ಭುಜನೋವು ನಿವಾರಣೆ ಹೇಗೆ?

# ಕಳೆದ ಎಂಟು ವರ್ಷಗಳಿಂದ ಭುಜದ ನೋವು ಕಾಡುತ್ತಿದೆ. ಸಾಕಷ್ಟು ಔಷಧ ಸೇವಿಸಿದ್ದರೂ ಮತ್ತೆ ಮತ್ತೆ ಬರುತ್ತದೆ. ನಿವಾರಣೆಗೆ ಸೂಕ್ತ ಆಸನ ಮತ್ತು ಭಂಗಿಗಳನ್ನು ವಿವರಿಸಿ.

| ಮಾಲಿನಿ ರವಿಶಂಕರ್ ಶಿಕಾರಿಪುರ

ಭುಜದ ನೋವು ತಕ್ಷಣ ಅಥವಾ ಕ್ರಮೇಣ ಕಾಣಿಸಿಕೊಳ್ಳಬಹುದು. ಕೀಲುಗಳಲ್ಲಿ ಹೆಚ್ಚುತ್ತಿರುವ ಊತವು ರೋಗಿಯನ್ನು ವೈದ್ಯರ ಬಳಿಗೆ ಹೋಗುವಂತೆ ಮಾಡುತ್ತವೆ. ಚಳಿಗಾಲದಲ್ಲಿ ಸಲ್ಪ ನೋವು ಜಾಸ್ತಿಯೇ ಕಾಡುವುದು ಸಹಜ. ಏಕೆಂದರೆ ಚಲನೆ ಕಡಿಮೆ ಆಗಿರುತ್ತದೆ. ಕೀಲುಗಳು ಮೃದುವಾಗಿರುತ್ತವೆ. ಸಾಮಾನ್ಯವಾಗಿ ರಜ್ಜುಗಳು ಹಾಳಾಗಿರುತ್ತವೆ. ಕೀಲು ಸ್ಥಾನಾಂತರಗೊಂಡಿರಬಹುದು. ಕಾಯಿಲೆ ಉಂಟಾದ ಕೀಲುಗಳಲ್ಲಿ ಮುಂಜಾನೆ ಪೆಡಸುತನ, ನೋವು, ಸರಾಗವಾಗಿ ಚಲಿಸಲು ಕಷ್ಟವಾಗುತ್ತದೆ. ಶರೀರದ ಎಲ್ಲಾ ವ್ಯವಸ್ಥೆಗಳು ಬೇಗನೆ ಶಿಥಿಲವಾಗುತ್ತಿರುವುದರಿಂದ, ವಿಶೇಷವಾಗಿ ಕೀಲು ಜರಿತ ಹೊಂದಿದರೆ, ಈ ರೋಗ ರೀತಿಯನ್ನು ಗುಣಪಡಿಸುವುದು ಕಷ್ಟಸಾಧ್ಯ. ಇದು ಯಾವುದೇ ಕೀಲುಗಳನ್ನೂ ಆಕ್ರಮಿಸಿಕೊಳ್ಳಬಹುದು.

ಕೆಲವು ಭಂಗಿಗಳಿಂದ ನೋವಿನ ಪರಿಹಾರಕ್ಕೆ ಯತ್ನಿಸೋಣ. ಅತ್ಯಂತ ಸರಳ ಭಂಗಿಗಳಾದ ಇವನ್ನು ಸಮಸ್ಥಿತಿಯಲ್ಲಿ ವಿಶೇಷ ಭಂಗಿಗಳು ಎನ್ನುತ್ತಾರೆ. ನುರಿತ ತಜ್ಞರ ಅಥವಾ ಯೋಗಶಿಕ್ಷಕರ ಸಹಾಯದಿಂದ ಇವುಗಳನ್ನು ಅಭ್ಯಾಸ ಮಾಡಬಹುದು.

