Friday, 16th November 2018  

Vijayavani

Breaking News

ಮಕ್ಕಳೇಕೆ ಅಪರಾಧ ಲೋಕ ಪ್ರವೇಶಿಸುತ್ತಿದ್ದಾರೆ…?

Thursday, 07.12.2017, 3:02 AM       No Comments

ಮಕ್ಕಳು ಅಪರಾಧ ಲೋಕ ಪ್ರವೇಶಿಸುತ್ತಿರುವ ಬೆಳವಣಿಗೆ ಆತಂಕ ಹುಟ್ಟಿಸುವಂಥದ್ದು. ಮಕ್ಕಳು ಹೀಗೇಕಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಜತೆಗೆ ಬಾಲ್ಯಜಗತ್ತಿನಲ್ಲೂ ತಾಂಡವವಾಡುತ್ತಿರುವ ಅಸಮಾನತೆ ನಿವಾರಣೆಗೆ ಇಡೀ ಸಮಾಜ ಒಟ್ಟಾಗಿ ಶ್ರಮಿಸಬೇಕಿದೆ ಎಂಬುದನ್ನು ಮರೆಯುವಂತಿಲ್ಲ.

ತನ್ನ ಪರೀಕ್ಷೆ ಮತ್ತು ಪೋಷಕರ ಸಭೆ ಮುಂದೆ ಹೋಗಲಿ ಎಂಬ ಕ್ಷುಲ್ಲಕ ಕಾರಣಕ್ಕೆ ಹದಿನಾರರ ಹುಡುಗನೊಬ್ಬ ತನ್ನದೇ ಶಾಲೆಯ ಏಳು ವರ್ಷದ ಪುಟ್ಟ ಬಾಲಕನ ಕತ್ತು ಸೀಳಿ ಕೊಲೆಮಾಡಿರುವ ಆಘಾತಕಾರಿ ಘಟನೆ ಪ್ರತಿಯೊಬ್ಬರನ್ನೂ ದಿಗ್ಮೂಢರನ್ನಾಗಿಸಿದೆ. ಕೊಲೆ ಮಾಡಿದ ಬಾಲಕನಿಗೆ ಶಿಕ್ಷೆಯಾದ ಕೂಡಲೇ ಮುಗಿದು ಹೋಗುವಂತಹ ಸರಳ ಸಂಗತಿಯಲ್ಲ ಇದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಾಲಾಪರಾಧಗಳ ಸಂಖ್ಯೆ ಆತಂಕ ಹುಟ್ಟಿಸುವಂತಿದೆ. ಅತ್ಯಾಚಾರ, ಕೊಲೆ, ಕಳ್ಳತನದಂತಹ ಗಂಭೀರ ಪ್ರಕರಣಗಳಲ್ಲಿ ಭಾಗವಹಿಸುತ್ತಿರುವ ಹದಿಹರಯದವರು ಸಮಾಜಕ್ಕೆ ತಲೆನೋವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರಶ್ನೆ ಕ್ಲಿಷ್ಟವಾಗುತ್ತಲೇ ಸಾಗಿದೆ.

ತೀರ್ಥಹಳ್ಳಿಯ ಜಮೀನುದಾರರೊಬ್ಬರು ಹೇಳಿದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಮ್ಮ ಕೊಪ್ಪ ತೀರ್ಥಹಳ್ಳಿಯ ಸುತ್ತಮುತ್ತಲಿನ ತೋಟಗಳಲ್ಲಿ ದೂರದ ಬಯಲುಸೀಮೆಯ ಊರುಗಳಿಂದ ಜನರು ಕೆಲಸಕ್ಕೆ ಬರುತ್ತಾರೆ. ಹಾಗೆಯೇ ಇವರ ತೋಟಕ್ಕೆ ಕೆಲಸಕ್ಕೆ ಬಂದವರಲ್ಲಿ ಒಬ್ಬ ಹದಿಹರಯದ ಬಾಲಕನೂ ಇದ್ದನಂತೆ. ಹೆಚ್ಚೆಂದರೆ ಹದಿಮೂರು ವರ್ಷ ಇರಬಹುದು ಅವನಿಗೆ. ಸ್ಥಳೀಯ ಪ್ರೌಢ ಕೆಲಸದವರಂತೆಯೇ ಅವನಿಗೂ ಬುಟ್ಟಿ ತುಂಬಿ ಮಣ್ಣು ಹೊರೆಸಿದಾಗ ಅದನ್ನು ಹೊರಲಾರದೇ ಹೊತ್ತ ಅವನನ್ನು ನೋಡಿ ಇವರಿಗೆ ದುಃಖವಾಯಿತಂತೆ. ಅವನದೇ ವಯಸ್ಸಿನ ತನ್ನ ಮಗ ಶಾಲೆಗೆ ಹೋಗಲು ತಯಾರಾಗಿ ಮನೆಯಲ್ಲಿ ಬಿಸಿಬಿಸಿ ತಿಂಡಿ ತಿನ್ನುತ್ತ ಕುಳಿತಿರುವ ದೃಶ್ಯ ಹಾಗೂ ಈ ನಿರ್ಭಾಗ್ಯ ಬಾಲಕ ತನ್ನ ವಯಸ್ಸನ್ನು ಮೀರಿದ ಕೆಲಸ ಮಾಡುತ್ತಿರುವುದನ್ನು ಕಂಡಾಗ ಅವರಿಗೆ ತಡೆಯಲಾಗಲಿಲ್ಲ. ಆ ಹುಡುಗನನ್ನು ಕರೆದು ಕೇಳಿದಾಗ ತಂದೆ ತಾಯಿ ಇಬ್ಬರೂ ಕುಡಿತದ ಚಟಕ್ಕೆ ದಾಸರಾಗಿರುವುದಾಗಿಯೂ ಇಬ್ಬರು ಪುಟ್ಟ ತಂಗಿಯರು ಇರುವುದಾಗಿಯೂ ಅದಕ್ಕಾಗಿ ತಾನು ದುಡಿಯಲು ಬಂದುದಾಗಿಯೂ ಹೇಳಿದನಂತೆ. ಎಂಟನೇ ತರಗತಿಗೆ ಹದಿನೈದು ದಿನ ಹೋಗಿದ್ದ ಆತ ಶಾಲೆಬಿಟ್ಟು ದುಡಿಯಲು ಬಂದಿದ್ದ. ಅವನ ಕತೆ ಹೇಳುತ್ತಿದ್ದ ಇವರಿಗೆ ದುಃಖದಿಂದ ಕಣ್ಣಲ್ಲಿ ನೀರಿಳಿಯುತ್ತಿತ್ತು. ಇವರು ಶಾಲೆಗೆ ಸೇರಿಸಲು ಸಹಾಯ ಮಾಡುತ್ತೇನೆಂದರೂ ಆತ ಒಪ್ಪುತ್ತಿಲ್ಲ. ಆ ಪ್ರಯತ್ನದಲ್ಲಿದ್ದೇನೆ ಎಂದು ಬೇಸರದಿಂದಲೇ ಹೇಳಿದರು.

ಮಕ್ಕಳು ಕೇಳಿದ್ದನೆಲ್ಲ ಕ್ಷಣಾರ್ಧದಲ್ಲಿ ತೆಗೆಸಿಕೊಟ್ಟು ಅತಿಯಾದ ಮುದ್ದಿನಿಂದ ಮಕ್ಕಳನ್ನು ಹಾಳುಮಾಡಿ ಅವರು ಸಮಾಜ ಕಂಟಕರಾಗುವ ಹಾಗೆ ಮಾಡುವ ಪಾಲಕರು ಒಂದು ಕಡೆ, ಇನ್ನೊಂದೆಡೆ ಪಾಲಕರ ಬೇಜವಾಬ್ದಾರಿತನದಿಂದ ಬೇರೆ ದಾರಿ ಕಾಣದೇ ವಯಸ್ಸಿಗೆ ಮೀರಿದ ಕೆಲಸ ಮಾಡಹೊರಡುವ ಮಕ್ಕಳು ಇನ್ನೊಂದೆಡೆ. ಬೇಡ ಬೇಡವೆಂದರೂ ಆಹಾರ ಬಾಯಿಗೆ ತುರುಕಲ್ಪಡುವ ಮಕ್ಕಳು ಮತ್ತು ಶಾಲೆಯಲ್ಲಿ ಸಿಗುವ ಹಾಲು, ಬಿಸಿಯೂಟ ಬಿಟ್ಟರೆ ಬೇರೇನೂ ತಿನ್ನಲು ಇರದ ಮಕ್ಕಳು ಇವೆರಡು ಅತಿಗಳು ಕಣ್ಣಿಗೆ ರಾಚುವಂತಿವೆ. ಮತ್ತೊಂದೆಡೆ ಪಾಲಕರೇ ತಮ್ಮ ಮಕ್ಕಳನ್ನು ದುಡಿತಕ್ಕೆ ಕಳುಹಿಸುವುದು ಮಾಮೂಲು. ಬಾಲಕಾರ್ವಿುಕರನ್ನು ಇಟ್ಟುಕೊಂಡರೆ ಶಿಕ್ಷೆ ವಿಧಿಸಲಾಗುವುದು ಎಂಬ ಫಲಕದ ಕೆಳಗೇ ದುಡಿಯುತ್ತಿರುವ ಮಕ್ಕಳ ಚಿತ್ರಗಳು ಪರಿಸ್ಥಿತಿಯ ವ್ಯಂಗ್ಯಕ್ಕೆ ಸಾಕ್ಷಿ.

