ಭೂಗಳ್ಳರಿಂದ ಬಡ್ಡಿಹಳ್ಳಿ ಕೆರೆ ಒತ್ತುವರಿ?

ವಿಶೇಷ ವರದಿ ತುಮಕೂರು

ಬಡ್ಡಿಹಳ್ಳಿ ಕೆರೆ ಅಂಗಳ ಕಬಳಿಸುವ ಪ್ರಯತ್ನ ನಡೆಯುತ್ತಿದ್ದರೂ, ಪಾಲಿಕೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕ್ಯಾತಸಂದ್ರದ 32 ಹಾಗೂ 33ನೇ ವಾರ್ಡ್​ಗೆ ಹೊಂದಿಕೊಂಡಿರುವ ಕೆರೆ ಮೇಲೆ ಭೂಗಳ್ಳರು ಕಣ್ಣು ಹಾಕಿದ್ದಾರೆ. ಕ್ಯಾತಸಂದ್ರ, ಬಡ್ಡಿಹಳ್ಳಿ, ಶೆಟ್ಟಿಹಳ್ಳಿ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿರುವ ಬಡ್ಡಿಹಳ್ಳಿ ಕೆರೆ 46 ಎಕರೆ ಪ್ರದೇಶದಲ್ಲಿದೆ. ಕೆರೆ ಅಂಗಳಕ್ಕೆ ಲೋಡ್​ಗಟ್ಟಲೆ ಕಟ್ಟಡತ್ಯಾಜ್ಯ, ಮಣ್ಣು ಸುರಿದು ಜೆಸಿಬಿ ಯಂತ್ರದಲ್ಲಿ ಸಮತಟ್ಟು ಮಾಡುತ್ತಿದ್ದು, ಸ್ಥಳೀಯ ಕಾಪೋರೇಟರ್, ಪಾಲಿಕೆ ಅಧಿಕಾರಿಗಳು ಈ ಕಡೆ ಸುಳಿಯದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗಗನಕ್ಕೇರಿರುವ ಭೂಮಿ ಬೆಲೆ: ಪ್ರಭಾವಿಯೊಬ್ಬರು ಈ ಜಾಗ ತಮಗೆ ಸೇರಿದೆ ಎಂದು ದಾಖಲೆ ಸೃಷ್ಟಿಸಿ ಕೆರೆ ಅಂಗಳವನ್ನೇ ಒತ್ತುವರಿ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಬೆಲೆಬಾಳುವ ಸರ್ಕಾರಿ ಜಾಗವನ್ನೇ ನುಂಗುವ ಪ್ರಯತ್ನ ರಾತ್ರೋರಾತ್ರಿ ನಡೆದಿದೆ. ಕೆರೆಕಟ್ಟೆ ಸಂರಕ್ಷಿಸುವಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ಕಾನೂನುಬಾಹಿರವಾಗಿ ಪ್ರಭಾವಿಗಳು ಕಬಳಿಸಲು ಹೊರಟಿದ್ದು, ಇನ್ನಾದರೂ ಪಾಲಿಕೆ ಅಥವಾ ಟೂಡಾ ಕೆರೆ ಸಂರಕ್ಷಿಸಲು ಎಚ್ಚೆತ್ತುಕೊಳ್ಳಬೇಕಿದೆ.

ನಗರವ್ಯಾಪ್ತಿಯ ಬಹುತೇಕ ಕೆರೆ-ಕಟ್ಟೆಗಳು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿ, ಸರಹದ್ದು ಗುರುತಿಸಬೇಕಿದೆ. ಕೆರೆ ಸಂರಕ್ಷಿಸುವ ಯೋಜನೆಗೆ ಪಾಲಿಕೆಯಾಗಲಿ, ತುಮಕೂರು ಅಭಿವೃದ್ಧಿ ಪ್ರಾಧಿಕಾರವಾಗಲಿ ಕ್ರಮತೆಗೆದುಕೊಂಡಿಲ್ಲ.

| ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ

ಕೆರೆ ಅಂಗಳದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಕೆರೆ ಅಂಗಳದ ಒಂದಿಂಚು ಜಾಗವನ್ನೂ ಒತ್ತುವರಿ ಮಾಡಲು ಬಿಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಹೋಗಿ ಅಲ್ಲಿ ನಡೆಯುತ್ತಿರುವ ಕೆಲಸ ನಿಲ್ಲಿಸಲು ಸೂಚಿಸಿದ್ದೇನೆ. ದಾಖಲೆ ಪರಿಶೀಲಿಸಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

| ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *