ಭೂಮಿ ಕಿತ್ತುಕೊಂಡರೆ ಸುಮ್ನಿರಲ್ಲ

ಗುಬ್ಬಿ: ರೈತರು ಉಳುಮೆ ಮಾಡದರೆ ಬೀಳು ಬಿಟ್ಟ ಜಮೀನಿನ್ನು ಸರ್ಕಾರ ಕಿತ್ತುಕೊಳ್ಳಲು ಮುಂದಾದರೆ ರೈತ ಸಂಘ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಗುಡುಗಿದರು.

ಬೆಲವತ್ತದಲ್ಲಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಸಿಎಂ ಇಂಥ ತಪ್ಪು ಕೆಲಸಕ್ಕೆ ಕೈ ಹಾಕಬಾರದು. ರೈತರಿಗೆ ಮೋಸವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

ಈಗಾಗಲೇ ರೈತರು ಮಳೆ ಬೆಳೆ ಇಲ್ಲದೆ, ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ. ಇಂತಹ ಸ್ಥಿತಿಯಲ್ಲಿ ರೈತರ ನೆರವಿಗೆ ಉತ್ತಮ ಬೆಲೆ, ನೀರಾವರಿ ಯೋಜನೆ ನೀಡುವ ಬಗ್ಗೆ ಸಿಎಂ ಆಲೋಚಿಸಬೇಕಿತ್ತು. ಆದರೆ, ಅದು ಬಿಟ್ಟು ಬಂಡವಾಳಶಾಹಿಗಳಿಗೆ ನೀಡಿ ಹಣ ಮಾಡಲು ಹೊರಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ರಾಜಕೀಯ ವಿಚಾರ: ಸಾಲಮನ್ನಾ ವಿಚಾರ ಇವತ್ತು ಪಕ್ಷಗಳಿಗೆ ರಾಜಕೀಯ ವಿಷಯವಾಗಿದೆ. ಈವರೆಗೆ ಸಾಲಮನ್ನಾದ ಬಗ್ಗೆ ಸ್ಪಷ್ಟತೆ ಇಲ್ಲ. 2019 ಲೋಕಸಭೆ ಚುನಾವಣೆವರೆಗೂ ಸಾಲ ಮನ್ನಾ ವಿಚಾರ ಚರ್ಚೆಗೆ ಬರುತ್ತಲೆ ಇರುತ್ತದೆ. ರೈತರ ಬದುಕು ಹಸನಾಗಲಿ ಎಂಬ ದೃಷ್ಟಿಯಿಂದ ಸಾಲಮನ್ನಾ ಮಾಡಿಲ್ಲ. ಬದಲಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಮತಕ್ಕಾಗಿ ನಾಟಕವಾಡುತ್ತಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಗಂಗಾಧರಯ್ಯ ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕಳೆದ 10 ವರ್ಷದಲ್ಲಿ 19 ಸಾವಿರ ರೈತರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ನಮ್ಮನ್ನಾಳುವ ಸರ್ಕಾರಗಳಿಗೆ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ. ರೈತ ಸಂಘದ ಪದಾಧಿಕಾರಿಗಳು ಎಚ್ಚೆತ್ತು ಸರ್ಕಾರದ ವಿರುದ್ಧ ಹೋರಾಟ ಮಾಡಿಯೇ ಸೌಲಭ್ಯ ಪಡೆಯಬೇಕಿದೆ. ರೈತರೂ ಮೋಸ ಮಾಡುವ ರಾಜಕೀಯ ಪಕ್ಷಗಳ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.

ಬೆಲವತ್ತ ಗ್ರಾಮ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಿ ಹಸಿರು ದೀಕ್ಷೆ ನೀಡಲಾಯಿತು. ಮುಖಂಡರಾದ ಲಕ್ಕೇಗೌಡ, ತಮ್ಮಣ್ಣ, ವೆಂಕಟೇಶ್​ಗೌಡ, ಕಾಳೇಗೌಡ, ಜಗದೀಶ್, ಹುಚ್ಚೇಗೌಡ, ಮೂಡ್ಲಪ್ಪ, ಪ್ರಭಾಕರ್, ಶಿವಕುಮಾರ್ ಮತ್ತಿತರರಿದ್ದರು.

ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರಾದಿಯಾಗಿ ಎಲ್ಲರೂ ನಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎಂದು ಹೇಳುತ್ತಾರೆ. ಆದರೆ, ರೈತಪರ ಯೋಜನೆಯನ್ನೇ ಜಾರಿ ಮಾಡಲ್ಲ. ಬೇಡಿಕೆ ಈಡೇರಿಸಿ ಎಂದರೆ ಮೌನವಾಗುತ್ತಾರೆ. ಹಾಗಾದರೆ ಇವರು ಹೇಗೆ ರೈತರ ಮಕ್ಕಳಾಗಲು ಸಾಧ್ಯ?

| ಕೆ.ಟಿ.ಗಂಗಾಧರ್ ರಾಜ್ಯಾಧ್ಯಕ್ಷ , ರೈತಸಂಘ