Wednesday, 12th December 2018  

Vijayavani

Breaking News

ಮಂಗ್ಳೂರಲ್ಲಿ ಬಿಜೆಪಿ ಸತ್ವಪರೀಕ್ಷೆ

Thursday, 07.09.2017, 3:06 AM       No Comments

ಬೆಂಗಳೂರು/ಮಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯ ಶಕ್ತಿಪ್ರದರ್ಶನ ಎಂದೇ ಬಿಂಬಿತವಾಗಿರುವ ‘ಮಂಗಳೂರು ಚಲೋ‘ ರ‍್ಯಾಲಿ ಯಶಸ್ವಿಗೊಳಿಸಬೇಕೆಂಬ ಪಣತೊಟ್ಟು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನೊಳಗೊಂಡ ಕಮಲ ಪಡೆ ಕರಾವಳಿ ಜಿಲ್ಲೆಗೆ ಲಗ್ಗೆ ಇಟ್ಟಿದ್ದರೆ ಮತ್ತೊಂದೆಡೆ ರ್ಯಾಲಿಯನ್ನು ಹತ್ತಿಕ್ಕುವುದಕ್ಕಾಗಿ ಸರ್ಕಾರ ಕರಾವಳಿ ಜಿಲ್ಲೆಯಲ್ಲಿ ಪೊಲೀಸರ ಭದ್ರಕೋಟೆ ನಿರ್ವಿುಸಿದೆ.

ಗೃಹ ಸಚಿವ ರಮಾನಾಥ್ ರೈ ರಾಜೀನಾಮೆ, ಎಸ್​ಡಿಪಿಐ ಹಾಗೂ ಪಿಎಫ್​ಐ ಸಂಘಟನೆಗಳ ನಿಷೇಧ ಹಾಗೂ ಕಾರ್ಯಕರ್ತರ ಹತ್ಯೆ ಕುರಿತ ಸಿಬಿಐ ತನಿಖೆಗೆ ಆಗ್ರಹಿಸಿ ಹೋರಾಟ ಆರಂಭಿಸಿರುವ ಬಿಜೆಪಿ ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ 10ಕ್ಕೆ ಬೈಕ್ ರ‍್ಯಾಲಿ ನಡೆಸಿ ಬಳಿಕ ಪ್ರತಿಭಟನಾ ಸಭೆ ನಡೆಸಲು ಸಜ್ಜಾಗಿದೆ.

ರಾಜ್ಯಾದ್ಯಂತ ಎರಡನೇ ದಿನವೂ ಬೈಕ್ ರ‍್ಯಾಲಿ ನಡೆಯದಂತೆ ತಡೆಯುವಲ್ಲಿ ಪೊಲೀಸರು ಯಶಸ್ವಿಯಾದ ಬೆನ್ನಲ್ಲೇ, ಮಂಗಳೂರಿನಲ್ಲಿ ನಿರ್ಬಂಧಕಾಜ್ಞೆ ಹೊರಡಿಸಿರುವ ಜಿಲ್ಲಾಡಳಿತ, ಮೂರು ಗಂಟೆಗಳ ಶಾಂತಿಯುತ ಸಮಾವೇಶಕ್ಕಷ್ಟೇ ಷರತ್ತುಬದ್ಧ ಅವಕಾಶ ನೀಡಿದೆ.

