ಮಕ್ಕಳನ್ನು ಮಾನಸಿಕವಾಗಿ ಬಡವರಾಗಿಸಬೇಡಿ

ಶಿರಸಿ: ಮಕ್ಕಳನ್ನು ಬಾಲ್ಯದಲ್ಲೇ ಶಿಕ್ಷಣಕ್ಕಾಗಿ ಮನೆಯಿಂದ ಹೊರತಳ್ಳುವುದರಿಂದ ಅವರು ಮಾನಸಿಕವಾಗಿ ಬಡವಾಗುತ್ತಾರೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಮುರೇಗಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಸೋಮವಾರ ಅವರು ಮಾತನಾಡಿದರು. ‘ಗ್ರಾಮೀಣ ಭಾಗದ ಕುಟುಂಬಗಳಲ್ಲಿ ಮಕ್ಕಳನ್ನು ಶಿಕ್ಷಣಕ್ಕಾಗಿ ಮನೆಯಿಂದ ಹೊರಕಳುಹಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ನಮ್ಮ ಸಂಸ್ಕಾರ, ಮಮತೆ ಸಿಗದೆ ಮಾನಸಿಕವಾಗಿ ಬಡವಾಗುತ್ತಿದ್ದಾರೆ. ಇನ್ನೊಂದೆಡೆ ಗ್ರಾಮೀಣ ಶಾಲೆಗಳೂ ಮುಚ್ಚುತ್ತಿವೆ. ಮಕ್ಕಳಿಗೆ ತಾಯಿ, ತಂದೆ ಮತ್ತು ಶಿಕ್ಷಕರ ಮಾರ್ಗದರ್ಶನ ಅತ್ಯವಶ್ಯ. ಆದ್ದರಿಂದ ವಂಚಿತನಾದ ವ್ಯಕ್ತಿ ಮಾನವತೆಯಿಂದ ದೂರ ವಾಗುತ್ತಿರುವುದನ್ನು ಕಾಣುತ್ತಿದ್ದೇವೆ’ ಎಂದರು.

ಪ್ರಮುಖರಾದ ಸಂತೋಷ ಹೆಗಡೆ ಮಾತನಾಡಿ ‘ಆಂಗ್ಲರು ದೇಶ ಬಿಟ್ಟು ಹೋಗುವಾಗ ತೋರಿದ ಶಿಕ್ಷಣ ಕ್ರಮವನ್ನೇ ನಾವಿಂದಿಗೂ ಅನುಸರಿಸಿದ್ದೇವೆ. ನಾವು ನಮ್ಮ ಶಿಕ್ಷಣವನ್ನು ಆಂಗ್ಲ ಭಾಷೆಯಲ್ಲಿ ನೀಡುವ ಮೂಲಕ ನಮ್ಮ ತನವನ್ನು ಉಳಿಸಿಕೊಳ್ಳಬಹುದು’ ಎಂದರು. ನಿವೃತ್ತ ಪ್ರಾಚಾರ್ಯ ವಿ.ಎಸ್. ಹೆಗಡೆ, ವಲಯ ಅರಣ್ಯಾಧಿಕಾರಿ ಜಿ.ಆರ್. ಭಟ್, ಸಾಲ್ಕಣಿ ಗ್ರಾ.ಪಂ. ಅಧ್ಯಕ್ಷೆ ಅನಸೂಯಾ ಹೆಗಡೆ, ಉಪಾಧ್ಯಕ್ಷ ನಾರಾಯಣ ಹೆಗಡೆ, ಸ್ವಾಗತ ಸಮಿತಿ ಸದಸ್ಯ ಗಣೇಶ ನರಸಿಂಹ ಹೆಗಡೆ ಇತರರು ಇದ್ದರು.

ಸ್ವರ್ಣಧಾರೆ ಸ್ಮರಣ ಸಂಚಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಸಾವಿತ್ರಿ ಹೆಗಡೆ ಅವರ ‘ಸೃಷ್ಟಿ ಮತ್ತು ನಾವು’ ಪುಸ್ತಕ ಬಿಡುಗಡೆ ಗೊಳಿಸಲಾಯಿತು.

ಜಿ.ಪಂ. ಸದಸ್ಯ ಜಿ.ಎನ್. ಹೆಗಡೆ ಮುರೇಗಾರ, ಎಸ್​ಡಿಎಂಸಿ ಅಧ್ಯಕ್ಷ ಸತೀಶ ಹೆಗಡೆ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ರಸಿದ್ಧ ಕಲಾವಿದರಿಂದ ನಡೆದ ಭೀಷ್ಮ ವಿಜಯ ಯಕ್ಷಗಾನ ಕಣ್ಮನ ಸೆಳೆಯಿತು.