ಮಂಜೂರಾತಿ ಪತ್ರ ನೀಡಲು ಒತ್ತಾಯ

ಬ್ಯಾಡಗಿ: ಆಣೂರು ಕೆರೆ ತುಂಬಿಸುವ ಯೋಜನೆಯ ಮಂಜೂರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕಾರ್ಯಾಲಯ ಬಳಿ ಶುಕ್ರವಾರ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ನೀರು ಕೇಳಲು ತೆರಳಿದ ರೈತರನ್ನು ಪೊಲೀಸರು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುತ್ತಿದ್ದಾರೆ. ಎಲ್ಲ ರೈತರು ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಆಣೂರು ಕೆರೆ ತುಂಬಿಸುವ ಯೋಜನೆಯ ಆದೇಶ ಪತ್ರ ನೀಡದಿದ್ದಲ್ಲಿ ಲೋಕಸಭೆ ಚುನಾವಣೆ ಬಹಿಷ್ಕಾರ ಕುರಿತು ಸಾಮೂಹಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಸರ್ಕಾರ ಆದೇಶ ಜಾರಿಗೊಳಿಸಿದ್ದಲ್ಲಿ ರೈತರಿಗೆ ಮಂಜೂರಾತಿ ಪತ್ರ ನೀಡಲು ವಿಳಂಬವೇಕೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಾವಿರಾರು ಜನ ರೈತರ ಸಮ್ಮುಖದಲ್ಲಿ ನೀಡಿದ ಹೇಳಿಕೆ ಸುಳ್ಳಾಗಿದೆ. ಇನ್ನುಮುಂದೆ ರಾಜಕಾರಣಿಗಳು ಕ್ಷೇತ್ರಕ್ಕೆ ಮತಕೇಳಲು ಬರುವುದು ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಕಿರಣಕುಮಾರ ಗಡಿಗೋಳ ಮಾತನಾಡಿ, ಕಳೆದ 15 ದಿನಗಳಿಂದ ಶಿಡೇನೂರು, ಆಣೂರು, ಬಿಸಲಹಳ್ಳಿ, ಕೆರೂಡಿ ಸೇರಿ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಕೊರತೆಯಿದೆ. ಮಾರ್ಚ್, ಏಪ್ರಿಲ್​ನಲ್ಲಿ ರಥೋತ್ಸವ, ಹಬ್ಬ, ವೈವಾಹಿಕ ಕಾರ್ಯಕ್ರಮಗಳು ನಡೆಯಲಿವೆ. ಆದರೆ, ತಾಲೂಕಾಡಳಿತ ನೀರು ಪೂರೈಸಲು ನಿರ್ಲಕ್ಷ್ಯ ತೋರುತ್ತಿದೆ. ಶಿಡೇನೂರು ಗ್ರಾಮದಲ್ಲಿ ಶನಿವಾರ ಜರುಗುವ ಜಾತ್ರೆಗೆ ನೀರು ಲಭ್ಯವಾಗುತ್ತಿಲ್ಲ. ದೂರದ ಊರಿಂದ ಬಂದು-ಹೋಗುವ ಸಾರ್ವಜನಿಕರು, ಗ್ರಾಮಸ್ಥರು ನೀರಿಗಾಗಿ ಪರದಾಡಬೇಕಿದೆ. ಒಂದೆರಡು ದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ದು, ಪುನಃ ಬಂದ್ ಮಾಡಲಾಗಿದೆ ಎಂದರು.

ಬಳಿಕ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು. ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರು, ರೈತ ಮುಖಂಡ ಮಹಾದೇವಪ್ಪ ಶಿಡೇನೂರು, ಚಿಕ್ಕಪ್ಪ ಛತ್ರದ, ಚಿದಾನಂದ ಬಡ್ಡಿಯವರ, ಪ್ರವೀಣ ಹೊಸಗೌಡ್ರ, ಸಿದ್ದನಗೌಡ್ರ ಪಾಟೀಲ, ಮಲಕಪ್ಪ ಅಳೀಕಟ್ಟಿ, ಚಿಕ್ಕಪ್ಪ ಛತ್ರದ ಇತರರಿದ್ದರು.