Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಭಾವಧಾರೆಯ ದಿಗ್ವಿಜಯಕ್ಕೆ ನಿಮ್ಮನ್ನೂ ಆಹ್ವಾನಿಸುತ್ತಾ…

Sunday, 27.08.2017, 3:05 AM       No Comments

ಅವನೊಬ್ಬ ಭಾರಿ ಶ್ರೀಮಂತ. 2-3 ದೊಡ್ಡ ಕಾರ್ಖಾನೆಗಳ ಮಾಲೀಕ. ಸಾವಿರಾರು ಕಾರ್ವಿುಕರು, ಸಿಬ್ಬಂದಿ ಅವನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಉತ್ಪನ್ನವಾದ ಪದಾರ್ಥಗಳನ್ನು ದೇಶ-ವಿದೇಶಗಳಿಗೆಲ್ಲಾ ಕಳುಹಿಸುತ್ತಾರೆ. ಅವನ ವ್ಯಾಪಾರ ವಹಿವಾಟೆಷ್ಟು, ಆದಾಯ ಖರ್ಚೆಷ್ಟು, ಚರ-ಸ್ಥಿರ ಆಸ್ತಿಯೆಷ್ಟು, ದುಡಿದು ರಾಶಿ ಹಾಕಿರುವ ದುಡ್ಡೆಷ್ಟು ಅನ್ನುವುದು ಅವನಿಗೇ ಗೊತ್ತಿಲ್ಲ. ಅವನ ಅಕೌಂಟೆಂಟು ಆಡಿಟರುಗಳು ಲೆಕ್ಕಮಾಡಿ ಹೇಳಬೇಕು ಅದನ್ನ- ಅಂಥಾ ಶ್ರೀಮಂತ.

ಶ್ರೀಮಂತರು ಅಂದಮೇಲೆ ಪಾರ್ಟಿಗಳು, ಔತಣಕೂಟಗಳೇನು ಕಡಿಮೆಯಾ? ಅಂಥದೇ ಮತ್ತೊಬ್ಬ ಶ್ರೀಮಂತನ ಮನೆಯ ಔತಣಕೂಟಕ್ಕೆ ಸತೀಸಮೇತನಾಗಿ ಹೋಗಿದ್ದ ಈ ನಮ್ಮ ಶ್ರೀಮಂತ. ಆ ಔತಣಕೂಟದಲ್ಲೊಬ್ಬ ಮುದುಕ. ವಯಸ್ಸು ಎಂಭತ್ತನ್ನು ದಾಟಿರಬಹುದು ಅನ್ನಿಸುತ್ತೆ. ಸಾಧಾರಣ ಬಿಳಿಯ ಜುಬ್ಬ, ಪಾಯಿಜಾಮ ಹಾಕಿದ್ದಾನೆ. ತಲೆಗೆ ಹಾಕಿಕೊಂಡಿರುವ ಟೋಪಿ, ಮುಖದ ಮೇಲಿನ ಗಡ್ಡ ನೋಡಿದರೆ ಅವನೊಬ್ಬ ಮುಸಲ್ಮಾನ ಅಂತ ಹೇಳಬಹುದು. ಕೆಲವು ಹಲ್ಲುಗಳು ಬಿದ್ದುಹೋಗಿವೆ. ಇದ್ದವೂ ಸಡಿಲವಾಗಿವೆ. ಆದರೂ ಅವನ ಕಣ್ಣುಗಳಲ್ಲಿ ಅದೆಂಥದೋ ಒಂದು ಕಾಂತಿಯಿದೆ. ಸುತ್ತಮುತ್ತಲಿನವರ ಜತೆ ಕುಲುಕುಲು ಮಾತಾಡುತ್ತಾನೆ. ಮಧ್ಯೆಮಧ್ಯೆ ಬೊಚ್ಚುಬಾಯಲ್ಲಿ ‘ಫಳ್ಳನೆ‘ ನಗುತ್ತಾನೆ. ಅಲ್ಲಿದ್ದ ಕೆಲವರಿಗೆ ಅವನ ಜತೆ ಹರಟುವುದಕ್ಕೆ ಅದೇನೋ ಆನಂದ.

