More

  ಮಕ್ಕಳಿಗೆ ‘ಇಲ್ಲ’ ಎಂಬುದನ್ನು ಕಲಿಸಬೇಕು

  ಹುಬ್ಬಳ್ಳಿ: ಮಕ್ಕಳು ಕೇಳಿದ್ದನ್ನೆಲ್ಲ ಪಾಲಕರು ಕೊಡಿಸುತ್ತಾರೆ. ಇಲ್ಲದಿದ್ದರೂ ಸಹಿಸಿಕೊಳ್ಳಬೇಕು ಎಂಬುದನ್ನು ಕಲಿಸುವುದಿಲ್ಲ. ಇದರಿಂದಾಗಿ ಮಕ್ಕಳು ಬಹುಬೇಗ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾಗಿ, ಮಕ್ಕಳಿಗೆ ‘ಇಲ್ಲ’ಗಳ ಮಧ್ಯೆ ಬದುಕುವುದನ್ನು ಕಲಿಸಬೇಕಿದೆ ಎಂದು ಅಸಿಸ್ಟಂಟ್ ಸಾಲಿಸಿಟರ್ ಜನರಲ್ ಅರುಣ ಜೋಶಿ ಸಲಹೆ ನೀಡಿದರು.

  ಇಲ್ಲಿನ ಬಿವಿಬಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ, ಹಿರಿಯ ವಕೀಲ ಸುಧೀಂದ್ರ ದೇಶಪಾಂಡೆ ನೇತೃತ್ವದ ‘ರಿಸಲ್ಟ್ ಕನ್ಸಲ್ಟನ್ಸಿ ಸರ್ವೀಸ್ ಪ್ರೖೆವೇಟ್ ಲಿಮಿಟೆಡ್’ ಕಂಪನಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

  ರಿಸಲ್ಟ್ ಕನ್ಸಲ್ಟನ್ಸಿ ಸರ್ವೀಸ್ ಸಂಸ್ಥಾಪಕ ಸುಧೀಂದ್ರ ದೇಶಪಾಂಡೆ ಮಾತನಾಡಿ, ನಮ್ಮ ಸಂಸ್ಥೆ ಶಿಕ್ಷಣ, ರಾಜಕೀಯ, ಕಾನೂನು ಸಲಹೆ, ಆರೋಗ್ಯ, ಕೃಷಿ, ಜ್ಯೋತಿಷ್ಯಶಾಸ್ತ್ರ, ಆರ್ಥಿಕ ಸಲಹಾ ಸೇವೆ ನೀಡಲಿದೆ. ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರು ಸೂಕ್ತ ತರಬೇತಿ ನೀಡಲಿದ್ದಾರೆ ಎಂದರು.

  20, 30 ವರ್ಷಗಳ ಹಿಂದೆ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿಗಳು ಇಂದು ದೊಡ್ಡ ದೊಡ್ಡ ಕಂಪನಿಗಳಲ್ಲಿ ನೌಕರಿ ಮಾಡುತ್ತಿದ್ದಾರೆ. ಶೇ. 50, 60 ಅಂಕ ಪಡೆದಿದ್ದವರು ಇಂದು ದೊಡ್ಡ ದೊಡ್ಡ ಕಂಪನಿಗಳನ್ನೇ ನಡೆಸುತ್ತಿದ್ದಾರೆ. 30, 35 ಅಂಕ ಪಡೆದು ಫೇಲ್ ಆಗಿದ್ದವರು ಇಂದು ಶಾಸಕ, ಸಂಸದ, ಸಚಿವರಾಗಿ ನಮ್ಮನ್ನು ಆಳುತ್ತಿದ್ದಾರೆ. ಶಿಕ್ಷಣದ ಮರ್ಮವೇನು ? ನಿಜವಾದ ಶಿಕ್ಷಣ ಹೇಗಿರಬೇಕು ? ಎಂಬಿತ್ಯಾದಿ ಅಂಶಗಳನ್ನು ತಿಳಿಸುವುದಕ್ಕಾಗಿಯೇ ನಮ್ಮ ಕಂಪನಿ ಶಿಕ್ಷಣ ಕ್ಷೇತ್ರಕ್ಕೆ ತೆರೆದುಕೊಂಡಿದೆ ಎಂದರು.

  ಧಾರವಾಡದ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಕಂಪನಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪಿಎಚ್​ಡಿ ಮಾಡಿದವರಿಂದ ಹಿಡಿದು ಚಿಕ್ಕಮಕ್ಕಳವರೆಗೆ ಇಂದು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಶಿಕ್ಷಣದಲ್ಲಿಯ ಕೊರತೆ. ಎಲ್ಲದಕ್ಕೂ ಮೂಲ ಶಿಕ್ಷಣವಾಗಿದ್ದು, ಯಾವುದೇ ವಿಷಯವನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೆ, ಧನಾತ್ಮಕವಾಗಿ ಸ್ವೀಕರಿಸಬೇಕು. ಸಮಾನ ಮನಸ್ಕರೊಂದಿಗೆ ಚರ್ಚೆ, ಸಂವಾದಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದ್ದು, ಕನ್ಸಲ್ಟನ್ಸಿ ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದರು.

  ಕರ್ನಾಟಕ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಡಾ.ಎ.ಎಸ್. ಶಿರಾಳಶೆಟ್ಟಿ, ಪ್ರೊ. ಡಾ. ಹರೀಶ ರಾಮಸ್ವಾಮಿ, ವಿದ್ಯಾಭಾರತಿ ಸಂಸ್ಥೆಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಲಾ, ಪ್ರೇರಣಾ ಪ್ರಾರ್ಥಿಸಿದರು. ಸಂಜಿತ್ ಕಡಕೋಳ ಸ್ವಾಗತಿಸಿದರು. ಸಂತೋಷ ಜೋಶಿ ನಿರೂಪಿಸಿದರು.

  ಅವಳಿ ನಗರದಲ್ಲಿ ಡ್ರಗ್ಸ್ ಜಾಲ !

  ಈ ಹಿಂದೆ ಡ್ರಗ್ಸ್ ಹಾವಳಿಗೆ ಪಂಜಾಬ್ ನಲುಗಿ ಹೋಗಿತ್ತು. ಇದೀಗ ಹೈದರಾಬಾದ್​ನಲ್ಲಿ ಸಾವಿರಾರು ಯುವಕರು ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದಾರೆ. ಪೊಲೀಸರು ಈ ಜಾಲ ತಡೆಯುವಲ್ಲಿ ವಿಫಲರಾಗಿದ್ದಾರೆ. ಸುಮ್ಮನಿದ್ದರೆ ನಾಳೆ ನಮ್ಮ ನಿಮ್ಮ ಮಕ್ಕಳು ಬಲಿ ಆದರೂ ಅಚ್ಚರಿಯಿಲ್ಲ ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್ ಆತಂಕ ವ್ಯಕ್ತಪಡಿಸಿದರು. ಹುಬ್ಬಳ್ಳಿ- ಧಾರವಾಡದಲ್ಲೂ ಡ್ರಗ್ಸ್ ಬಹಳ ದೊಡ್ಡ ಪಿಡುಗಾಗಿ ಪರಿಣಮಿಸುತ್ತಿದೆ ಎಂದು ಅರುಣ ಜೋಶಿ ತಮ್ಮ ಭಾಷಣದಲ್ಲಿ ಆತಂಕ ವ್ಯಕ್ತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts