ಭೂ ಕಾಯ್ದೆ ತಿದ್ದುಪಡಿ ಭಾರಿ ಮೋಸ

ಧಾರವಾಡ: ರೈತರಿಗೆ ಅನುಕೂಲವಾಗಿದ್ದ ಭೂ ಸ್ವಾಧೀನ ಕಾಯ್ದೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಿದ್ದುಪಡಿ ಮಾಡುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ರೈತ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಕಲಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಯ್ದೆ ತಿದ್ದುಪಡಿ ಮಾಡಿರುವ ಬಗ್ಗೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಗೊತ್ತಿಲ್ಲ ಎಂದು ಹೇಳಿ ನಾಟಕವಾಡುತ್ತಿದ್ದಾರೆ. ಕಾಯ್ದೆ ತಿದ್ದುಪಡಿ ವಿಷಯದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಈಗ ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್​ನಲ್ಲಿ ರೈತರಿಗೆ ಏನೂ ಕೊಡುಗೆ ನೀಡಿಲ್ಲ. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಮಾತ್ರ ಅನುದಾನ ನೀಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ರೈತರ ಸಾಲವನ್ನು ಸರ್ಕಾರಗಳೇ ಕಟ್ಟಬೇಕು. ಅದು ನಮ್ಮ ಸಾಲವಲ್ಲ. ನಾವು ಸಾಲಗಾರರಲ್ಲ ಎಂದರು.

39 ವರ್ಷಗಳ ಹಿಂದೆ ರೈತರು ಧರಣಿ ನಡೆಸಿದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸುವ ಅನಿವಾರ್ಯತೆ ಸರ್ಕಾರಕ್ಕೆ ಇತ್ತೆ? ಎಂದು ಪ್ರಶ್ನಿಸಿದ ಅವರು, ಒಬ್ಬ ತಹಸೀಲ್ದಾರ್ ಬಂದು ರೈತರ ಸಮಸ್ಯೆ ಆಲಿಸಿದ್ದರೆ, ಇಷ್ಟೆಲ್ಲ ನಡೆಯುತ್ತಿರಲೇ ಇಲ್ಲ. ಆದರೆ ಅಂದಿನ ಅಧಿಕಾರಿಗಳು ಬ್ರಿಟಿಷರ ವಂಶಸ್ಥರಂತೆ ವರ್ತನೆ ಮಾಡುತ್ತಿದ್ದರು ಎಂದು ಆರೋಪಿಸಿದರು.

ರೈತರು ದುಡಿಯುವ ವರ್ಗ ಎಂಬ ಭಾವನೆ ಇತ್ತೇ ಹೊರತು, ಅನ್ನ ಹಾಕುವವರು ಎಂಬ ಭಾವನೆ ಇರಲಿಲ್ಲ. ರೈತರು ನ್ಯಾಯಕ್ಕಾಗಿ ಬೀದಿಗಿಳಿಯದಂತೆ ಹದ್ದುಬಸ್ತಿನಲ್ಲಿಡಲು ಸರ್ಕಾರ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಅನ್ನ ಹಾಕುವ ರೈತರಿಗೆ ಗುಂಡಿಕ್ಕಿದ್ದು ಯಾವ ಪ್ರಜಾಪ್ರಭುತ್ವ? ಆ ಘಟನೆಯಿಂದ ಹುಟ್ಟಿದ ರೈತ ಸಂಘ, ಅಂದು ಆಡಳಿತದಲ್ಲಿದ್ದ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಇದಾದ ಬಳಿಕ ರೈತ ಸಂಘದಿಂದ ಅಧಿಕಾರಕ್ಕೇರಿದ ರಾಜಕಾರಣಿಗಳೇ ಸಂಘದಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದರು ಎಂದು ಹೇಳಿದರು.

ಸಂಘದ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ, ರೈತರ ಸಮಸ್ಯೆಗಳಿಗೆ ದಿಕ್ಕು ಕಾಣುವ ನಿಟ್ಟಿನಲ್ಲಿ ಹೋರಾಟ ಕೈಗೊಳ್ಳುವುದು ಅನಿವಾರ್ಯ. ಸರ್ಕಾರಗಳ ನೀತಿಗಳಿಂದ ರೈತರು ಸಾಯುವಂತಾಗಿದೆ. ಹೀಗಾಗಿ ಪ್ರತಿ ಗ್ರಾಮಗಳಲ್ಲಿ ರೈತರ ಧ್ವನಿ ಹೆಚ್ಚಾಗಬೇಕಿದೆ. ಇದರಿಂದ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಮಹಿಳಾ ಘಟಕದ ಉಪಾಧ್ಯಕ್ಷೆ ಅನಸೂಯಾ- ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬರಗಾಲ ಆವರಿಸಿದ್ದರೂ ಜನಪ್ರತಿನಿಧಿಗಳು ತಮ್ಮ ಅಧಿಕಾರಕ್ಕಾಗಿ ರೆಸಾರ್ಟ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸ್ವಾರ್ಥ ರಾಜಕಾರಣಿಗಳು ಮುಂದಿನ ಬಾರಿ ಮತ ಕೇಳಲು ಆಗಮಿಸಿದಾಗ ಮಹಿಳೆಯರು ಪೊರಕೆಯಲ್ಲಿ ಹೊಡೆಯಬೇಕು ಎಂದರು.

ರೈತ ಮುಖಂಡರಾದ ಬಸಂತ ಕಾಂಬಳೆ, ಮಂಜುನಾಥಗೌಡ, ಮಹಾಂತೇಶ ಪೂಜಾರ, ಗಣೇಶ ಇಳಗಾರ, ಜೆ. ಕಾರ್ತಿಕ, ಹಸಿರು ಸೇನೆ ಸಂಚಾಲಕ ಆನಂದ ಪಾಟೀಲ, ಲಕ್ಷ್ಮಣ ಸ್ವಾಮಿ, ಶಶಿಕಾಂತ ಪಡಸಲಗಿ, ಫಾರುಕ್ ಕಿಲ್ಲೇದಾರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಹಾದಾಯಿ ಯೋಜನೆ ಕಾಲಮಿತಿಯಲ್ಲಿ ಮುಗಿಸುವುದು, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಾಪಸಾತಿ, ಕಬ್ಬಿಗೆ ಎಸ್​ಎಪಿ ದರ ಘೊಷಣೆ ಮಾಡುವುದು ಸೇರಿ ಒಟ್ಟು 11 ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟರು.

ಸಂಘದ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ರೈತ ಮುಖಂಡರು ಭಾಗವಹಿಸಿದ್ದರು. ಇದಕ್ಕೂ ಪೂರ್ವದಲ್ಲಿ ನಗರದ ಹಳೇ ಎಪಿಎಂಸಿ ಆವರಣದಿಂದ ಕಲಾಭವನವರೆಗೆ ಬೃಹತ್ ರ‍್ಯಾಲಿ ನಡೆಸಿದರು.

Leave a Reply

Your email address will not be published. Required fields are marked *