 ಕಮಲ ಪಡೆಯ ಕಲರವ

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ 25 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತದೊಂದಿಗೆ ಹೋರಾಟ ನಡೆಸಲು ಬಿಜೆಪಿ ತಂತ್ರ ರೂಪಿಸಿದೆ. ಪ್ರಮುಖವಾಗಿ ಮಂಗಳೂರು, ಉಡುಪಿ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಲು ನಿಶ್ಚಯಿಸಿದ್ದಾರೆ. ಈ ಸಂಬಂಧ ಸ್ಥಳೀಯ ನಾಯಕರು ಬುಧವಾರ ಸಭೆಗಳನ್ನು ನಡೆಸಿದ್ದಾರೆ. ಅಲ್ಲದೆ ರಾಜ್ಯದ ವಿವಿಧ ಕಡೆಯಿಂದ ಯುವ ಮೋರ್ಚಾ ಪದಾಧಿಕಾರಿಗಳು ಹೋರಾಟಕ್ಕೆ ಧುಮುಕುವ ಉದ್ದೇಶದಿಂದ ಮಂಗಳೂರು ತಲುಪಿದ್ದಾರೆ. ‘ಪ್ರಜಾಪ್ರಭುತ್ವ ರೀತಿಯಲ್ಲಿ ರ‍್ಯಾಲಿ ನಡೆಸಲು ಮುಂದಾಗಿರುವ ನಮ್ಮ ವಿರುದ್ಧ ಸರ್ಕಾರದ್ದು ಘರ್ಷಣೆಯ ಮನಸ್ಥಿತಿ, ಅದಕ್ಕೆ ತಕ್ಕ ಉತ್ತರ ಕೊಡಲು ಸಿದ್ಧ‘ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

 ಬಿಗಿಭದ್ರತೆ

ಮಂಗಳೂರಿನಲ್ಲಿ ಪ್ಯಾರಾ ಮಿಲಿಟರಿ ಪಡೆ, ಕ್ಷಿಪ್ರ ಕಾರ್ಯ ಪಡೆ, 8 ಎಸ್ಪಿ, 12 ಡಿವೈಎಸ್ಪಿ ದರ್ಜೆಯ ಅಧಿಕಾರಿಗಳು, 30 ಸರ್ಕಲ್ ಇನ್​ಸ್ಪೆಕ್ಟರ್​ಗಳು, 60 ಸಬ್ ಇನ್​ಸ್ಪೆಕ್ಟರ್​ಗಳು, 600 ಹೆಡ್ ಕಾನ್​ಸ್ಟೇಬಲ್/ಕಾನ್​ಸ್ಟೇಬಲ್/ ಗೃಹರಕ್ಷಕರು, 15 ಕೆಎಸ್​ಆರ್​ಪಿ ತುಕಡಿ, 5 ಸಿಎಆರ್ ತುಕಡಿ ನಿಯೋಜಿಸಲಾಗಿದೆ.

 ಯಾರೆಲ್ಲ ಭಾಗಿ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ನಾಯಕಿ ಶೋಭಾ ಕರಂದ್ಲಾಜೆ ಬುಧವಾರ ಬೆಳಗ್ಗೆಯೇ ಮಂಗಳೂರಿಗೆ ಆಗಮಿಸಿದ್ದಾರೆ. ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸೇರಿಕೊಂಡಿದ್ದಾರೆ. ರ್ಯಾಲಿಯಲ್ಲಿ ರಾಜ್ಯ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಪ್ರಲ್ಹಾದ ಜೋಶಿ, ಪ್ರತಾಪಸಿಂಹ ಕೂಡ ಪಾಲ್ಗೊಳ್ಳಲಿದ್ದಾರೆ.

 ಬಿಜೆಪಿ ಕಾರ್ಯಸೂಚಿ ಏನು?

ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕರ್ತರನ್ನು ಸೇರಿಸುವುದು, ರ‍್ಯಾಲಿ ಉದ್ಘಾಟನೆ ಹಾಗೂ ಭಾಷಣ, ಬಳಿಕ ಬೈಕ್ ಹಾಗೂ ಪಾದಯಾತ್ರೆ ಪ್ರಾರಂಭಿಸುವುದು, ಯಾತ್ರೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದು ಬಿಜೆಪಿ ಕಾರ್ಯಸೂಚಿ. ಸಮಾವೇಶ ನಡೆಸುವುದಾಗಿ ಹೇಳಿದ್ದರೂ ಅದಕ್ಕೆ ಮೊದಲೇ ಅಂಬೇಡ್ಕರ್ ವೃತ್ತದಲ್ಲೇ ಬಿಜೆಪಿ ಕಾರ್ಯ ಕರ್ತರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಹೆಚ್ಚಿದೆ.

