ಭೌತಿಕ ಶರೀರಕ್ಕೆ ಅಮರತ್ವವಿಲ್ಲ

ಬೆಂಗಳೂರು: ಸರ್ವರನ್ನು ಚಿರನಿದ್ರೆಗೆ ದೂಡುವ ಸಾವಿಗೆ ಎಂದೂ ಸಾವಿಲ್ಲ. ಎಷ್ಟೇ ದೀರ್ಘಾಯುಷಿಯಾದರೂ, ಸಿರಿವಂತನಾದರೂ, ತನ್ನ ಸುತ್ತಮುತ್ತ ವೈದ್ಯರ ದೊಡ್ಡ ಸಮೂಹವನ್ನೇ ಹೊಂದಿದ್ದರೂ ಮನುಷ್ಯ ಭೌತಿಕ ಶರೀರದೊಂದಿಗೆ ಅಮರನಾಗಲು ಸಾಧ್ಯವಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಗುರುಪೌರ್ಣಿಮೆ ಅಂಗವಾಗಿ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯು ತ್ತಿರುವ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನದ 5ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯಾವುದಕ್ಕೆ ಜನನ ಇದೆಯೋ ಅದಕ್ಕೆ ಮರಣ ನಿಶ್ಚಿತ. ಮನುಷ್ಯನು ಜನ್ಮ ತಾಳಿರುವುದರಿಂದ ಸಾವಿರ ಪ್ರಯತ್ನ ಮಾಡಿದರೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾವಿನ ಬಾಯಿಯಲ್ಲಿ ಕುಳಿತು ಮುಂದೆ ಹಾರಾಡುವ ನೊಣ ಹಿಡಿಯಲು ನಾಲಿಗೆ ಚಾಚುವ ಕಪ್ಪೆಯಂತೆ ಮೃತ್ಯುವಿನ ಬಾಯಲ್ಲಿ ಕುಳಿತ ಮನುಷ್ಯ ಪ್ರಾಪಂಚಿಕ ಸುಖ ಸವಿಯಲು ಹಾತೊರೆಯುತ್ತಾನೆ ಎಂದರು.

ಆರು ಪ್ರಕಾರದ ವಿಕಾರಗಳು ಪ್ರತಿಯೊಂದು ಜೀವಿಯ ಶರೀರವನ್ನು ವಿಕಾರಗೊಳಿಸುವುದರಿಂದ ಶರೀರಗಳು ಕೊನೆಗೆ ಮೃತ್ಯುವಿಗೆ ತುತ್ತಾಗುತ್ತವೆ. ಮನುಷ್ಯ ಬದುಕನ್ನು ನೆಮ್ಮದಿಯಾಗಿ ಪೂರ್ಣವಾಗಿ ಉಳಿಸಿಕೊಳ್ಳಬೇಕಾದರೆ ನಾಲ್ಕು ಮಾತುಗಳನ್ನು ನೆನಪಿಸಿಕೊಳ್ಳಬೇಕು. ಇವುಗಳಲ್ಲಿ ತಕ್ಷಣ ಮರೆಯಬೇಕಾದ ಎರಡು ಮಾತುಗಳು ಮತ್ತು ಎಂದೂ ಮರೆಯದ ಇನ್ನೆರಡು ಮಾತುಗಳು. ತಾನು ಇನ್ನೊಬ್ಬರಿಗೆ ಮಾಡಿದ ಉಪಕಾರ ಮತ್ತು ತನಗೆ ಇನ್ನೊಬ್ಬರು ಮಾಡಿದ ಅಪಕಾರ ಇವೆರಡನ್ನೂ ತಕ್ಷಣ ಮರೆತುಬಿಡುವುದು ಸಂತಸದ ಬದುಕಿಗೆ ಅತ್ಯುತ್ತಮ ಉಪಾಯ ಎಂಬುದನ್ನು ಸದಾ ತಿಳಿದಿರಬೇಕು ಎಂದು ಶ್ರೀಗಳು ಹೇಳಿದರು.

ಇದರೊಂದಿಗೆ ಸರ್ವ ಶಕ್ತಿ ಸಂಪನ್ನನಾದ ದೇವನೊಬ್ಬನಿದ್ದಾನೆ, ಅವನು ನಮ್ಮ ಬದುಕಿನ ಪ್ರತಿ ಚಟುವಟಿಕೆಯನ್ನು ಗಮನಿಸುತ್ತಿರುತ್ತಾನೆ. ನಮಗೆ ಸಾವು ನಿಶ್ಚಿತ. ಸಾವಿನ ಜತೆಗೆ ಭೌತಿಕವಾದ ಯಾವ ಸಂಪತ್ತು ಹಾಗೂ ಯಾವ ಸಂಬಂಧಿಕರೂ ಜತೆಗೆ ಬರುವುದಿಲ್ಲ ಎಂಬ ಮಾತುಗಳನ್ನು ಸದಾ ಸ್ಮೃಯಲ್ಲಿ ಇಟ್ಟುಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ಸಂಗೀತ ಕಾರ್ಯಕ್ರಮ: ಗುರುಪೌರ್ಣಿಮೆ ಪ್ರಯುಕ್ತ ನಡೆದ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಶಿವಶಂಕರ ಶಾಸ್ತ್ರಿ ಹಾಗೂ ತಂಡದವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು.

ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಯಡಿಯೂರು, ಶಿವಗಂಗೆ, ಹಲಗೂರು ಮಠದ ಶ್ರೀಗಳು ಹಾಗೂ ಕೆವಿವಿಎಎಸ್ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮತ್ತು ಪೂಜಾ ಸಮಿತಿ ಅಧ್ಯಕ್ಷ ಜಯಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜಗದ್ಗುರುಗಳಿಂದ ಗುರುರಕ್ಷೆ

ನಗರದಲ್ಲಿ ನಡೆಯುತ್ತಿರುವ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಇಷ್ಟಲಿಂಗ ಮಹಾಪೂಜಾ ಸಮಿತಿ ಅಧ್ಯಕ್ಷ ಜಯಲಿಂಗಪ್ಪ ಅವರಿಗೆ ಶ್ರೀಶೈಲ ಜಗದ್ಗುರುಗಳು ಗುರುರಕ್ಷೆ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *