ಮಕ್ಕಳಿಗೆ ಈಜು ಕಲಿಯಲು ಪ್ರೋತ್ಸಾಹಿಸಿ

ಚಿಕ್ಕಬಳ್ಳಾಪುರ: ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಈಜು ಕಲಿಯಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ಹೇಳಿದರು.

ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ರಜೆ ಈಜು ಕಲಿಕೆ ಶಿಬಿರ ಸಮಾರೋಪದಲ್ಲಿ ಮಾತನಾಡಿದರು. ಈಜು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ. ಇದಕ್ಕೆ ಎಲ್ಲ ವಯಸ್ಸಿನವರೂ ಈಜನ್ನು ಕಲಿಯುವುದು ಒಳ್ಳೆಯದು ಎಂದರು.

ಮಕ್ಕಳು ಓದಿನ ಜತೆಯಲ್ಲಿ ಕಲೆ, ನಿರ್ವಹಣೆ, ಕೌಶಲ ಬೆಳೆಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು. ಸುತ್ತಲಿನ ಬೆಳವಣಿಗೆಗಳ ಕುರಿತು ಕಾಲ ಕಾಲಕ್ಕೆ ತಿಳಿದುಕೊಂಡು ಹೊಂದಿಕೊಳ್ಳುವ ಗುಣ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಈಜು ಬಾರದ ಹಿನ್ನೆಲೆಯಲ್ಲಿ ಅನೇಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆಗಳು ನಡೆದಿವೆ. ಆದರೆ, ಈಜು ಕಲಿಕೆಯಿಂದ ಸ್ವಯಂ ಪ್ರಾಣ ರಕ್ಷಣೆ ಜತೆಗೆ ಇತರರ ಪ್ರಾಣವನ್ನು ಉಳಿಸಬಹುದು. ಇದಕ್ಕೆ ಪಾಲಕರು ಮಕ್ಕಳಿಗೆ ಈಜು ಕಲಿಯಲು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.

ಹಾಕಿ ತರಬೇತುದಾರ ಮುಸ್ತಾಕ್ ಅಹಮದ್ ಮಾತನಾಡಿ, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಕೌಶಲವನ್ನು ಕರಗತ ಮಾಡಿಕೊಂಡು ಪ್ರತಿಭಾವಂತರಾಗಿ ರೂಪುಗೊಳ್ಳಬೇಕು ಎಂದರು. ಈಜು ತರಬೇತುದಾರ ಪುಂಡಲೀಕ, ದೈಹಿಕ ಶಿಕ್ಷಣ ತರಬೇತಿ ಶಿಕ್ಷಕ ಮಾರುತಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *