ಭುಜನೋವು ನಿವಾರಿಸುವ ಆಸನಗಳು

  • ಭುಜದಲ್ಲಿ ತುಂಬಾ ನೋವು ಬರುತ್ತದೆ. ಇದರ ನಿವಾರಣೆಗೆ ಮಾಡಬೇಕಾದ ಆಸನಗಳನ್ನು ತಿಳಿಸಿ.

| ಸುರೇಶ್ ಹರಿಹರ

ಭುಜದ ಕೀಲುಗಳು ಸಾಕಷ್ಟು ನೋವು ಕೊಡುತ್ತವೆ. ಆಫೀಸಿನ ಕೆಲಸಗಳು ಹಾಗಿರಲಿ, ನಿತ್ಯ ವೈಯಕ್ತಿಕ ಕೆಲಸಗಳಿಗೇ ಕೈಗಳನ್ನು ಮೇಲೆತ್ತಲು, ನೀರು ಕುಡಿಯಲು, ಬೆನ್ನನ್ನು ಕೆರೆದುಕೊಳ್ಳಲು ಅಸಾಧ್ಯ. ಅಪಾರ ವೇದನೆ, ಹಿಂಸೆ ಆಗುತ್ತಲೇ ಇರುತ್ತದೆ. ಕೀಲುಗಳು ಚಲನವಲನಕ್ಕೆ ಸೂಕ್ತವಾಗಿ ಸಹಕರಿಸದೆ ಇರುವುದೇ ಇದಕ್ಕೆ ಕಾರಣ. ಆಗಾಗ್ಗೆ ಕಾಡುವ ನೋವು ಕ್ರಮೇಣ ನಿರಂತರವಾಗುತ್ತದೆ. ಭುಜಗಳ ಚಲನೆಯು ಬಹಳ ಮಟ್ಟಿಗೆ ನಿಂತುಹೋಗುತ್ತದೆ. ನೋವನ್ನು ತಿಳಿಸುವ ನರವಾಹಕಗಳು ಹಾಳಾಗಿ ನೋವು ಕಡಿಮೆಯಾಗುತ್ತದೆ ಮತ್ತು ಕೀಲು ನಿಸ್ತೇಜವಾಗುತ್ತದೆ. ಯೋಚನೆ ಬೇಡ. ಸಮಾಧಾನದಿಂದ ಅಭ್ಯಾಸ ಮಾಡಿದರೆ ಯೋಗದಲ್ಲಿ ಉತ್ತರ ಇದೆ.

ಆರ್ಥರೈಟಿಕ್ ಭುಜ, ಮಣಿಕಟ್ಟು ಮತ್ತು ಬೆರಳುಗಳು

ಭುಜಗಳಲ್ಲಿನ ಆಸ್ಟಿಯೋಆರ್ಥರೈಟಿಸ್ ಗುಣಪಡಿಸುವ ಆಸನಗಳನ್ನು ಅಭ್ಯಾಸ ಮಾಡುವುದರಿಂದ ಕೀಲುಗಳಲ್ಲಿ ನಿಧಾನವಾಗಿ ಚಲನೆ ಉಂಟಾಗುತ್ತದೆ. ಇದರಿಂದ ಕೀಲುಗಳು ಸಡಿಲವಾಗಿ, ಸಂಕುಚನಗೊಂಡ ಹಾಗೂ ಪೆಡಸುಗೊಂಡ ಮಾಂಸಖಂಡಗಳು ರಿಲ್ಯಾಕ್ಸ್ ಆಗುತ್ತವೆ. ತಾಡಾಸನ, ಶೀರ್ಷಾಸನ ಹಾಗೂ ಇದರ ವಿವಿಧಾಕಾರಗಳು, ಅಧೋಮುಖ ಶ್ವಾನಾಸನ, ಊರ್ಧ್ವಧನುರಾಸನ ಇತ್ಯಾದಿಗಳು ಕೀಲುಗಳಲ್ಲಿನ ಸಂದುಗಳನ್ನು ಹೆಚ್ಚಿಸಿ ಬಹುಮಟ್ಟಿಗೆ ಉಪಶಮನ ನೀಡುತ್ತವೆ. ಭಾರ ಹೊರುವ ಸಾಮರ್ಥ್ಯ ನೀಡಲು ಸಹಾಯ ಮಾಡುತ್ತವೆ.

ಸೂಚಿತ ಆಸನಗಳು

ನಿಮ್ಮ ಸಮಸ್ಯೆ ಗುಣ ಪಡಿಸಲು ನಿಂತು ಮಾಡುವ ವಿವಿಧ ಆಸನಗಳು, ತಲೆಕೆಳಗಾಗಿ ಮಾಡುವ ಆಸನಗಳು, ಹಿಂದೆ ಹಾಗೂ ಮುಂದೆ ಬಾಗುವ ಆಸನ, ತಿರುಗುವ ಆಸನ ಹಾಗೂ ಸಮತೋಲನ ಮಾಡುವ ಆಸನಗಳು ಅತ್ಯಂತ ಬಹಳ ಸಹಕಾರಿ. ಸಾಮಾನ್ಯ ವ್ಯಕ್ತಿಗೆ ಮಾಡಿಸುವ ಅಭ್ಯಾಸಗಳೆಂದರೆ, ಕಿಟಕಿಯ ಸರಳುಗಳನ್ನು ಹಿಂಬದಿಯಿಂದ ಹಿಡಿದುಕೊಳ್ಳುವುದು, ಪಶ್ಚಿಮ ನಮಸ್ಕಾರ (ಹಿಂದಿನಿಂದ ಕೈಗಳನ್ನು ಜೋಡಿಸಿ ನಮಸ್ಕರಿಸುವುದು), ತೋಳನ್ನು ಹಿಂಬದಿಯಿಂದ ಬೆಲ್ಟ್ ಸಹಾಯದಿಂದ ಬಿಗಿಯುವುದು, ಕೈಗಳನ್ನು ಹಿಂಬದಿಯಿಂದ ಸೆಳೆದು ಬಂಧಿಸುವುದು, ಕೈಗಳನ್ನು ಹಿಂದಕ್ಕೆ ಎಳೆಯುತ್ತಾ ಉತ್ಥಾನಾಸನ ಮಾಡುವುದು ಕ್ಷೇಮ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.

ಇಮೇಲ್: [email protected]

Leave a Reply

Your email address will not be published. Required fields are marked *