ಭ್ರಷ್ಟರ ವಿರುದ್ಧ ದೂರು ಕೊಡಿ

ಕೋಲಾರ: ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ಬರೀ ಗೊಣಗಿದರೆ ಪ್ರಯೋಜನವಿಲ್ಲ. ಕಾನೂನುಬದ್ಧ ಕೆಲಸ ಮಾಡಿಕೊಡಲು ಸರ್ಕಾರಿ ಅಧಿಕಾರಿಗಳು ಅನಗತ್ಯ ವಿಳಂಬ ಅಥವಾ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಧೈರ್ಯವಾಗಿ ದೂರು ನೀಡಿ, ಭ್ರಷ್ಟಾಚಾರ ನಿಮೂಲನೆಗೆ ಕೈ ಜೋಡಿಸಿ ಎಂದು ಎಸಿಬಿ ಕೇಂದ್ರ ವಲಯ ಎಸ್ಪಿ ಎ.ಆರ್. ಬಡಿಗೇರ್ ಕರೆ ನೀಡಿದರು.

ಟಿ.ಚನ್ನಯ್ಯ ರಂಗಮಂದಿರದಲ್ಲಿ ಎಸಿಬಿ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಜಾಗೃತಿ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ, ತಾಲೂಕು ಕಚೇರಿ, ಆರ್​ಟಿಒ, ಆಸ್ಪತ್ರೆ ಸೇರಿ ಇನ್ನಿತರೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಣದ ಬೇಡಿಕೆ ಇಟ್ಟರೆ ಅಂತಹವರನ್ನು ವಿಚಾರಿಸಿಕೊಳ್ಳಲು ನಾವಿದ್ದೇವೆ ಎಂದು ಧೈರ್ಯ ತುಂಬಿಸಿದರು.

ಭ್ರಷ್ಟಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದ ಅವರು, ಕಾನೂನು ಚೌಕಟ್ಟಿನಲ್ಲಿ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ಕೇಳಿದರೆ ನಮ್ಮನ್ನು ಸಂರ್ಪಸಿ ಎಂದರು.

ಎಲ್ಲ ಸರ್ಕಾರಿ ನೌಕರರು ಭ್ರಷ್ಟರಿರುವುದಿಲ್ಲ. ದಕ್ಷ ಅಧಿಕಾರಿಗಳು ಇದ್ದಾರೆ. ಎಲ್ಲೋ ಅಲ್ಲಲ್ಲಿ ಇರುವ ಭ್ರಷ್ಟರ ಬಗ್ಗೆ ದೂರು ನೀಡಲು ಮುಂದೆ ಬಂದವರಿಗೆ ನಾವು ಕಾನೂನು ರಕ್ಷಣೆ ನೀಡುತ್ತೇವೆ ಎಂದು ಹೇಳಿದರು.

ಎಸಿಬಿ ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಮಾತನಾಡಿ, ಜಿಲ್ಲೆಯಲ್ಲಿ ಮೊದಲು 2016ರ ಮೇ 2ರಂದು ಕೋಲಾರದಲ್ಲಿ ಎಸಿಬಿ ಆರಂಭಗೊಂಡಿತು. ಅಂದಿನಿಂದ ಇಂದಿನವರೆಗೆ 45 ಪ್ರಕರಣ ದಾಖಲಾಗಿದೆ. ಇದರಲ್ಲಿ ಲಂಚ ಸ್ವೀಕಾರ ಪ್ರಕರಣ ಸಂಖ್ಯೆ 34. ಜನ ಜಾಗೃತಿಯಿಂದಾಗಿ ಪ್ರತಿ ವರ್ಷ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಭ್ರಷ್ಟಾಚಾರ ಮುಕ್ತ ಕೋಲಾರದ ಕನಸು ಈಡೇರಿಸುವ ದಿಸೆಯಲ್ಲಿ ಪ್ರಯತ್ನ ಶುರುವಾಗಿದೆ ಎಂದರು.

ಸನ್ಮಾನ: ಎಸಿಬಿಗೆ ದೂರು ನೀಡಿರುವ ಪ್ರಮುಖರಲ್ಲಿ ತೊಪ್ಪನಹಳ್ಳಿ ಮಲ್ಲಿಕಾರ್ಜುನ, ಧನಮಟ್ನಹಳ್ಳಿ ವೆಂಕಟೇಶಪ್ಪ, ಬಿಎಂಟಿಸಿ ನಿರ್ವಾಹಕಿ ಶೈಲಜಾ, ಜನಪನಹಳ್ಳಿಯ ರೈತ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ಎಎಸ್ಪಿ ಜಾಹ್ನವಿ, ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿಗಳಾದ ಕೋದಂಡರಾಮಯ್ಯ, ಉಮೇಶ್, ಅನುಷಾ, ಎಸಿಬಿ ಇನ್ಸ್​ಪೆಕ್ಟರ್​ಗಳಾದ ವೆಂಕಟಾಚಲಪತಿ ಇತರರಿದ್ದರು.

ಜಗತ್ತಿನಲ್ಲಿ ಭ್ರಷ್ಟಾಚಾರ ಹೆಚ್ಚಿರುವ 176 ರಾಷ್ಟ್ರಗಳ ಪೈಕಿ ಭಾರತ 76ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಯುವ ಪೀಳಿಗೆ ಮುಂದೆ ಬರಬೇಕು, ಎಸಿಬಿಗೆ ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸಬೇಕು.

| ಆರ್.ರಾಮಚಂದ್ರಯ್ಯ ಎಸಿಬಿ ವಿಶೇಷ ಸರ್ಕಾರಿ ಅಭಿಯೋಕ

44 ಕ್ಕೂ ಹೆಚ್ಚು ದೂರು: ವಿವಿಧ ದಲಿತ, ರೈತ ಸಂಘಟನೆ, ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಸೇರಿ 44ಕ್ಕೂ ಹೆಚ್ಚು ದೂರು ಸಲ್ಲಿಕೆಯಾದವರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದರೆ, ಸಾಮಾಜಿಕ ಭದ್ರತಾ ಯೋಜನೆ, ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಸೇರಿ 45ಕ್ಕೂ ಹೆಚ್ಚು ದೂರು ಸಲ್ಲಿಕೆಯಾದವು.

ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಿರಿ: ಕೋಲಾರ ತಾಲೂಕು ವೇಮಗಲ್ ಹೋಬಳಿಯ ಮೇಡಿಹಾಳ, ಸುಗಟೂರು ಹೋಬಳಿಯ ಬುಸನಹಳ್ಳಿ, ನಾಗನಾಳ ಗ್ರಾಮಗಳ ಬೆಟ್ಟದ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ) ಎಸಿಬಿ ಕೇಂದ್ರ ವಲಯ ಎಸ್ಪಿ ಎ.ಆರ್. ಬಡಿಗೇರ್ ಅವರಿಗೆ ಶನಿವಾರ ದೂರು ನೀಡಿದೆ. ವೇಮಗಲ್ ಹೋಬಳಿಯ ಮೇಡಿಹಾಳ, ಬೆಟ್ಟಹೊಸಪುರ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ಕ್ರಷರ್​ಗಳಿಂದಾಗಿ ಸುತ್ತಮತ್ತಲಿನ ಗ್ರಾಮಸ್ಥರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದೆ.

ವೇಮಗಲ್ ಹೋಬಳಿಗೆ ಸೇರಿದ ಮೇಡಿಹಾಳ, ಆಂದ್ರಹಳ್ಳಿ, ಧನಮಟ್ನಹಳ್ಳಿಗೆ ಸೇರಿದ ಬೆಟ್ಟದ ತಪ್ಪಲಿನಲ್ಲಿ ದಲಿತ, ಅಲ್ಪಸಂಖ್ಯಾತರರು, ಇತರೆ ಬಡ ಕುಟುಂಬಗಳು ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ, ಉಪ ಕಸುಬು ಆಗಿ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ, ರೇಷ್ಮೆ ಸಾಕಾಣಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಜಿಂಕೆ, ಮೊಲ, ನವಿಲು ಇನ್ನಿತರೆ ವನ್ಯ ಜೀವಿಗಳು ವಾಸವಿದ್ದು, ಅಪಾಯ ಎದುರಾಗುತ್ತಿದೆ ಎಂದು ಜಿಲ್ಲಾ ಸಂಚಾಲಕ ಮೇಡಿಹಾಳ ಎಂ.ಚಂದ್ರಶೇಖರ್ ಇತರರು ಮನವಿ ಸಲ್ಲಿಸಿದ್ದಾರೆ. ರಾಜ್ಯ ಸಂಘಟನಾ ಸಂಚಾಲಕ ಮೇಡಿಹಾಳ ಕೆ.ಬೈರಪ್ಪ, ನಾಗನಾಳ ಶಂಕರ್, ವಿ.ನಾರಾಯಣಸ್ವಾಮಿ, ಮುನಿಸ್ವಾಮಿಗೌಡ, ಮಾರಸಂದ್ರ ಮಂಜು, ದೊಡ್ಡಹಸಾಳ ಡಿ.ಎಂ.ಮುನಿರಾಜು, ಕೆ.ಜಿ.ಎಫ್ ಕಣ್ಣಪ್ಪ, ಬಿ.ಎಂ.ಟಿ.ಸಿ ವೆಂಕಟೇಶ್, ವೆಂಕಟರತ್ನ, ರಾಂಪುರ ವೆಂಕಟೇಶ್, ಶಾಂತಕುಮಾರ್, ಜನ್ನಘಟ್ಟ ನಾರಾಯಣಪ್ಪ, ಉರಿಗಿಲಿ ಆರ್.ಆನಂದ್ ಇದ್ದರು.