ಅರಟಾಳ: ಹಲವು ತಿಂಗಳಿನಿಂದ ಬಾಡಗಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸತತ ಎರಡು ದಿನಗಳಿಂದ ಮಂಗಳಗಳನ್ನು ಹಿಡಿದು ಅರಣ್ಯ ಪ್ರದೇಶ ಬಿಡಲಾಗುತ್ತಿದೆ ಎಂದು ಅಥಣಿ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಹೇಳಿದರು.
ಸಮೀಪದ ಬಾಡಗಿ ಗ್ರಾಮದಲ್ಲಿ ಭಾನುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಜತೆಗೆ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಹಣ್ಣು ಹಂಪಲು ಕಡಿಮೆಯಾದಾಗ ಹಸಿವಿನಿಂದಾಗಿ ಮಂಗಗಳು ಗ್ರಾಮಗಳಲ್ಲಿ ಪ್ರವೇಶ ಮಾಡುತ್ತವೆ. ಸುಮಾರು ದಿನಗಳಿಂದ ಬಾಡಗಿಯಲ್ಲಿ 30ಕ್ಕೂ ಹೆಚ್ಚು ಮಂಗಗಳು ಬಂದಿವೆ. ಅದರಲ್ಲಿ ಇಂದು ಸುಮಾರು 26 ಮಂಗಗಳನ್ನು ಹಿಡಿಯಲಾಗಿದೆ. ಇನ್ನುಳಿದಿರುವ ಮಂಗಗಳನ್ನು ಹಿಡಿಯಲಾಗುವುದು ಎಂದರು.
ಗ್ರಾಪಂ ಸದಸ್ಯ ಶಿವಾನಂದ ನ್ಯಾಮಗೌಡ ಮಾತನಾಡಿ, ಮಂಗಗಳು ಮನೆಯೊಳಗೆ ಭಯವಿಲ್ಲದೆ ನುಗ್ಗುತ್ತಿದ್ದವು. ಮಕ್ಕಳು ಕೈಯಲ್ಲಿನ ತಿನಿಸುಗಳನ್ನು ಕಸಿದುಕೊಂಡು ಹೋಗುತ್ತಿದವು. ಈಗ ಅರಣ್ಯ ಇಲಾಖೆಯವರು ಮಂಗಗಳನ್ನು ಹಿಡಿದಿರುವುದರಿಂದ ಸ್ವಲ್ಪ ನೆಮ್ಮದಿ ಸಿಕ್ಕಿದೆ ಎಂದರು. ಅರಣ್ಯ ಸಿಬ್ಬಂದಿ ಮಂಜುನಾಥ ಪಾಟೀಲ, ಮಹಾಂತೇಶ ಚನ್ನವಿರ, ಶಿವಾನಂದ ಮೇತ್ರಿ, ರಾವೇಂದ್ರ ಕುಲಕರ್ಣಿ, ಮುತ್ತಪ್ಪ ದೊಡಮನಿ, ಗ್ರಾಪಂ ಸದಸ್ಯ ಶಿವಾನಂದ ನೇಮಗೌಡ, ಸಿದ್ದು ಹಳ್ಳಿ, ಬಿ.ಆರ್. ಡಂಗಿ, ರೇವಪ್ಪ ತೇಲಿ, ವಿಠ್ಠಲ ಬಿಳ್ಳೂರ, ಸುಧೀರ ಸನದಿ ಇದ್ದರು.