ಮಂಚನಬಲೇಲಿ ನೂರಾರು ನಾಗರಕಲ್ಲು ಪತ್ತೆ!

ಚಿಕ್ಕಬಳ್ಳಾಪುರ: ತಾಲೂಕಿನ ಮಂಚನಬಲೆಯಲ್ಲಿ ಮಂಗಳವಾರ ಕೆರೆ ಕಟ್ಟೆಯ ಸ್ವಚ್ಛತೆ ವೇಳೆ ಒಂದೇ ಕಡೆ ಸುಮಾರು 150 ಕ್ಕೂ ಹೆಚ್ಚು ನಾಗರಕಲ್ಲುಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಕುತೂಹಲದ ಜತೆಗೆ ಆತಂಕಕ್ಕೂ ಕಾರಣವಾಗಿದೆ.
ಗಣೇಶ ಚತುರ್ಥಿಗೆ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ಗ್ರಾಮದ ಕೆರೆಯಲ್ಲಿ ವಿಸರ್ಜಿಸಲು ಕೆರೆ ಆವರಣದಲ್ಲಿ ಗ್ರಾಮಸ್ಥರು ಹೊಂಡ ನಿರ್ಮಿಸಲು ಮತ್ತು ಕೆರೆ ಸುತ್ತಲಿನ ಪ್ರದೇಶದಲಿ ಸ್ವಚ್ಛತೆಗೆ ಮುಂದಾಗಿದ್ದರು. ಈ ವೇಳೆ ಮೊದಲು ಎರಡ್ಮೂರು ನಾಗರಕಲ್ಲುಗಳು ಸಿಕ್ಕಿವೆ. ಅನುಮಾನಗೊಂಡು ಸುತ್ತಲೂ 4 ರಿಂದ 5 ಅಡಿ ಭೂಮಿ ಅಗೆದಾಗ ಬರೋಬ್ಬರಿ ಸುಮಾರು 150ಕ್ಕೂ ಹೆಚ್ಚು ನಾಗರಕಲ್ಲುಗಳು ಪತ್ತೆಯಾಗಿದ್ದು, ಇನ್ನೊಂದಿಷ್ಟು ನಾಗರಕಲ್ಲುಗಳು ಸಿಗಬಹುದೆಂಬ ಅನುಮಾನದಲ್ಲಿ ಗ್ರಾಮಸ್ಥರು ಇನ್ನೂ ಭೂಮಿ ಅಗೆಯುತ್ತಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಪತ್ತೆಯಾಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ತಂಡೋಪತಂಡವಾಗಿ ಬಂದ ಸುತ್ತಮುತ್ತಲಿನ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕನಿಷ್ಠ 1 ಅಡಿಯಿಂದ 5 ಅಡಿಯ ವರೆಗಿನ ಹೆಡೆ ಎತ್ತಿದ ಹಾವು, ಜೋಡಿ ಹಾವು, ಪಾದಗಳು, ಆದಿಶೇಷ ಸೇರಿ ನಾನಾ ಭಂಗಿಗಳಲ್ಲಿರುವ ನಾಗರಕಲ್ಲುಗಳು ಸಿಕ್ಕಿವೆ. ಇವುಗಳ ಜತೆಗೆ ವೀರಗಲ್ಲುಗಳೂ ಇವೆ. ಗ್ರಾಮದ ಮುಖಂಡರಾದ ಸದಾಶಿವರೆಡ್ಡಿ, ಎಂ.ವಿ.ಸದಾಶಿವ, ವೆಂಕಟೇಶ್, ಎಂ.ಎನ್.ಮಂಜುನಾಥ್ ನೇತೃತ್ವದ ತಂಡ ಇವುಗಳನ್ನು ಮಣ್ಣಿನಿಂದ ತೆಗೆದು ಒಂದೆಡೆ ಇರಿಸಿವೆ.
ಹಿರಿಯರು ಏನಂತಾರೆ?: ಮೊದಲಿನಿಂದಲೂ ಮಂಚನಬಲೆ ಜಾತ್ರೆಗಳಿಗೆ ಹೆಸರುವಾಸಿ. ಇಲ್ಲಿಗೆ ಬಂದು ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರೆ ಹರಕೆ ಈಡೇರುತ್ತದೆ ಎಂಬ ಪ್ರತೀತಿ ಹಲವು ವರ್ಷಗಳ ಹಿಂದೆ ಇತ್ತು. ಇದರಿಂದ ಮದುವೆಯಾಗದವರು, ಮಕ್ಕಳಾಗದವರು ಸೇರಿ ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದ ಜನರು ಇಲ್ಲಿಗೆ ಬಂದು ನಾಗರಕಲ್ಲು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ಹೀಗೆ ಪ್ರತಿಷ್ಠಾಪಿಸಿದ್ದ ಮೂರ್ತಿಗಳು ಕಾಲ ಕಳೆದಂತೆ ಮಣ್ಣಿನಲ್ಲಿ ಸೇರಿಕೊಂಡಿರಬಹುದು ಎನ್ನುತ್ತಾರೆ ಊರ ಹಿರಿಯರು.

Leave a Reply

Your email address will not be published. Required fields are marked *