ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಕಳಪೆ

ಶಿವಮೊಗ್ಗ: ನಗರದಲ್ಲಿ ಭೂಗತ ಕೇಬಲ್(ಯುಜಿ) ಅಳವಡಿಕೆ ಕಾಮಗಾರಿ ಸಮಪರ್ಕವಾಗಿಲ್ಲ. ಭೂಗತ ಹೈಟೆನ್ಷನ್ ಕೇಬಲ್ ಅಳವಡಿಸುವಲ್ಲಿ ಮಾನದಂಡಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಪ್ರಮುಖ ಅಶೋಕ್ ಯಾದವ್ ಆರೋಪಿಸಿದರು.

ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆ ಮೂಲಕ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಯುಜಿ ಕೇಬಲ್ ಅಳವಡಿಸಲು 44 ಕೋಟಿ ರೂ. ಮಂಜೂರಾಗಿದೆ. ಎರಡು ಪ್ರಮುಖ ಕಂಪನಿಗಳು ಇದರ ಗುತ್ತಿಗೆ ಪಡೆದಿವೆ. ಆದರೆ ನಿಯಮದಂತೆ ಕೆಲಸ ನಡೆಯುತ್ತಿಲ್ಲ ಎಂದು ದೂರಿದರು.

ವಿನೋಬ ನಗರ ಸೂಡಾ ಕಚೇರಿ ಸಮೀಪ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮೆಸ್ಕಾಂ ಎಸ್​ಇ ನರೇಂದ್ರ, ಎಇಇ ರವೀಂದ್ರ ಮಂಗಳವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಪೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಅಶೋಕ್ ಯಾದವ್, ಮುಖ್ಯರಸ್ತೆ ಪಕ್ಕದಲ್ಲಿ 1.6 ಮೀಟರ್ ಹಾಗೂ ಅಡ್ಡ ರಸ್ತೆಗಳ ಪಕ್ಕದಲ್ಲಿ 1.2 ಮೀಟರ್ ಕೇಬಲ್ ಅಳವಡಿಸಬೇಕೆಂಬ ಷರತ್ತು ಇದೆ. ಆದರೆ ಗುತ್ತಿಗೆದಾರರು ಇದನ್ನು ಉಲ್ಲಂಘಿಸಿದ್ದಾರೆ ಎಂದರು.

ಈಗಾಗಲೆ ಕುಡಿಯುವ ನೀರಿನ ಪೈಪ್ ಅಳವಡಿಕೆಯಾಗಿದೆ. ಅದಕ್ಕಿಂತಲೂ ಮೇಲ್ಭಾಗದಲ್ಲಿ ಯುಜಿ ಕೇಬಲ್ ಹಾಕಿರುವುದರಿಂದ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸಬಹುದೆಂದು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೆ ಈಗಾಗಲೆ ನಾವು ಟೆಂಡರ್​ದಾರರಿಗೆ ನೋಟಿಸ್ ನೀಡಿದ್ದೇವೆ ಎನ್ನುತ್ತಾರೆ.

ಎಷ್ಟು ಅಡಿ ಆಳದಲ್ಲಿ ಯುಜಿ ಕೇಬಲ್ ಅಳವಡಿಸಬೇಕು ಎನ್ನುವುದರ ಬಗ್ಗೆ ಮೆಸ್ಕಾಂ ಅಧಿಕಾರಿಗಳಲ್ಲಿಯೇ ಗೊಂದಲವಿದೆ. ಸ್ಮಾರ್ಟ್​ಸಿಟಿ ಯೋಜನೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಕೇಳಿದರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಪಾಲಿಕೆ ಪ್ರತಿನಿಧಿಗಳಿಗೂ ಇದರ ಬಗ್ಗೆ ಮಾಹಿತಿಯಿಲ್ಲ ಎಂದರು. ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ಹಾಗೂ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು ಇದ್ದರು.