 

ಇಂದು ಮಂಗಳೂರಿನಲ್ಲಿ ರ‍್ಯಾಲಿ ನಡೆಯುವುದು ನಿಶ್ಚಿತ. ವಿವಿಧೆಡೆಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ರಮಾನಾಥ್ ರೈ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು.

| ಬಿ.ಎಸ್.ಯಡಿಯೂರಪ್ಪ

 

ಸಮಾವೇಶಕ್ಕಷ್ಟೇ ಅವಕಾಶ: ರ‍್ಯಾಲಿ ನಡೆಸುವುದಕ್ಕೆ ನಿಷೇಧ ಹೇರಿರುವ ಪೊಲೀಸ್ ಇಲಾಖೆ ಸೆ.7ರಂದು ನೆಹರು ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ಮಾತ್ರ ಅವಧಿ ನಿಗದಿಪಡಿಸಿ ಅನುಮತಿ ನೀಡಿದೆ. ಯಾವುದೇ ಕಡೆಯಿಂದಲೂ ಬೈಕ್ ರ‍್ಯಾಲಿ ಮಂಗಳೂರು ನಗರ ಪ್ರವೇಶಿಸಲು ಅವಕಾಶವಿಲ್ಲ. ನೆಹರು ಮೈದಾನದಲ್ಲಿ ಶಾಂತಿಯುತವಾಗಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಪ್ರತಿಭಟನಾ ಸಮಾವೇಶ ನಡೆಸಲು ಅವಕಾಶ ನೀಡಲಾಗಿದೆ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು ಎಂದು ಬಿಜೆಪಿ ಮುಖಂಡರು ಮನವಿ ಮಾಡಿದ್ದರು. ಆದರೆ ಅದಕ್ಕೂ ಅವಕಾಶ ನೀಡಿಲ್ಲ. ಇದಲ್ಲದೇ ಅಹಿತಕರ ಘಟನೆಗಳು ಏನಾದರೂ ಸಂಭವಿಸಿದರೆ ಸಂಘಟಕರೇ ಜವಾಬ್ದಾರರು ಎನ್ನುವ ಒಪ್ಪಿಗೆಪತ್ರ ಪಡೆಯಲಾಗಿದೆ ಹಾಗೂ ಪ್ರತಿಭಟನಾ ಸಭೆ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗದಂತಿರಬೇಕು ಎಂದು ಸೂಚನೆ ನೀಡಲಾಗಿದೆ.

ಮಂಗಳೂರಿನಲ್ಲಿ ನಿರ್ಬಂಧಕಾಜ್ಞೆ: ಈಗಾಗಲೇ ವಿಧಿಸಲಾಗಿರುವ ನಿರ್ಬಂಧಕಾಜ್ಞೆ ಪ್ರಕಾರ ಯಾವುದೇ ಸಂಘಟನೆ ಸದಸ್ಯರು, ವ್ಯಕ್ತಿಗಳು, ಯಾವುದೇ ರೀತಿಯ ಬೈಕ್ ಮತ್ತು ಇತರ ವಾಹನಗಳ ಮೂಲಕ ಮಂಗಳೂರು ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ ರ್ಯಾಲಿ, ಜಾಥಾ, ಪಾದಯಾತ್ರೆ ಮತ್ತು ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ.

ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಸೆ.6 ಬೆಳಗ್ಗೆ 6 ಗಂಟೆಯಿಂದ ಸೆ.8 ಬೆಳಗ್ಗೆ 6 ಗಂಟೆ ತನಕ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35(3) ಅನ್ವಯ ಯಾವುದೇ ರೀತಿಯ ಬೈಕ್ ರ‍್ಯಾಲಿ ನಡೆಸುವುದು, ಯಾವುದೇ ಸಂಘಟನೆಯ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧಕಾಜ್ಞೆಯನ್ನು ಜಿಲ್ಲಾಡಳಿತ ಹೊರಡಿಸಿದೆ.

