ಭೂಲೋಕಕ್ಕೆ ದೇವರ ವಿದಾಯ

ವಿಜಯವಾಣಿ ಸುದ್ದಿಜಾಲ ಗದಗ
ಭೂಲೋಕಕ್ಕೆ ದೇವರ ವಿದಾಯ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲಾದ್ಯಂತ ಭಕ್ತರು, ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮ, ವಿವಿಧ ಶಾಲಾ-ಕಾಲೇಜ್ ಹಾಗೂ ಸಂಘ-ಸಂಸ್ಥೆಗಳ ಕಚೇರಿಗಳಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ನಡೆದಾಡುವ ದೇವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದರು.
ತೋಂಟದಾರ್ಯ ಮಠದಲ್ಲಿ ಮೌನಾಚರಣೆ:ನಗರದ ತೋಂಟದಾರ್ಯ ಮಠದಲ್ಲಿ ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಸಿಬ್ಬಂದಿ, ಶಾಲಾ-ಕಾಲೇಜ್ ಸಿಬ್ಬಂದಿ ಹಾಗೂ ಶ್ರೀಮಠದಲ್ಲಿ ಭಕ್ತರು ಎರಡು ನಿಮಿಷಗಳ ಕಾಲ ಮೌನಾಚರಿಸಿ, ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿದರು.
ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರದ್ಧಾಂಜಲಿ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಲ್ಲಯ್ಯಜ್ಜನವರ ಸಾನ್ನಿಧ್ಯದಲ್ಲಿ ಎರಡು ನಿಮಿಷಗಳ ಮೌನಾಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜಸ್ವಾಮಿ ಹಿಡ್ಕಿಮಠ ಮಾತನಾಡಿ, ಸಿದ್ದಗಂಗಾ ಶ್ರೀಗಳು ಕಾರುಣ್ಯಮೂರ್ತಿಗಳಾಗಿದ್ದರು. ವೀರೇಶ್ವರ ಪುಣ್ಯಾಶ್ರಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾಗದ ನಷ್ಟ ಎಂದು ಸ್ಮರಿಸಿದರು.
ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ಪುಷ್ಪನಮನ: ಜೆಡಿಎಸ್ ಕಾರ್ಯಾಲಯದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖಂಡರಾದ ಗುರುರಾಜ ಕುಲಕರ್ಣಿ, ಬಸವರಾಜ ಅಪ್ಪಣ್ಣವರ, ರಾಮಣ್ಣ ಹೂವಣ್ಣವರ, ಮಂಜುನಾಥ ಅಣ್ಣಿಗೇರಿ, ಅಂದಾನಯ್ಯ ಮುನವಳ್ಳಿಮಠ, ಪರಮೇಶ ಯಳವತ್ತಿ, ಈಶ್ವರಯ್ಯ ನಮಸ್ತೆಮಠ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮುಸ್ಲಿಂ ಸಮುದಾಯದ ಪ್ರಾರ್ಥನೆ: ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹಿ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರು ಶೀಘ್ರ ಗುಣಮುಖರಾಗಲಿ ಎಂದು ಸ್ಥಳೀಯ ಅಂಜುಮನ್ ಕಮಿಟಿ ಸಹಯೋಗದಲ್ಲಿ ಮೌಲ್ವಿ ಹಫೀಜ್ ಸಲೀಂ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ತೋಂಟದಾರ್ಯ ಮಠ ಹಾಗೂ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.
ಅಶ್ರುತರ್ಪಣ: ಗದಗ ನಗರದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಜಿಲ್ಲಾ ಒಕ್ಕೂಟ, ಸ್ಥಳೀಯ ಕನಕದಾಸ ಶಿಕ್ಷಣ ಸಮಿತಿಯ ಕೆಎಸ್​ಎಸ್ ಮಹಾವಿದ್ಯಾಲಯ ಡಾ. ಶಿವಕುಮಾರ ಶ್ರೀಗಳಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷರಾದ ಡಾ. ಬಿ.ಎಫ್.ದಂಡಿನ, ಪ್ರಾಚಾರ್ಯ ಡಾ. ಟಿ.ಎನ್. ಗೋಡಿ, ಡಾ. ಎಂ.ಎಸ್. ನರೇಗಲ್ಲ, ಡಾ. ಎನ್.ಎಂ. ಅಂಬಲಿ, ಡಾ. ಜಿ.ಸಿ. ಜಂಪಣ್ಣವರ ಇದ್ದರು. ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಎರಡು ನಿಮಿಷಗಳ ಕಾಲ ಮೌನಾಚರಿಸುವ ಮೂಲಕ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್.ಆರ್. ಗಿಡ್ಡಕೆಂಚಣ್ಣವರ ಹಾಗೂ ಸಿಬ್ಬಂದಿ ಇದ್ದರು.
ನಗರದ ಕೆಎಲ್​ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪದವಿ ಕಾಲೇಜ್ ಪ್ರಾಚಾರ್ಯ ಸಿ. ಲಿಂಗಾರೆಡ್ಡಿ, ಪಪೂ ಕಾಲೇಜ್ ಪ್ರಾಚಾರ್ಯ ಎಂ.ಎಂ. ನರಗುಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
“ಶಿವಕುಮಾರ ಸ್ವಾಮೀಜಿ ಅವರು ಜನಾನುರಾಗಿಯಾಗಿದ್ದರು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವರ ಜೀವನವನ್ನೇ ಮುಡುಪಾಗಿಟ್ಟಿದ್ದರು. ಶಿಕ್ಷಣ, ದಾಸೋಹ, ಸಾಮಾಜಿಕ ಸೇವಾ ಕೈಂಕರ್ಯ ಅನನ್ಯವಾಗಿತ್ತು. ಶ್ರೀಗಳ ಅಗಲಿಕೆಯಿಂದ ನಾಡಿನ ಧಾರ್ವಿುಕ ಹಾಗೂ ಶೈಕ್ಷಣಿಕ ರಂಗಕ್ಕೆ ತುಂಬಲಾಗದ ನಷ್ಟವಾಗಿದೆ.”
ಕಲ್ಲಯ್ಯಜ್ಜನವರು, ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ
“ನಡೆದಾಡುವ ದೇವರೆಂದೇ ಕರೆಯುವ ತುಮಕೂರ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಸವರು ತ್ರಿವಿಧ ದಾಸೋಹಿ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಡಾ. ಶಿವಕುಮಾರ ಸ್ವಾಮೀಜಿ ಅವರು ಶಿವೈಕ್ಯರಾಗಿದ್ದರಿಂದ ದೇಶ ಒಬ್ಬ ಮಹಾನ್ ಸಾಧಕರನ್ನು ಕಳೆದುಕೊಂಡಿದೆ. ಅವರು ಶಿಕ್ಷಣದ ಮೂಲಕ ಜಾತ್ಯತೀತತೆ ಮತ್ತು ಸಮಾನತೆ ತರುವಲ್ಲಿ ಬಹಳಷ್ಟು ಪರಿಶ್ರಮಿಸಿದ್ದಾರೆ. ಅಂತಹ ಒಬ್ಬ ಮಹಾನ್ ಸಾಧಕರನ್ನು ಕಳೆದುಕೊಂಡ ನಾಡಿಗೆ ತುಂಬಲಾರದ ನಷ್ಟವಾಗಿದೆ.”
|ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