ಭಿನ್ನಮತ ಶಮನಕ್ಕೆ ಬಿಎಸ್​ವೈ ಯತ್ನ !

ತುಮಕೂರು: ಲೋಕಸಮರಕ್ಕೆ ಅಣಿಯಾಗಿರುವ ಬಿಜೆಪಿ ಜಿಲ್ಲಾ ಘಟಕದ ಭಿನ್ನಮತ ಶಮನಕ್ಕೆ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ನಡೆಸಿದ ಯತ್ನ ಬಹುತೇಕ ಯಶ ಕಂಡಿದೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರನ್ನು ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಕೆಲ ಅತೃಪ್ತರು ಅಸಮಾಧಾನ ಹೊರಹಾಕಿದ್ದರು. ಹಾಗಾಗಿ, ಆರಂಭದಲ್ಲೇ ಪಕ್ಷದೊಳಗಿನ ಭಿನ್ನಮತ ಚುವುಟಿ ಹಾಕಲು ಖುದ್ದು ಬಿಎಸ್​ವೈ ಅಖಾಡಕ್ಕಿಳಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಸಮಾಧಾನ ತಂದಿದೆ.

ಬೆಂಗಳೂರು ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಬಿ.ಸುರೇಶ್​ಗೌಡ ಸೇರಿ ಜಿಲ್ಲೆಯ ಪ್ರಮುಖ ಮುಖಂಡರ ಸಭೆ ಕರೆದಿದ್ದ ಯಡಿಯೂರಪ್ಪ ಪಕ್ಷದ ಗೆಲುವು ಮುಖ್ಯ. ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬುದಷ್ಟು ನಮ್ಮ ಮುಂದಿರುವ ಏಕೈಕ ಗುರಿ. ಈ ಹಿನ್ನೆಲೆಯಲ್ಲಿ ನಮ್ಮೊಳಗಿನ ಸಣ್ಣಪುಟ್ಟ ಅಸಮಾಧಾನ ಬದಿಗಿರಿಸಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದರು.

ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಸಹ ಹಾಜರಿದ್ದು, ಪಕ್ಷದೊಳಗೆ ಸಣ್ಣಪುಟ್ಟ ಗೊಂದಲಗಳಿದ್ದು, ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕಿದೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೋದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎದುರಿಸಲು ಸಮರ್ಥ ಅಭ್ಯರ್ಥಿಯಾಗಿ ಬಸವರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಹಿರಿತನ, ರಾಜಕೀಯ ಅನುಭವ ಆಧರಿಸಿಯೇ ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ದಾರೆ. ಏನೇ ಅಸಮಾಧಾನವಿದ್ದರೂ, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಿದೆ ಎಂದರು.

ಸೊಗಡು ಗೈರು: ಅತೃಪ್ತರ ಸಭೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಗೈರಾಗಿದ್ದರು. ಆದರೆ, ಸೊಗಡು ಆಪ್ತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಬಿ.ನಂದೀಶ್ ಹಾಜರಿದ್ದರು. ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಕೆ.ಎಸ್.ಕಿರಣ್​ಕುಮಾರ್, ಹಿರಿಯ ಮುಖಂಡರು ಇದ್ದರು.

ಭಾನುವಾರ ಜಿಲ್ಲಾ ಮುಖಂಡರ ಸಭೆ: ಲೋಕ ಸಮರ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಮುಖಂಡರ ಸಭೆಯನ್ನು ತುಮಕೂರಿನಲ್ಲಿ ಪಕ್ಷದ ಉಸ್ತುವಾರಿ ವಿ.ಸೋಮಣ್ಣ ಕರೆದಿದ್ದಾರೆ. ಸಮರಕ್ಕೂ ಮುನ್ನ ಪಕ್ಷದೊಳಗಿನ ಸಣ್ಣಪುಟ್ಟ ಗೊಂದಲ ಪರಿಹರಿಸಿಕೊಂಡು ಒಗ್ಗಟ್ಟಿನಿಂದ ಹೋರಾಟಕ್ಕೆ ಅಣಿಗೊಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ.