ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದರನ್ನು ತಡೆಯಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಜನರು ಮಾತ್ರ ಪರಸ್ಪರ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ.
ಅದರಲ್ಲೂ ಆಹಾರ ಧಾನ್ಯ, ಪಡಿತರ ವಿತರಣೆ ಸಂದರ್ಭದಲ್ಲಿ ಸಿಕ್ಕಿತೋ ಸಿಗಲಿಕ್ಕಿಲ್ಲೋ ಎಂಬಂತೆ ಮುಗಿ ಬೀಳುತ್ತಿದ್ದಾರೆ. ಇಲ್ಲಿಯ ಭೈರಿದೇವರಕೊಪ್ಪ ನ್ಯಾಯಬೆಲೆ ಅಂಗಡಿ ಎದುರು ಸೋಮವಾರ ಹೀಗೇ ಆಯಿತು. ಮಧ್ಯಾಹ್ನ 4 ಗಂಟೆಗೆ ವಿತರಣೆ ಆರಂಭಿಸಬೇಕಿದ್ದ ಅಂಗಡಿ ಎದುರು 50- 60 ಜನರು ಒಂದೇ ಕಡೆ ಸರದಿಯಲ್ಲಿ ಪರಸ್ಪರ ಅಂತರವಿಲ್ಲದೇ ನಿಂತಿದ್ದರು.
ದಿನಸಿ ಪದಾರ್ಥ, ತರಕಾರಿ, ಆಹಾರ ಧಾನ್ಯದ ಕಿಟ್ ವಿತರಣೆ ಇದ್ದಲ್ಲಿ ಈ ಸಂದಣಿ ಹೆಚ್ಚಾಗಿ ಕಂಡು ಬರುತ್ತಿದೆ. ಪಡಿತರ ವಿತರಣೆಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಇಂತಹ ಸ್ಥಿತಿ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತದೆ.
ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ: ಪಡಿತರ ಆಹಾರ ಧಾನ್ಯ ಆಯಾ ನ್ಯಾಯಬೆಲೆ ಅಂಗಡಿಗೆ ಬೇಕಾಗುವಷ್ಟು ಇದೆ ಎನ್ನುತ್ತದೆ ಜಿಲ್ಲಾಡಳಿತ. ಹಾಗಿದ್ದ ಮೇಲೆ ಈ ಜನದಟ್ಟಣೆ ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಆಹಾರ ಧಾನ್ಯ ಸಾಕಷ್ಟು ಇದ್ದರೂ ಅಷ್ಟೆಲ್ಲ ಜನ ಬಂದು ಅಲ್ಲಿ ನಿಲ್ಲುವುದೇಕೆ? ಈ ವಿಷಯದಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ದಿನವೊಂದಕ್ಕೆ ಇಷ್ಟೇ ಜನರಿಗೆ ಹಂಚಿಕೆ ಎಂದು ನಿಗದಿ ಮಾಡಬೇಕು. ಉಳಿದವರು ಬರದೇ ಇರುವ ವ್ಯವಸ್ಥೆ ಮಾಡಬೇಕು. ಒಟ್ಟಾರೆ ಹೆಚ್ಚು ಜನ ಒಂದೆಡೆ ಸೇರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಜಿಲ್ಲಾಡಳಿತದ ಮೇಲೂ ಇದೆ.