ಭೂಮಿ ಬಡ್ತಿ ಕಾಯ್ದೆ ಜಾರಿಗೆ ಆಗ್ರಹ

ಚಿಕ್ಕಮಗಳೂರು: ಸಂವಿಧಾನ ಬದ್ಧ ಹಕ್ಕಾದ ಭೂಮಿ ಬಡ್ತಿ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎಲ್.ಶ್ರೀಕಾಂತ್ ಮಾತನಾಡಿ, ಭೂಮಿ, ವಸತಿ, ಉದ್ಯೋಗ, ನಿವೇಶನ, ಕುಡಿಯಲು ನೀರಿನ ಸಮಸ್ಯೆಯಿಂದ ವಂಚಿತರಾಗಿದ್ದಾರೆ. 1950ರಿಂದ ಈವರೆಗೆ ಎಸ್​ಸಿ-ಎಸ್​ಟಿ ಬಡ್ತಿ ಮೀಸಲಾತಿ ಮುಂದುವರಿಸಿಕೊಂಡು ಬಂದಿರುತ್ತದೆ. ಈಗ ಸಂವಿಧಾನಬದ್ಧ ಹಕ್ಕಾದ ಭೂಮಿ ಬಡ್ತಿ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸರಪನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 3 ವರ್ಷದಿಂದ ಹೊರಗುತ್ತಿಗೆ ನೌಕರನೊಬ್ಬ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅಡುಗೆ ಮಾಡುವ ವಿಚಾರದಲ್ಲಿ ಪ್ರಾಚಾರ್ಯರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮನನೊಂದು ವಿಷ ಸೇವಿಸಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ. ಸಖರಾಯಪಟ್ಟಣ ಪೊಲೀಸರು ಆಸ್ಪತ್ರೆಗೆ ಬಂದು ಹೇಳಿಕೆ ಪಡೆದು ಪೊಲೀಸ್ ವರದಿಯಲ್ಲಿ ವೇಣು ಹೆಸರನ್ನು ಕೈಬಿಟ್ಟಿರುತ್ತಾರೆ. ತಕ್ಷಣವೆ ಪ್ರಾಚಾರ್ಯರ ಮೇಲೆ ಸೂಕ್ತ ಕ್ರಮ ಕೈಗೊಂಡು ಸಂತೊಷ್​ಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.