ಹೆಣ್ಣುಮಕ್ಕಳು ಮನೆಯ ಕೆಲಸಕ್ಕೆ, ಮಗುವನ್ನು ನೋಡಿಕೊಳ್ಳಲು ಕಳುಹಿಸಲ್ಪಟ್ಟರೆ, ಗಂಡುಮಕ್ಕಳು ಹೋಟೇಲು, ಕಾರ್ಖಾನೆ ಮುಂತಾದ ಅಪಾಯಕಾರಿ ಸ್ಥಳಗಳಲ್ಲಿ ದುಡಿಯುತ್ತಾರೆ. ಇಂತಹ ಮಕ್ಕಳಿಗೆ ಕೆಲಸದ ಸ್ಥಳದಲ್ಲಿ ಪ್ರೀತಿ ಹೋಗಲಿ, ಕನಿಷ್ಠ ಸೌಲಭ್ಯಗಳಿಗೂ ತತ್ವಾರ. ಹೊಡೆತ ಬಡಿತ ಮಾಮೂಲಿ. ಅದರಿಂದ ಬಚಾವಾಗಲು ಇಂತಹ ಮಕ್ಕಳು ಓಡಿಹೋಗುತ್ತಾರೆ. ತಾವು ಬಾಣಲೆಯಿಂದ ಬೆಂಕಿಗೆ ಬಂದಿದ್ದೇವೆಂದು ಗೊತ್ತಾಗುವ ವೇಳೆಗೆ ಅವರು ಅಪರಾಧ ಲೋಕ ಪ್ರವೇಶಿಸಿಯಾಗಿರುತ್ತದೆ. ಒಮ್ಮೆ ಅದರೊಳಗೆ ಹೋದವರಿಗೆ ವಾಪಾಸಾಗಲು ಹಾದಿ ಮುಚ್ಚಿಹೋಗಿರುವ ಸತ್ಯ ಎಲ್ಲರಿಗೂ ಗೊತ್ತಿದ್ದದ್ದೇ. ತಂದೆ-ತಾಯಿ ಇಲ್ಲದ, ಇದ್ದರೂ ಕಡುಬಡತನದಲ್ಲಿರುವ ಅಥವಾ ಪಾಲಕರು ದುಶ್ಚಟಗಳಿಗೆ ದಾಸರಾಗಿರುವ ಕುಟುಂಬಗಳ ಮಕ್ಕಳು ಅದರಲ್ಲೂ ಹೆಚ್ಚಾಗಿ ಕೊಳೆಗೇರಿ ನಿವಾಸಿಗಳ ಮಕ್ಕಳು ಈ ರೀತಿಯ ಅಪರಾಧಿ ಪ್ರವೃತ್ತಿ ಬೆಳೆಸಿಕೊಳ್ಳುವ ಸಾಧ್ಯತೆಗಳು ಜಾಸ್ತಿ. ಈ ನಿಟ್ಟಿನಲ್ಲಿ ನಾವು ಕೈಗೊಳ್ಳಬೇಕಾದ ಕ್ರಮಗಳು ಬಹಳವಿವೆ. ಹಾಗಾಗಿಯೇ ‘ಭಾರತದಲ್ಲಿ ಬಡತನ ಎಲ್ಲಿದೆ’ ಎಂದು ಫಿಂಗರ್ ಚಿಪ್ಸ್ ಮೆಲ್ಲುತ್ತಾ ಮಾತಾಡುವ ಜನರು ಅಸಹ್ಯ ಮತ್ತು ದುಃಖವನ್ನು ಒಟ್ಟಿಗೇ ಮೂಡಿಸುತ್ತಾರೆ.

