ಮಂಗನ ಸೆರೆಗೆ ಕಾರ್ಯಾಚರಣೆ

ಭಟ್ಕಳ: ತಾಲೂಕಿನ ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಉಪಟಳ ನೀಡುತ್ತಿದ್ದ ಕೋತಿಯನ್ನು ಸೆರೆ ಹಿಡಿಯಲು ಭಟ್ಕಳ ಹಾಗೂ ಶಿವಮೊಗ್ಗದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮುಂಡಳ್ಳಿಗೆ ಆಗಮಿಸಿದೆ.

ಕಳೆದ ಒಂದು ವರ್ಷದಿಂದ ಕಪ್ಪು ಮುಖದ ಮಂಗವು ರಿಕ್ಷಾಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿತ್ತು. ಆದರೆ, ಇತ್ತೀಚಿನ ಕೆಲ ದಿನಗಳಿಂದ ಸ್ಥಳೀಯರು ಸೇರಿ ಇತರ ವಾಹನಗಳ ಮೇಲೂ ದಾಳಿ ಆರಂಭಿಸಿತ್ತು. ಈ ಕುರಿತು ‘ವಿಜಯವಾಣಿ’ ಮಂಗನ ಹಾವಳಿಗೆ ಬೇಸತ್ತ ಜನ ಶೀರ್ಷಿಕೆಯಡಿ ಬುಧವಾರ ವರದಿ ಪ್ರಕಟಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ವಲಯ ಅರಣ್ಯ ಅಧಿಕಾರಿಗಳು ಮಂಗನನ್ನು ಹಿಡಿಯಲು ಶುಕ್ರವಾರ ಕಾರ್ಯಾಚರಣೆಗೆ ಇಳಿದಿದ್ದಾರೆ. ಎಸಿಎಫ್ ಬಾಲಕೃಷ್ಣ ನೇತೃತ್ವದಲ್ಲಿ ಶಿವಮೊಗ್ಗದ ಡಾ. ವಿನಯ ಎಸ್., ಭಟ್ಕಳದ ಪ್ರಮೋದ ಬಿ., ಮಲ್ಲಿಕಾರ್ಜುನ ಅಂಗಡಿ, ವೀರೇಶ ಅಲಬೋಡ್, ಜಯದೀಪ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಮಧ್ಯಾಹ್ನದಿಂದ ಸತತವಾಗಿ ಪ್ರಯತ್ನಿಸಿದರೂ ಮಂಗ ಸೆರೆ ಸಿಕ್ಕಿಲ್ಲ. ಶನಿವಾರ, ಭಾನುವಾರವೂ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