ಗಡಿ ಭಾಗದಲ್ಲಿ ಬಂದೋಬಸ್ತ್: ನಿರ್ಬಂಧಕಾಜ್ಞೆ ಉಲ್ಲಂಘಿಸಿ ಬೈಕ್ ರ‍್ಯಾಲಿ ಬಂದರೆ ಅದನ್ನು ತಡೆಯಲು ಪೊಲೀಸ್ ಇಲಾಖೆಯಿಂದ ಚೆಕ್​ಪೋಸ್ಟ್​ಗಳನ್ನು ನಿರ್ವಿುಸಲಾಗಿದೆ. ಜಿಲ್ಲೆಯನ್ನು ಪ್ರವೇಶಿಸುವ ಗಡಿ ಭಾಗಗಳಲ್ಲಿ ಹಾಗೂ ಒಳರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಘಟನೆಯ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಬಂದರೆ ಅದನ್ನು ತಡೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಯುವ ಮೋರ್ಚಾ ಬೈಕ್ ರ‍್ಯಾಲಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರದಲ್ಲಿ ಬುಧವಾರ ಪೊಲೀಸ್ ಪಡೆಯಿಂದ ಪಥ ಸಂಚಲನ ನಡೆಯಿತು. ನೆಹರು ಮೈದಾನದಿಂದ ಹೊರಟ ಪಥ ಸಂಚಲನ ಹಂಪನಕಟ್ಟೆ, ಲೈಟ್​ಹೌಸ್ ಹಿಲ್ ರಸ್ತೆ, ಅಂಬೇಡ್ಕರ್ ವೃತ್ತ, ಕಂಕನಾಡಿ, ಫಳ್ನೀರ್ ಮೂಲಕ ಸಾಗಿ ಮತ್ತೆ ನೆಹರು ಮೈದಾನದಲ್ಲಿ ಸಂಪನ್ನಗೊಂಡಿತು.

 ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆ ಮಾಡುವ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.6 ಸಂಜೆ 6ರಿಂದ ಸೆ.8 ಮಧ್ಯರಾತ್ರಿ 12 ಗಂಟೆ ತನಕ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35(3)ರಡಿ ನಿರ್ಬಂಧಕಾಜ್ಞೆ ಹೊರಡಿಸಲಾಗಿದೆ.

| ಟಿ.ಆರ್.ಸುರೇಶ್ ಮಂಗಳೂರು ಪೊಲೀಸ್ ಆಯುಕ್ತ

ಪಕ್ಷ, ಪರಿವಾರದ ಕಾರ್ಯಕರ್ತರ ನಿರಂತರ ಹತ್ಯೆ ನಡೆಯುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸರ್ಕಾರಕ್ಕೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ, ಹೀಗಾಗಿ ರಾಜ್ಯಮಟ್ಟದ ಹೋರಾಟ ಕೈಗೊಂಡಿದ್ದೇವೆ.

| ಆರ್.ಅಶೋಕ ಮಾಜಿ ಉಪಮುಖ್ಯಮಂತ್ರಿ

ನಮ್ಮ ಪಕ್ಷ-ಸಂಘಟನೆಗೆ ಕಾರ್ಯಕರ್ತರೇ ಆಸ್ತಿ. ಅವರನ್ನು ಕಳೆದುಕೊಂಡು ಸುಮ್ಮನೆ ಕೂರಲು ಸಾಧ್ಯವೇ? ಅಪರಾಧಿಗಳು ಪತ್ತೆಯಾಗಿ ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಕಾರಣಕ್ಕೆ ಮಂಗಳೂರು ಚಲೋ ನಡೆಸುತ್ತಿದ್ದೇವೆ.

