ಬೆಳಗಾವಿ: ರಾಜ್ಯದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ದಾನಿಗಳೂ ಕೈಜೋಡಿಸಿದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಸುವರ್ಣಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ಲೋಗೋ ಅನಾವರಣ,ದಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ನಮ್ಮ ಶಾಲೆ ನವ್ಮ ಜವಾಬ್ದಾರಿ’ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬಹುದಾಗಿದೆ. ಸಿಎಂ ಸಿದ್ದರಾಮಯ್ಯ ಅವರು ತಾವು ಕಲಿತ ಸಿದ್ದರಾಮನಹುಂಡಿಯ ಸರ್ಕಾರಿ ಶಾಲೆಗೆ ತಮ್ಮ ಸಂಬಳದಿಂದ ಹತ್ತು ಲಕ್ಷ ರೂ. ದಾನ ನೀಡಿದ್ದು ಎಲ್ಲ ಶಾಸಕ ಸಚಿವರಿಗೆ ಪ್ರೇರಣೆಯಾಗಿದೆ. ದಾನಿಗಳು ಸ್ವಯಂ ಪ್ರೇರಿತರಾಗಿ ಸಹಾಯ ಮಾಡಿದಲ್ಲಿ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಉಜ್ವಲಗೊಳಿಸಬಹುದಾಗಿದೆ ಎಂದರು.
ಶಾಲಾ ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜತೆಗೆ ಪೌಷ್ಟಿಕ ಆಹಾರ ನೀಡುವುದು ಸರ್ಕಾರದ ಧ್ಯೇಯ. ಹಾಗಾಗಿ, ಅಜೀಂ ಪ್ರೇಮಜಿ ಫೌಂಡೇಷನ್ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಮೊಟ್ಟೆಯನ್ನು ಆರು ದಿನವೂ ವಿತರಿಸುವ ಕಾರ್ಯಕ್ರಮಕ್ಕೆ ಸೆ.25 ರಂದು ಯಾದಗಿರಿಯಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶಿಕ್ಷಕರು ತಮ್ಮ ಶಾಲೆಗೆ ಒಂದು ತಿಂಗಳ ಸಂಬಳವನ್ನು ದಾನವಾಗಿ ನೀಡಿದಲ್ಲಿ ಇತರರೂ ಪ್ರೇರಪಣೆಗೊಂಡು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಮಾತನಾಡಿ, ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರಲು ಶಿಕ್ಷಣ ಸಚಿವರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನೀಡುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸಮಾಜ, ದೇಶ ಬೆಳೆಯಬೇಕಾದರೆ ಸರ್ಕಾರಿ ಸ್ವಾಮ್ಯದ ಶಾಲೆಗಳನ್ನು ಉಳಿಸಿ, ಬೆಳೆಸಬೇಕು. ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದರು.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಅಂಗವಾಗಿ ಶಾಲೆಗಳಿಗೆ ದಾನ ಮಾಡಿದ ದಾನಿಗಳಿಗೆ ಸನ್ಮಾನಿಸಲಾಯಿತು.
ಶಾಸಕರಾದ ಎಂ.ನರೇಂದ್ರಸ್ವಾಮಿ, ಬಸವರಾಜ ಶಿವಣ್ಣವರ, ಮಹಾಂತೇಶ ಕೌಜಲಗಿ, ಆಸೀಫ್ ಸೇಠ್, ವಿಠ್ಠಲ ಹಲಗೇಕರ, ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಎಂಎಲ್‌ಸಿ ಪ್ರಕಾಶ ಹುಕ್ಕೇರಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ ಕುಮಾರ ಸಿಂಗ್, ಆಯುಕ್ತೆ ಕಾವೇರಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ ಶಿಂಧೆ, ಡಿಡಿಪಿಐಗಳಾದ ಲೀಲಾವತಿ ಹಿರೇಮಠ, ಬಸವರಾಜ ನಾಲತವಾಡ ಇತರರಿದ್ದರು.