ್ರಶ್ನಿಸಿದರು. ಮೋದಿಯವರೆ ತಮ್ಮ ಹತ್ತಿರ ಬಂದು ಹೀಗೆ ಕೇಳುತ್ತಿರುವುದು ಕಂಡು ಮಕ್ಕಳು ಫುಲ್ ಖುಷ್ ಆದರು. ಅಲ್ಲದೆ ಮಕ್ಕಳು ಪೊಲೀಸರ ಮಕ್ಕಳೆಂದು ತಿಳಿದುಕೊಂಡರು.
ಮೋದಿಯವರು ಕೇಳಿದ ಪ್ರಶ್ನೆಗೆ ಅಲ್ಲಿ ಸೇರಿದ್ದ ಮಕ್ಕಳು ಉತ್ತರಿಸುತ್ತಾ ಕೆಲವರು ಆರ್ಮಿ ಸೇರಿ ದೇಶ ಸೇವೆ ಮಾಡುತ್ತೇನೆ ಎಂದರೆ, ಕೆಲವರು ಪೊಲೀಸರಾಗುತ್ತೇವೆ ಎಂದರು. ಇನ್ನೊಬ್ಬ ಡಾಕ್ಟರ್ ಆಗುತ್ತೇನೆ ಎಂದರು. ಈ ನಡುವೆ ಬಾಲಕನೊಬ್ಬ ಮೇ ಆಪ್ ಕಾ ಸೆಕ್ಯೂರಿಟಿ ಹೋತಾ ಹೂಂ ಎಂದಾಗ ಅಲ್ಲಿದ್ದವರೆಲ್ಲರು ಹೋ ಎಂದರು. ಅಲ್ಲದೆ ಮೋದಿಯವರು ವಾರೆವ್ಹಾ ಎಂದು ಹೇಳಿ, ಅದರ ಬದಲಿಗೆ ಸಿಎಂ, ಪಿಎಂ ಆಗುವ ಬಗ್ಗೆ ಯೋಚನೆ ಮಾಡು ಎಂದು ಕಿವಿಮಾತು ಹೇಳಿದರು. ಎಸ್‌ಪಿಜಿಯವರ ಸಲಹೆಯನ್ನು ಬದಿಗಿದಿರಿ ಹೆಲಿಪ್ಯಾಡ್‌ನಲ್ಲಿ ಮಕ್ಕಳೊಂದಿಗೆ ಕೆಲಹೊತ್ತು ಬೆರೆತರು.