ಮಕ್ಕಳನ್ನು ಸಮಾಜದ ಸ್ವತ್ತಿನಂತೆ ಬೆಳೆಸಿ

ದೇವನಹಳ್ಳಿ: ಮಕ್ಕಳನ್ನು ಸಮಾಜದ ಸೊತ್ತಾಗಿ ಬೆಳೆಸಬೇಕೇ ವಿನಃ ಸಮಾಜಕ್ಕೆ ಕುತ್ತಾಗುವಂತೆ ಬೆಳೆಸಬಾರದು ಎಂದು ನ್ಯಾಯಾಧೀಶ ಪಿ.ಕೃಷ್ಣಭಟ್ ಹೇಳಿದರು.

ತಾಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸಹಯೋಗದಲ್ಲಿ ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು ಮತ್ತು ಸವೋದಯ ಸರ್ವೀಸ್ ಸೊಸೈಟಿಯ ಸ್ವಯಂ ಸೇವಕರಿಗೆ ಏರ್ಪಡಿಸಿದ್ದ ಬಚ್​ಪನ್ ಬಚಾವೋ ಆಂದೋಲನದಡಿ ಮಕ್ಕಳ ರಕ್ಷಣೆ ಕುರಿತ ಕಾನೂನು ಅರಿವು ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಾಲ್ಯದಿಂದಲೇ ಮಕ್ಕಳ ಚಟುವಟಿಕೆ ಬಗ್ಗೆ ನಿಗಾ ವಹಿಸಬೇಕು. ಮಕ್ಕಳ ಹಕ್ಕು ಮತ್ತು ರಕ್ಷಣೆ, ಮಗು ಗರ್ಭಾವಸ್ಥೆಯಲ್ಲಿರುವಾಗಿನಿಂದಲೇ ಸರ್ಕಾರ ಸಹ ಅದರ ರಕ್ಷಣೆ, ಪಾಲನೆ, ಪೌಷ್ಟಿಕ ಆಹಾರ ನೀಡುವುದು, ಕಾಲಕಾಲಕ್ಕೆ ಚುಚ್ಚುಮದ್ದು, ಶಿಕ್ಷಣ ಸೇರಿ ಮುಂದಾದ ಸೌಲಭ್ಯ ಒದಗಿಸಲು ಹಲವು ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ದೇಶದಲ್ಲಿ ಮಕ್ಕಳ ಬಗ್ಗೆ ಅಧ್ಯಯನ ನಡೆಸಿರುವ ವರದಿ ಪ್ರಕಾರ ಬಹಳಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಮಕ್ಕಳ ಆರೋಗ್ಯಕ್ಕೆ ಹುಟ್ಟಿದ ಕ್ಷಣದಿಂದಲೇ ಸ್ತನ್ಯಪಾನ ಮಾಡಿಸುವುದು ಮುಖ್ಯ. ಉತ್ತಮ ಆರೋಗ್ಯ ಹೊಂದಲು ಪರಿಸರ ಸ್ವಚ್ಛತೆ ಮುಖ್ಯ. ಈ ಬಗ್ಗೆ ಪಾಲಕರಲ್ಲಿ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋಮಸುಂದರ್ ಮಾತನಾಡಿ, ಈ ಹಿಂದೆ ಅಪೌಷ್ಟಿಕತೆಯಿಂದ ಒಂದು ವರ್ಷದೊಳಗಿನ 1 ಸಾವಿರದ ಮಕ್ಕಳಲ್ಲಿ 236 ಮಕ್ಕಳು ಸಾವಿಗೀಡಾಗುತ್ತಿದ್ದರು. ಈಗ ಅದರ ಪ್ರಮಾಣ 20ಕ್ಕೆ ಇಳಿದಿದೆ. ಇದಕ್ಕೆ ಸರ್ಕಾರ ಗರ್ಬಾವಸ್ಥೆಯಿಂದಲೇ ಮಕ್ಕಳಿಗೆ ನೀಡುವ ಚುಚುಮದ್ದು ಪೌಷ್ಟಿಕ ಆಹಾರ ಕಾರಣ ಎಂದರು.

ಸಂಪನ್ಮೂಲವ್ಯಕ್ತಿ ಬಿನು ವರ್ಗೀಸ್ ಮಾತನಾಡಿ,ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಬಡವರು, ಶೋಷಿತರು, ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಕಾನೂನು ನೆರವು ನೀಡಿ ರಕ್ಷಿಸಲಾಗುತ್ತದೆ ಎಂದರು.

5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಎ.ಹರೀಶ್, ನ್ಯಾಯಾಧೀಶರಾದ ಯೋಗೇಶ್ವರಿ, ಕೆ.ಸಂದೇಶ್, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಬಿ.ದಿಲೀಪ್​ಕುಮಾರ್, ಸಿಡಿಪಿಒ ಅಶ್ವತ್ಥಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ಕೆ.ಸಂಜಯ್, ವಕೀಲರ ಸಂಘದ ಉಪಾಧ್ಯಕ್ಷ ಜಯರಾಮಪ್ಪ, ಸಂಪನ್ಮೂಲ ವ್ಯಕ್ತಿ ಷೆರ್ಲಿನ್, ಇನ್​ಸ್ಪೆಕ್ಟರ್ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *