ಭೋಗಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

bhogi festival, price raise, veritable, bagalkot, market, ಬೋಗಿ ಹಬ್ಬ, ಬೆಲೆ ಏರಿಕೆ, ಬಾಗಲಕೋಟೆ, ತರಕಾರಿ, ಮಾರುಕಟ್ಟೆ

ಸಂತೋಷ ದೇಶಪಾಂಡೆ ಬಾಗಲಕೋಟೆ

ಟೊಮ್ಯಾಟೊ ಕೆಜಿಗೆ 40 ರೂ., ಸೌತೆ ಕಾಯಿ 80 ರೂ. ಬದನೆಕಾಯಿ 50 ರೂ. ಹೀಗೆ ತರಕಾರಿ ಬೆಲೆ ಏಕಾಏಕಿ ಹೆಚ್ಚಳವಾಗಿದ್ದು, ದರ ಕೇಳಿ ಗ್ರಾಹಕರು ಬೆಚ್ಚಿಬೀಳುವಂತಾಗಿದೆ.

ನವನಗರದಲ್ಲಿರುವ ಭಾನುವಾರ ಸಂತೆಗೆ ತರಕಾರಿ ಖರೀದಿಗೆಂದು ಮಾರುಕಟ್ಟೆಗೆ ಹೋದ ಗ್ರಾಹಕರು ಬೆಲೆಏರಿಕೆ ಬಿಸಿ ಅನುಭವಿಸಿದರು. ಎರಡು ದಿನಗಳ ಹಿಂದೆ ಕೆಜಿಗೆ 20-30 ದರದಲ್ಲಿದ್ದ ತರಕಾರಿಗಳ ದರ ಭೋಗಿ ಹಬ್ಬದ ನಿಮಿತ್ತ ಏಕಾಏಕಿ 20-30 ರೂ. ಏರಿಕೆಯಾಗಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಬೋಗಿ ಹಬ್ಬ ತನ್ನದೆಯಾದ ವಿಶೇಷತೆ ಪಡೆದಿದೆ. ಸಜ್ಜೆ, ಜೋಳದ ಖಡಕ್ ರೊಟ್ಟಿ ಜತೆಗೆ ತರಕಾರಿಗಳಿಂದ ಸಿದ್ಧಪಡಿಸಿದ ವಿಶೇಷ ಜವಾರಿ ಖಾದ್ಯ ಒಳಗೊಂಡ ವಿಶೇಷ ಭೋಜನ ತಯಾರಿಸಿ ಆತ್ಮೀಯರು, ಸಂಬಂಧಿಕರು, ಅಕ್ಕ ಪಕ್ಕದ ಮನೆಯವರನ್ನು ಕರೆದು ಸಹಪಂಕ್ತಿ ಭೋಜನ ಸವಿಯುತ್ತಾರೆ. ಈ ಬಾರಿ ಹಿಂದೆಂದಿಗಿಂತಲೂ ತರಕಾರಿ ಬೆಲೆ ದುಪ್ಪಟ್ಟಾಗಿದೆ.

ಅನ್ನದಾತರಿಗೆ ಸಿಗದ ಲಾಭ: ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ-ಬೆಳೆ ಕೈಕೊಟ್ಟ ಪರಿಣಾಮ ರೈತರು ಭೀಕರ ಬರ ಎದುರಿಸುತ್ತಿದ್ದಾರೆ. ನೀರಾವರಿ ಹೊಂದಿರುವ ಕೆಲ ರೈತರು ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ತರಕಾರಿ ಬೆಳೆ ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಕೆ ರೈತರಿಗೆ ಕೊಂಚಮಟ್ಟಿಗೆ ಸಮಾಧಾನ ತಂದರೂ ಬೆಲೆ ಏರಿಕೆ ಲಾಭ ಪೂರ್ಣ ಪ್ರಮಾಣದಲ್ಲಿ ಅನ್ನದಾತರಿಗೆ ಸಿಗುತ್ತಿಲ್ಲ. ರೈತರಿಗಿಂತ ದಲ್ಲಾಳಿಗಳೇ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಇದರಿಂದ ಅನ್ನದಾತರಿಗೆ ಬರದ ಗಾಯದ ಮೇಲೆ ಬರೆ ಎಳೆದಂತಾಗಿದೆ. ತರಕಾರಿ ಬೆಲೆಯಲ್ಲದೆ ಮೇಂತೆ, ಪಾಲಕ, ರಾಜಗಿರಿ ವಿವಿಧ ಸೊಪ್ಪುಗಳ ಬೆಲೆಯಲ್ಲೂ ಏರಿಕೆಯಾಗಿದೆ.

ನಿತ್ಯದಂತೆ ಲೆಕ್ಕಹಾಕಿಕೊಂಡು ಸಂತೆಗೆ ಬಂದ ಅನೇಕ ಗ್ರಾಹಕರು ಬೆಲೆ ಕೇಳಿ ಇದ್ದುದರಲ್ಲಿಯೇ ಕಡಿಮೆ ತರಕಾರಿ ತೆಗೆದುಕೊಂಡು ಮರಳಿದರು.

ಸಂಕ್ರಾಂತಿ ಹಬ್ಬದಲ್ಲಿ ವಿಶೇಷವಾಗಿ ತರಕಾರಿಗಳಿಂದ ಅಡುಗಡೆ ಸಿದ್ಧಪಡಿಸಲಾಗುತ್ತದೆ. ಆದರೆ ಈ ಸಾರಿ ಪ್ರತಿಯೊಂದು ತರಕಾರಿ ಬೆಲೆ ದುಪ್ಪಟ್ಟಾಗಿದೆ. ಇದರಿಂದ ಸ್ವಲ್ಪ ಹೊರೆಯಾಗುತ್ತಿದೆ. ಆದರೆ ಬೆಲೆ ಏರಿಕೆ ಲಾಭ ರೈತರಿಗೆ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯ.

| ಶಿವಾಜಿ ಗೌಳಿ ತರಕಾರಿ ಕೊಳ್ಳಲು ಬಂದ ಗ್ರಾಹಕ

ಬರಗಾಲ ಹೊಡೆತಕ್ಕೆ ಸಿಲುಕಿ ನಷ್ಟವಾಗಿತ್ತು. ಟೊಮೆಟೋ, ಸೌತಿಕಾಯಿ ಸೇರಿದಂತೆ ಎರಡು ಎಕರೆಯಲ್ಲಿ ಅಲ್ಪಸ್ವಲ್ಪ ತರಕಾರಿ ಬೆಳೆದಿದ್ದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಇದರಿಂದ ಭಾನುವಾರ ಕೈಗೆ ಉತ್ತಮ ಕಾಸು ಬಂದಿದೆ. ಗ್ರಾಹಕರ ತೆಗೆದುಕೊಳ್ಳುವ ಬೆಲೆ ನಮಗೆ ಸಿಕಿಲ್ಲ. ಅರ್ಧಕ್ಕೆ ಅರ್ಧ ಮಧ್ಯವರ್ತಿಗಳ ಲಾಭವಾಗಿದೆ.

| ಅಶೋಕ ದಾಸರ ತರಕಾರಿ ಬೆಳೆದ ರೈತ