| ತಮ್ಮೇಶ್ ಗೌಡ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ

 


ರ‍್ಯಾಲಿ ತಡೆಗೆ ಪೊಲೀಸರಿಂದ ಬಂಧನಾಸ್ತ್ರ

ಬೆಂಗಳೂರು: ಆರ್​ಎಸ್​ಎಸ್, ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ಹಾಗೂ ಸಚಿವ ರಮಾನಾಥ್ ರೈ ರಾಜೀನಾಮೆ, ಪಿಎಫ್​ಐ ಮತ್ತು ಕೆಎಫ್​ಡಿ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಬುಧವಾರವೂ ರಾಜ್ಯದ ವಿವಿಧೆಡೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ರ್ಯಾಲಿಯಲ್ಲಿ ಭಾಗವಹಿಸಿದ್ದ ನಾಯಕರು ಹಾಗೂ ಕಾರ್ಯಕರ್ತರನ್ನು ತಡೆಯಲು ‘ಬಂಧನಾಸ್ತ್ರ‘ ಪ್ರಯೋಗಿಸಿದ್ದಾರೆ.

ಶಿವಮೊಗ್ಗ, ಸೊರಬ, ಸಾಗರ, ತೀರ್ಥಹಳ್ಳಿ, ಭದ್ರಾವತಿ ಹಾಗೂ ಹೊಳೆಹೊನ್ನೂರಿನಿಂದ ಬೈಕ್​ನಲ್ಲಿ ಹೊರಟ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಶಿಕಾರಿಪುರದಿಂದ ಹೊರಟ ಸುಮಾರು 250 ಬೈಕ್​ಗಳನ್ನು ಪೊಲೀಸರು ಶಿವಮೊಗ್ಗ ಹೊರವಲಯದ ತ್ಯಾವರೆಕೊಪ್ಪ ಬಳಿ ತಡೆಯುವ ಪ್ರಯತ್ನ ಮಾಡಿದರೂ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರು ಶಿವಮೊಗ್ಗ ತಲುಪಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಬಿ.ವೈ.ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆಯಿಂದ ಹೊರಟ ಬೈಕ್ ರ್ಯಾಲಿಗೆ ತಡೆಯೊಡ್ಡಿದ ಪೊಲೀಸರು ಶಾಸಕ ಸಿ.ಟಿ.ರವಿ ಸೇರಿ 91 ಮಂದಿಯನ್ನು ಬಂಧಿಸಿ 43 ಬೈಕ್​ಗಳನ್ನು ವಶಪಡಿಸಿಕೊಂಡರು. ನಂತರ ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಿದರು. ಮೂಡಿಗೆರೆ, ಕಡೂರು, ತರೀಕೆರೆ, ಶೃಂಗೇರಿ ಸೇರಿ ಹಲವೆಡೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ರ್ಯಾಲಿಗೆ ಅನá-ಮತಿ ನಿರಾಕರಿಸಿರá-ವುದನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆಗಿಳಿದ ಸಂಸದ ಪ್ರತಾಪ್ ಸಿಂಹ ಸೇರಿ 170ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡá-ವೆ ಮಾತಿನ ಚಕಮಕಿ ನಡೆಯಿತು.

ಮಂಡ್ಯದಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್​ರ್ಯಾಲಿ ಆರಂಭಿಸಿದರು. ತಕ್ಷಣ ಪೊಲೀಸರು ಎಲ್ಲರನ್ನು ಬಂಧಿಸಿ, 1 ಗಂಟೆ ಬಳಿಕ ಬಿಡುಗಡೆ ಮಾಡಿದರು. ಪಾಂಡವಪುರದಲ್ಲಿ 16, ಕೆ.ಆರ್.ಪೇಟೆಯಲ್ಲಿ 40, ಶ್ರೀರಂಗಪಟ್ಟಣದಲ್ಲಿ 45, ಮದ್ದೂರಿನಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಯಿತು. ಹಾಸನ, ಮಡಿಕೇರಿ, ಗುಂಡ್ಲುಪೇಟೆ, ಚಾಮರಾಜನಗರದಲ್ಲೂ ರ್ಯಾಲಿಗೆ ಪೊಲೀಸರು ಬ್ರೇಕ್ ಹಾಕಿದರು.

ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಿಂದ ಹೊರಟ ಬೈಕ್ ರ್ಯಾಲಿಯನ್ನು ಹೆಮ್ಮಾಡಿ ಜಂಕ್ಷನ್, ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಪೊಲೀಸರು ತಡೆದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಕುಂದಾಪುರದ ನಗರದಲ್ಲಿಯೂ ಬೈಕ್ ರ್ಯಾಲಿಗೆ ಮುಂದಾದ ಹಲವರನ್ನು ಬಂಧಿಸಲಾಗಿದೆ.

 


ಬೈಕ್ ರ್ಯಾಲಿಗೆ ನಿರ್ಬಂಧ ಕೋರಿದ್ದ ಪಿಐಎಲ್ ವಜಾ

ಬೆಂಗಳೂರು: ಮಂಗಳೂರು ಚಲೋ ಬೈಕ್ ರ್ಯಾಲಿಯು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಸುಹೈಲ್ ಖಾನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ, ಕಾನೂನು ಸುವ್ಯಸ್ಥೆ ಕಾಪಾಡುವುದು ಸರ್ಕಾರದ ಹೊಣೆ. ಆ ಕುರಿತು ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ.

ರ್ಯಾಲಿಗೆ ನಿರ್ಬಂಧ ಹೇರುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಲಾಗದು. ಸರ್ಕಾರದ ಆಡಳಿತದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಿ, ಸರ್ಕಾರದ ಆಡಳಿತ ಹಾಗೂ ಅಧಿಕಾರವನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿತು.


 ಮಂಗಳೂರು ತಲುಪಿದ ಬಿಜೆಪಿ ರಾಣೆಬೆನ್ನೂರು ಕಾರ್ಯಕರ್ತರು

ರಾಣೆಬೆನ್ನೂರು: ಭಾರಿ ಬಿಗಿ ಬಂದೋಬಸ್ತ್ ನಡುವೆಯೂ ಸ್ಥಳೀಯ ಪೊಲೀಸರು ಸೇರಿ ಮೂರ್ನಾಲ್ಕು ಜಿಲ್ಲೆಯ ಆರಕ್ಷಕರಿಗೆ ಚಳ್ಳೆಹಣ್ಣು ತಿನಿಸಿರುವ ನಗರದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಬೈಕ್ ರ‍್ಯಾಲಿ ಮೂಲಕ ಬುಧವಾರ ಬೆಳಗ್ಗೆ ಮಂಗಳೂರು ತಲುಪಿದ್ದಾರೆ. ಈ ಸಂಬಂಧ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿಯೇ ಪ್ರಥಮವಾಗಿ ಮಂಗಳೂರು ತಲುಪಿದ ಕಾರ್ಯಕರ್ತರು ನಾವು ಎಂದು ತಿಳಿಸಿದ್ದಾರೆ.

 

ಪ್ರತಿಭಟನೆ ನಮ್ಮ ಹಕ್ಕು. ಅದು ತಪ್ಪು ಎಂದಾದರೆ ಸರ್ಕಾರ ತನ್ನ ವಾದ ಏನೆಂದು ಜನರೆದುರು ಮಂಡಿಸಬಹುದಿತ್ತು. ಅದರ ಬದಲು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಏನೇ ಮಾಡಿದರೂ ಮಂಗಳೂರು ಚಲೋ ನಡೆಯುತ್ತದೆ. ನಾನೂ ಪಾಲ್ಗೊಳ್ಳುತ್ತೇನೆ.