ಹಾಂ, ಈ ಮೇಲೆ ಹೇಳಿದ, ಗುರುಗ್ರಾಮದಲ್ಲಿ ನಡೆದ ಏಳರ ಬಾಲಕ ಪ್ರದ್ಯುಮ್ನನ ಕೊಲೆ, ಮಕ್ಕಳು ಅಪರಾಧಲೋಕಕ್ಕೆ ಪ್ರವೇಶಪಡೆಯುವ ಮತ್ತೊಂದು ಗಂಭೀರವಾದ ಸಾಧ್ಯತೆಯನ್ನು ಅನಾವರಣಗೊಳಿಸಿದೆ. ಭಯ ಹುಟ್ಟಿಸುವ ಸಂಗತಿಯೆಂದರೆ ಆ ಬಾಲಕ ಬಹಳ ಒರಟುತನದವನೆಂದೂ, ಯಾವಾಗಲೂ ತನ್ನ ಸ್ನೇಹಿತರನ್ನು ಹೊಡೆಯುತ್ತಿದ್ದನೆಂದೂ ಹೆಸರುಹೇಳಲು ಬಯಸದ ಅವನ ಸಹಪಾಠಿಗಳು ಹೇಳುತ್ತಾರೆ. ಆತನ ನೆರೆಹೊರೆಯವರಲ್ಲೂ ಆತನ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ನಿನ್ನೆ ಮೊನ್ನೆಯಷ್ಟೇ ಹಾಲುಗಲ್ಲದ ಹಸುಳೆಗಳಾಗಿದ್ದ, ಕೊಂಚ ತುಂಟರಾಗಿದ್ದ ಈ ಪುಟ್ಟ ಮಕ್ಕಳು ಅಪರಾಧಿಗಳಾಗುವುದಾದರೂ ಹೇಗೆ? ಇದಕ್ಕೆ ಮಕ್ಕಳು ಮಾತ್ರ ಜವಾಬ್ದಾರರೇ? ನಮಗೆ ಸಂಬಂಧವೇ ಇಲ್ಲ ಎಂದು ಬೆನ್ನು ತಿರುಗಿಸಿ ಹೋಗಬಹುದೇ ನಾವು? ಮೊನ್ನೆ ಮೊನ್ನೆಯವರೆಗೂ ‘ಅಮ್ಮಾ ನಮ್ಮ ಮಿಸ್ ಹಾಗೆ ಮಾಡಿದ್ರು, ಹೀಗೆ ಮಾಡಿದ್ರು’ ಎಂದು ಶಾಲೆಯ ಪ್ರತೀ ಸುದ್ದಿಯನ್ನೂ ಹೇಳುತ್ತಿದ್ದ ಮಗು ನೋಡನೋಡುತ್ತಲೇ ಮೌನವಾಗಿ ಮೊಬೈಲ್ ಹಿಡಿದುಕೊಂಡು ಸಾಯುವ ಆಟ ಆಡುತ್ತ ಸೆಲ್ಪಿ ತೆಗೆದುಕೊಳ್ಳುತ್ತಲೇ ಆತ್ಮಹತ್ಯೆ ಮಾಡಿಕೊಳ್ಳುವ ಹಾಗಾಗುತ್ತದೆಂದರೆ! ಹದಿನೆಂಟು ತುಂಬುವುದರೊಳಗೆ ಮೊಬೈಲ್ ಕೊಡಿಸುವ ಪಾಲಕರೇ ಕೊಲೆಗಾರರಲ್ಲವೇ? ಹಾಂ, ನಮ್ಮ ಮಗ/ಮಗಳು ಅಂಥವನಲ್ಲ ಎಂದೇ ಎಲ್ಲರೂ ಅಂದುಕೊಳ್ಳುವುದು, ಆತ್ಮಹತ್ಯೆ ಮಾಡಿಕೊಂಡ ಸಾವಿರಾರು ಮಕ್ಕಳ ಪಾಲಕರಂತೆ. ಮಕ್ಕಳು ವೇಗವಾಗಿ ಬೈಕ್ ಓಡಿಸುವುದನ್ನು ನೋಡಿ ಹೆಮ್ಮೆ ಪಡುವ ಪಾಲಕರಿಗೂ ಈ ಮಾತು ಅನ್ವಯಿಸುತ್ತದೆ. ಯಾವುದೋ ದೇಶದಲ್ಲಿ ನಡೆಯುತ್ತಿದ್ದ, ನಾವು ಎಲ್ಲಿಯೋ ಓದುತ್ತಿದ್ದ ಘಟನೆಗಳು ಇದೀಗ ನಮ್ಮ ಅಂಗಳಕ್ಕೂ ಕಾಲಿಟ್ಟಿವೆ ಎಂದರೆ ಎಲ್ಲೋ ನಾವು ಎಡವುತ್ತಿದ್ದೇವೆ ಎಂದೇ ಅರ್ಥ.

