ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಮಂಗಳೂರಿನಲ್ಲಿ ಕುಕ್ಕರ್ ಸ್ಪೋಟಗೊಂಡ ಪ್ರಕರಣದಲ್ಲಿ ಗಾಯಾಳು ಯುವಕ ಶಾರೀಖ್ಗೆ ಪ್ರಜ್ಞೆ ಬರುವವರಿಗೆ ಏನೂ ಹೇಳಲು ಆಗುವುದಿಲ್ಲ ಎಂದು ಪೊಲೀಸ್ ಆಯುಕ್ತರು ಹೇಳಿದ್ದರು. ಹಿನ್ನೆಲೆ ತಿಳಿದುಕೊಳ್ಳಬೇಕು ಎಂದಿದ್ದರು. ಆದರೆ, ಡಿಜಿಪಿ ಘಟನೆಗೆ ಭಯೋತ್ಪಾದನೆ ಲೇಪನ ಕೊಟ್ಟರು. ಬಿಜೆಪಿಯ ಭ್ರಷ್ಟಾಚಾರ, ಮತಗಳ್ಳತನ, ಬೋಗಸ್ ಮತಗಳ ಸೃಷ್ಟಿ ಮುಚ್ಚಿಹಾಕುವ ಪ್ರಯತ್ನವಿದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹರಿಹಾಯ್ದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಈ ವಿಷಯವನ್ನು ರಾಜಕಾರಣ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಚ್ಚಿಕೊಳ್ಳಲಲು ಕುಕ್ಕರ್ ಬ್ಲಾಸ್ಟ್ ಪ್ರಕರಣ ಮುಂದೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷ ಭಯೋತ್ಪಾದನೆ ವಿರೋಧಿಸುತ್ತ ಬಂದಿದೆ. ಅಧಿಕಾರದಲ್ಲಿ ಇದ್ದಾಗಲೆಲ್ಲ ದೇಶದಲ್ಲಿ ಭಯೋತ್ಪಾದನೆ ದಮನ ಮಾಡಿದೆ. ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು, ಏನು ಬೇಕಾದರೂ ಪ್ರಚಾರ ಮಾಡಲಿ. ಮಂಗಳೂರು ಭಯೋತ್ಪಾದನೆ ಖಂಡಿಸಿದ್ದೇವೆ ಎಂದು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಗೆಲ್ಲುವವರಿಗೆ ಟಿಕೆಟ್:
ಬಸ್ನಲ್ಲಿ ಕಾಂಗ್ರೆಸ್ ರಾಜ್ಯಾದ್ಯಂತ ಯಾತ್ರೆ ಮಾಡುತ್ತಿದೆ. ಮಹದಾಯಿ ವಿಚಾರವಾಗಿ ಜ. 2ರಂದು ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಲಾಗುವುದು. ಸಿದ್ದರಾಮಯ್ಯ ಬಸ್ ಯಾತ್ರೆಗೆ ಕಂಡೀಷನ್ ಹಾಕಿಲ್ಲ. ಪಕ್ಷದ ತೀರ್ವನವೇ ಅಂತಿಮ. ಪ್ರತಿ ವಿಚಾರದಲ್ಲಿಯೂ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ ಅವರ ಜತೆ ರ್ಚಚಿಸಿದ್ದೇವೆ. ಈ ಬಾರಿ ಗೆಲ್ಲುವವರಿಗೆ ಟಿಕೆಟ್ ಕೊಡುತ್ತೇವೆ. ಕಷ್ಟ ಕಾಲದಲ್ಲೂ ನಮ್ಮೊಂದಿಗೆ ಇದ್ದವರಿಗೆ ಟಿಕೆಟ್ ಕೊಡುತ್ತೇವೆ ಎಂದರು.
ಸವಾಲು:
ಕಂದಾಯ ಸಚಿವ ಆರ್. ಅಶೋಕ ಅವರು ನನಗೆ ಅಮಾಯಕ ಅವಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಆ ಪ್ರಶಸ್ತಿ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ. ಅಶೋಕ ಅವರು ದಿನಾಂಕ ಮತ್ತು ಸಮಯ ಫಿಕ್ಸ್ ಮಾಡಲಿ ಎಂದು ಡಿಕೆಶಿ ಸವಾಲು ಹಾಕಿದರು.