ಬದ್ಧಾಂಗುಲ್ಯಾಸನ: ಕೈಬೆರಳುಗಳನ್ನು ಪರಸ್ಪರ ಹೆಣೆದು ಹಸ್ತಗಳನ್ನು ಮೇಲ್ಮುಖ ಮಾಡಿ ಕೈಗಳನ್ನು ಮೇಲಕ್ಕೆ ಹಿಗ್ಗಿಸುವುದರಿಂದ ಭುಜಗಳಲ್ಲಿ ಹಾಗೂ ಮೊಣಕೈಗಳಲ್ಲಿನ ಪೆಡಸುತನ ದೂರವಾಗುತ್ತದೆ. ಮೊಣಕೈಗಳನ್ನು ಹಿಗ್ಗಿಸುವುದರಿಂದ ಬಿಗಿತ ಕಡಿಮೆ ಆಗುತ್ತದೆ. ಕೈಗಳ ಮಣಿಕಟ್ಟುಗಳಲ್ಲಿ ಚಲನೆ ಸುಲಭವಾಗುತ್ತದೆ. ಬೆರಳುಗಳಲ್ಲಿನ ನೋವು, ಬಿಗಿತ ಶಮನವಾಗಿ ಚಲನೆ ಸುಲಭವಾಗುತ್ತದೆ.

ತಾಡಾಸನ: ಬೆಲ್ಟ್ ಸಹಾಯದಿಂದ ತಾಡಾಸನ ಮಾಡುವುದರಿಂದ ಮೊಣಕೈಗಳು ಬಾಗುವುದಿಲ್ಲ. ಭುಜಗಳ ನೋವು ಕಡಿಮೆಯಾಗಲು ಈ ವಿಧಾನ ಸಹಕಾರಿ. ನೇರವಾಗಿ ನಿಲ್ಲಿ. ಕೈಗಳನ್ನು ಮುಂದಕ್ಕೆ ಚಾಚಿ. ಒಂದು ಬೆಲ್ಟನ್ನು ಮೊಣಕೈಗಳಿಗೆ ಹಾಕಿಕೊಂಡು ಕೈಗಳನ್ನು ಮುಂದಕ್ಕೆ ಚಾಚುತ್ತಾ ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿ. ಸಾಧ್ಯವಾದಷ್ಟೂ ಭುಜಗಳಿಂದ ಕೈಗಳನ್ನು ಮೇಲಕ್ಕೆ ಚಾಚಿ ಹಿಗ್ಗಿಸಬೇಕು. ಕನಿಷ್ಠ ಅರ್ಧದಿಂದ ಒಂದು ನಿಮಿಷ ಈ ಸ್ಥಿತಿಯಲ್ಲಿರಬೇಕು.

ತಾಡಾಸನ: ವಿಧಾನ 2 ನೇರವಾಗಿ ನಿಲ್ಲಿ. ಕೈಗಳನ್ನು ಹಿಂದಕ್ಕೆ ಚಾಚಿ. ಒಂದು ಬೆಲ್ಟನ್ನು ಮೊಣಕೈಗಳಿಗೆ ಅಥವಾ ಮೇಲ್ದೋಳಿಗೆ ಧರಿಸಿ. ಭುಜಗಳಿಂದ ಕೈಗಳನ್ನು ಪಕ್ಕಕ್ಕೆ ಮತ್ತು ಕೆಳಕ್ಕೆ ಹಿಗ್ಗಿಸಿ. ಕನಿಷ್ಠ ಅರ್ಧದಿಂದ ಒಂದು ನಿಮಿಷ ಸ್ಥಿತಿಯಲ್ಲಿರಬೇಕು. ಇದರಿಂದ ಭುಜಗಳಲ್ಲಿನ ಪೆಡಸುತನ ದೂರವಾಗಿ ಚಲನೆ ಸರಳವಾಗುತ್ತದೆ. ನೋವು ದೂರ.

Leave a Reply

Your email address will not be published. Required fields are marked *