ಈ ಕುರಿತು ಯೋಚಿಸುತ್ತಿರುವಾಗಲೇ ಕರ್ನಾಟಕ ಸರ್ಕಾರ ಹಾಗೂ ಯೂನಿಸೆಫ್ ಜಂಟಿಯಾಗಿ ಪ್ರಕಟಿಸಿರುವ ಹಸೆ ಚಿತ್ರದ ಚೆಂದದ ಮುಖಪುಟದ ‘ಪುಟ್ಟ ಹೆಜ್ಜೆ ಸದ್ದು ಕೇಳಿ’ ಎಂಬ ಪುಸ್ತಕವೊಂದು ಓದಲು ಸಿಕ್ಕಿತು. ದೇಶದ ಜನಸಂಖ್ಯೆಯ ಶೇಕಡ ಮೂವತ್ತೊಂಭತ್ತರಷ್ಟಿರುವ ಹದಿನೆಂಟು ವರ್ಷದೊಳಗಿನ ಮಕ್ಕಳ ಸಂರಕ್ಷಣೆಯ ಕುರಿತು ಕನ್ನಡನಾಡಿನ ಅನೇಕ ಗಣ್ಯರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ. ಮಕ್ಕಳ ಮೇಲಿನ ಗೋಚರ, ಅಗೋಚರ ದೌರ್ಜನ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಪುಟ್ಟ ಹೆಜ್ಜೆ ಸದ್ದನ್ನು ಕೇಳಲೇಬೇಕಾದ ಅನಿವಾರ್ಯತೆಯನ್ನು ಈ ಲೇಖನಗಳು ವಿವರಿಸುತ್ತವೆ. ಮಕ್ಕಳ ಅಪಹರಣ, ಕೊಳೆಗೇರಿಯ ಮಕ್ಕಳ ದುರವಸ್ಥೆ, ಉತ್ತರ ಕರ್ನಾಟಕದಿಂದ ಗುಳೇಹೋಗುವ ಕೂಲಿಕಾರ್ವಿುಕರ ಮಕ್ಕಳು, ಮಹಾನಗರಗಳಲ್ಲಿ ಮಾಯವಾಗಿ ಪಾಲಕರು ಮಕ್ಕಳನ್ನು ಕಳೆದುಕೊಂಡು ಊರಿಗೆ ವಾಪಾಸಾಗುವುದು, ರೇಶ್ಮೆಗೂಡು ಕುದಿಸುವ ಫಿಲೇಚರ್ ಘಟಕಗಳಲ್ಲಿ ಕೆಲಸಮಾಡುವ ಕೈಕಾಲುಗಳಿಗೆ ವ್ರಣವಾದ ಎಳೆಯ ಬಾಲೆಯರು, ಬಡ ಹುಡುಗಿಯರನ್ನು ವ್ಯವಸ್ಥಿತವಾಗಿ ಮಾರಾಟಮಾಡುವ ‘ಗುಜ್ಜರ್’ ವಿವಾಹ ಜಾಲ, ರೇಸ್​ನ ಕುದುರೆಗಳನ್ನು ತಯಾರುಮಾಡುವಂತೆ ಮಕ್ಕಳನ್ನು ತಯಾರು ಮಾಡಿ ಅವರನ್ನು ಬ್ಯಾಂಕ್ ಠೇವಣಿಯಂತೆ ಕಂಡು ತಾವು ಖರ್ಚು ಮಾಡಿದ್ದರ ಹತ್ತು ಪಟ್ಟು ವಾಪಾಸ್ ಬಯಸುವ ‘ವಿದ್ಯಾವಂತ’ ತಂದೆ-ತಾಯಿಯರು, ಹೆಣ್ಣುಮಕ್ಕಳನ್ನು ತೊಟ್ಟಿಲಿನಿಂದ ನೇರವಾಗಿ ವೇಶ್ಯಾವಾಟಿಕೆಗೆ ಸಾಗಿಸುವ ಜಾಲಗಳು, ಬಾಲಕಾರ್ವಿುಕರನ್ನು ತುಂಬಿಕೊಂಡು ಹತ್ತಿಯ ಹೊಲದೆಡೆಗೆ ಹೊರಟ ನೂರಾರು ಟಂಟಂಗಳು, ಮಗನನ್ನು ದುಡಿಯಲು