ಬಸವಕಲ್ಯಾಣ: ಸಣ್ಣಪುಟ್ಟ ವಿಷಯಗಳಿಗೆ ಮನಸ್ಸನ್ನು ಕೆರಳಿಸದೆ ಹೂವಿನಂತೆ ಅರಳುವಂತಾಗಬೇಕು, ಭಾವ ಸೌಂದರ್ಯದಿಂದ ಬದುಕು ಸುಂದರವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹುಲಗುತ್ತಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಕಳಸಾರೋಹಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹನುಮಂತನ ಭಾವಪ್ರಸನ್ನತೆ, ಧೈರ್ಯ, ಸಾಹಸಗಳನ್ನು ನಮ್ಮಲ್ಲಿ ಬೆಳೆಸಿಕೊಂಡರೆ, ಬದುಕಿನ ಎಂತಹ ವಿಷಮ ವರ್ತುಲವೂ ಪಾರು ಮಾಡಲು ಸಾಧ್ಯವಾಗುತ್ತದೆ ಎಂದರು.
ಸಹನೆ, ತಾಳ್ಮೆ ಇವು ಭಾರತೀಯ ಮಹಿಳೆಯ ನಿಜವಾದ ಆಭರಣ ಹಾಗೂ ಸುಖ ಸಂಸಾರದ ಇಂಧನ. ಜೀವನದಲ್ಲಿ ಸಹನೆ, ತಾಳ್ಮೆ ತಪಸ್ಸಿನ ಹಾಗೆ ರೂಡಿಸಿಕೊಂಡು ಬರಬೇಕು, ಈ ಮಾತು ಪುರುಷ ಸಮಾಜಕ್ಕೂ ಅನ್ವಯಿಸುತ್ತದೆ. ನೋವು ನಲಿವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಆತ್ಮಸ್ಥೈರ್ಯದಿಂದ ಬದುಕಿನ ಬಂಡಿ ದೂಡಬೇಕು ಎಂದರು.
ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಪ್ರಮುಖರಾದ ಶಂಕರ ಹಿರಗೊಪ್ಪನೋರ, ಮಹಾದೇವ ಬಾಪುನೋರ, ವಾಸುದೇವ ಹಿರಗೊಪ್ಪನೋರ, ಮಹೇಶ ಖವಳೆ, ಶಿವರಾಜ ಹಿರಗೊಪ್ಪನೋರ, ಪ್ರಕಾಶ ಹಿರಗೊಪ್ಪನೋರ, ಬಸಪ್ಪ ಹಿರಗೊಪ್ಪನೋರ ಇತರರಿದ್ದರು.
ಕಾಶಿನಾಥ ಪಾಟೀಲ್ ಸ್ವಾಗತಿಸಿದರು. ಮಹಾದೇವ ಪಾಟೀಲ್ ವಂದಿಸಿದರು. ಲಕ್ಷ್ಮಣಪ್ರಸಾದ ಮೇತ್ರೆ ನಿರೂಪಣೆ ಮಾಡಿದರು. ಶಿವಕುಮಾರ ಶಾಸ್ತ್ರೀ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಸಾವಿತ್ರಾ ಪಾಟೀಲ್ ಸಂಗೀತ ಸೇವೆ ಸಲ್ಲಿಸಿದರು.