| ಜಗದೀಶ್ ಶೆಟ್ಟರ್ ವಿಧಾನಸಭೆ ಪ್ರತಿಪಕ್ಷ ನಾಯಕ

 

ಈಗಾಗಲೇ ಕೆಎಫ್​ಡಿ, ಪಿಎಫ್​ಐ ಸಂಘಟನೆ ಯಿಂದ ಹತ್ಯೆಯಾದ ಹಿಂದು ಮುಖಂಡರ ಕುಟುಂಬಗಳ ಬಗ್ಗೆ ಯೋಚಿಸಿದ್ದೀರಾ? ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಹಾಗೂ ನಿಮ್ಮ ಪುತ್ರನನ್ನು ಸೋಲಿಸಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಯಾವುದೇ ಕಾರಣಕ್ಕೂ ರ್ಯಾಲಿಯಿಂದ ಹಿಂದೆ ಸರಿಯುವುದಿಲ್ಲ.

| ಕೆ.ಎಸ್.ಈಶ್ವರಪ್ಪ ಮೇಲ್ಮನೆ ಪ್ರತಿಪಕ್ಷ ನಾಯಕ

 

ಬೈಕ್ ಚಲೋ ತಡೆಗೆ ರಾಜ್ಯ ಸರ್ಕಾರ ಪ್ರಯತ್ನ ಮಾಡಿದೆ. ಬಂಧಿತ ಕಾರ್ಯ ಕರ್ತರಿಗೆ ಊಟ ವನ್ನೂ ನೀಡ ಬಾರದೆಂದು ಪೊಲೀಸರಿಗೆ ಸೂಚಿಸುವ ಮೂಲಕ ಅಮಾನವೀಯವಾಗಿ ವರ್ತಿಸಿದೆ.

| ಶೋಭಾ ಕರಂದ್ಲಾಜೆ ಸಂಸದೆ

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ವಿವಿಧ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಚಿವ ಬಿ.ರಮಾನಾಥ ರೈ ರಾಜೀನಾಮೆ ನೀಡಬೇಕಿತ್ತು. ರಾಜ್ಯದಲ್ಲೇ ಅವರ ವಿರುದ್ಧ ಪ್ರತಿಭಟನೆ ಯಾಗುತ್ತಿದ್ದರೂ ನನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಬೇಕಿತ್ತು. ಅದರ ಬದಲು ಉದ್ಧಟತನ ತೋರಿದ್ದಾರೆ.

| ಬಿ.ಜನಾರ್ದನ ಪೂಜಾರಿ ಕಾಂಗ್ರೆಸ್ ಮುಖಂಡ

 

ಸಿದ್ದರಾಮಯ್ಯ ಸರ್ಕಾರ ಹಿಟ್ಲರ್ ಧೋರಣೆ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಿಟ್ಟಿದ್ದರೂ ಮಂಗಳೂರಿನಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಿದ್ದೇವೆ. ಇದೇ ರೀತಿ ಉದ್ಧಟತನ ಮುಂದುವರಿಸಿದರೆ ನಾವು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ನಡೆಸಬೇಕಾಗುತ್ತದೆ. ಕರ್ನಾಟಕದಲ್ಲಿ ಆಗುತ್ತಿರುವ ರಾಜಕೀಯ ಹತ್ಯೆಗಳನ್ನು ಖಂಡಿಸಿ, ಜನರಲ್ಲಿ ಜಾಗೃತಿ ಮೂಡಿಸಲು ನಾವು ಈಗ ಬೀದಿಗಿಳಿದಿದ್ದೇವೆ.

| ಅನಂತ್ ಕುಮಾರ್ ಹೆಗಡೆ ಕೇಂದ್ರ ಕೌಶಲಾಭಿವೃದ್ಧಿ ಸಹಾಯಕ ಸಚಿವ (ದೆಹಲಿಯಲ್ಲಿ)

Leave a Reply

Your email address will not be published. Required fields are marked *

Back To Top