ಕಳಿಸಿ ಚಹಾದಂಗಡಿಯ ಮುಂದೆ ಹರಟೆ ಹೊಡೆಯುವ ಅಪ್ಪ, ‘ಚಿನ್ನದ ಮೊಟ್ಟೆಯಿಡುವ ಕೋಳಿ’ ಬಾಲನಟನಾಗಿದ್ದ ಮಗ ದೊಡ್ಡವನಾದರೆ ಆದಾಯ ತಪ್ಪಿ ಹೋಗುತ್ತದೆಂದು ಆತನ ಬೆಳವಣಿಗೆಯೇ ಕುಂಠಿತವಾಗುವಂತೆ ಹಾಮೋನ್ ಇಂಜೆಕ್ಷನ್ ಕೊಡಿಸಿ ದೈಹಿಕ-ಮಾನಸಿಕವಾಗಿ ಮಗನ ಬೆಳವಣಿಗೆಯನ್ನೇ ಕುಂಠಿತಗೊಳಿಸಿದ ಪಾಲಕರು, ಮಕ್ಕಳು ಟಿವಿಯಲ್ಲಿ ಬರಲೇಬೇಕೆಂದು ಅವರನ್ನು ಶೋಷಿಸುವ ಪಾಲಕರು, ಬೀಡಿ ಕಟ್ಟುವ, ಪಟಾಕಿ ತಯಾರಿಸುವ ಉದ್ದಿಮೆಗಳಲ್ಲಿ, ಹೋಟೆಲ್​ಗಳಲ್ಲಿ, ಕೃಷಿಯಲ್ಲಿ ಎಲ್ಲೆಲ್ಲೂ ಗುಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ವಿುಕರು… ಇಂತಹ ಹಲವಾರು ಜ್ವಲಂತ ಸಮಸ್ಯೆಗಳ ಕುರಿತು ಲೇಖಕರು ರ್ಚಚಿಸಿದ್ದಾರೆ. ಇಂತಹ ಆಘಾತಕಾರಿ ವಾಸ್ತವ ಓದುಗರಲ್ಲಿನ ಮನುಷ್ಯತ್ವವನ್ನು ಹೊಡೆದೆಬ್ಬಿಸುವುದಂತೂ ಹೌದು.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದು ನಿಜ. ಆದರೆ ಇಂದೂ ಅವರು ಪ್ರಜೆಗಳೇ. ಒಂದು ಮುಷ್ಠಿ ಕಾಳಜಿ ಜಾಸ್ತಿಯೇ ಬೇಕಿರುವ ಪ್ರಜೆಗಳು. ದೊಡ್ಡವರಿಗೆ ಸಿಗುವ ಎಲ್ಲ ನಾಗರಿಕ ಹಕ್ಕುಗಳೂ ಅವರಿಗೆ ಸಿಗಬೇಕು. ಒಂದೆಡೆ ಸವಲತ್ತು ಹೆಚ್ಚಾಗಿ ಅದರಿಂದ ತೊಂದರೆಗೊಳಗಾಗುತ್ತಿರುವ ಮಕ್ಕಳು, ಇನ್ನೊಂದೆಡೆ ಕನಿಷ್ಠ ಸೌಲಭ್ಯವೂ ಇಲ್ಲದೇ ನರಳುತ್ತಿರುವ ಚಿಣ್ಣರು! ಇವೆರಡನ್ನೂ ಸರಿದೂಗಿಸಿಕೊಂಡು ಹೋಗುವುದು ಹೇಗೆ? ಉತ್ತರ ಹುಡುಕುವ ಜವಾಬ್ದಾರಿ ನಮ್ಮೆಲ್ಲರದ್ದೂ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

Leave a Reply

Your email address will not be published. Required fields are marked *

Back To Top