ಗದಗ: ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ, ಕೋವಿಡ್ ನಿರ್ವಹಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ನಿಂದ ಜಿಲ್ಲಾಡಳಿತ ಭವನದ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಕೋವಿಡ್-19 ಪರಿಸ್ಥಿತಿ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ನಡೆಸಿದೆ. ಎಪಿಎಂಸಿ, ಕಾರ್ವಿುಕ ಕಾಯ್ದೆ ತಿದ್ದುಪಡಿಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕರೊನಾ ದಾಳಿಗೆ ಸಿಕ್ಕಿ ರಾಜ್ಯದ ಜನರು ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆರೋಗ್ಯ ಸಚಿವರೇ ಕರ್ನಾಟಕವನ್ನು ದೇವರೇ ಕಾಪಾಡಬೇಕೆಂದು’ ಹೇಳಿರುವುದು ವಸ್ತುಸ್ಥಿತಿಯ ಗಾಂಭೀರ್ಯ ಸೂಚಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿದರು. ನಂತರ ಜಿಲ್ಲಾಧಿಕಾರಿ ಸುಂದರೇಶಬಾಬು ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ, ಜಿಪಂ ಸದಸ್ಯ ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ, ಬಸವರಾಜ ಕಡೇಮನಿ, ಪ್ರಭು ಬುರಬುರೆ, ರವೀಂದ್ರ ಮೂಲಿಮನಿ, ಬರ್ಕತ್ ಅಲಿ, ಸುಜಾತಾ ದೊಡ್ಡಮನಿ, ವಿದ್ಯಾಧರ ದೊಡ್ಡಮನಿ, ಉಮರ್ ಫಾರೂಕ್ ಹುಬ್ಬಳ್ಳಿ, ಮಾರ್ತಾಂಡಪ್ಪ ಹಾದಿಮನಿ, ರಾಮಣ್ಣ ಫಲದೊಡ್ಡಿ, ಸರ್ಫರಾಜ್ ಬಬರ್ಚಿ ಇತರರು ಇದ್ದರು.