ಸ್ವಲ್ಪ ಹೊತ್ತಿನ ನಂತರ ಆ ಮುದುಕ ತನ್ನ ಜೇಬಿನಿಂದ ಒಂದು ಇಸ್ಪೀಟು ಎಲೆಗಳ ಕಟ್ಟು ತೆಗೆಯುತ್ತಾನೆ. ಎಲೆಗಳನ್ನು ಕಲಸಿ ಎಂತೆಂಥದೋ ‘ಆಟ‘ ತೋರಿಸುತ್ತಾನೆ. ನೋಡುವವರು ತಬ್ಬಿಬ್ಬಾದರೆ ಮುದುಕ ‘ಗೊಳ್ಳನೆ‘ ನಗುತ್ತಾನೆ- ಅದೇ ಬೊಚ್ಚುಬಾಯಿಯ ಹಸುಹಸುಳೆ ನಗು! ನಮ್ಮ ಶ್ರೀಮಂತ ಅದನ್ನೆಲ್ಲಾ ಗಮನಿಸುತ್ತಿರುತ್ತಾನೆ. ಆ ಮುದುಕನ ಮುಖದಲ್ಲಿ ಅದೇನೋ ಆಕರ್ಷಣೆ ಕಾಣುತ್ತದೆ ಅವನಿಗೆ. ಮುದುಕನ ಹತ್ತಿರ ಹೋಗಿ ನಮಸ್ಕಾರ ಮಾಡುತ್ತಾನೆ. ಮುದುಕ ಶ್ರೀಮಂತನಿಗೆ ‘ಸಲಾಂ‘ ಮಾಡುತ್ತಾನೆ. ಶ್ರೀಮಂತ ತನ್ನ ಪರಿಚಯ ಮಾಡಿಕೊಂಡು, ‘ನಿಮ್ಮ ಹೆಸರೇನು ಅಂತ ಕೇಳಬಹುದಾ?‘ ಅನ್ನುತ್ತಾನೆ. ಮುದುಕ ಹೇಳುತ್ತಾನೆ-‘ಅರೇ ಖಾವಂದ್, ಮೇರಾ ನಾಮ್ ಹೈ ಬಿಸ್ಮಿಲ್ಲಾ ಖಾನ್!‘.

‘ನಿಮ್ಮ ಊರು?‘.

‘ಅದು ನನ್ನ ಊರಲ್ಲ ಖಾವಂದ್, ಮಹಾಮಹಿಮ್ ವಿಶ್ವನಾಥ್ ಮಹಾಪ್ರಭುವಿನ ಊರು- ವಾರಾಣಸಿ. ನಾನು ಆ ಮಹಾಪ್ರಭುವಿನ ಪಾದಸನ್ನಿಧಿಯಲ್ಲಿದ್ದೇನೆ‘.

ಮುಸಲ್ಮಾನನೊಬ್ಬನ ಬಾಯಲ್ಲಿ ಇಂಥ ಮಾತುಗಳನ್ನು ಕೇಳಿದ ನಮ್ಮ ಶ್ರೀಮಂತನಿಗೆ ಒಂದಿಷ್ಟು ಅಚ್ಚರಿಯೂ, ಮಿಗಿಲಾಗಿ ಸಂತೋಷವೂ ಆಗಿ, ಹೇಳಿದ-

‘ಓಕೆ ಜಂಟ್ಲ್​ಮನ್, ನಿಮ್ಮ ಪರಿಚಯವಾಗಿ ಸಂತೋಷವಾಯಿತು. ಮುಂದಿನ ತಿಂಗಳ ಎರಡನೇ ಭಾನುವಾರ ನನ್ನ ಮನೆಯಲ್ಲೂ ಇಂಥದೇ ಒಂದು ಪಾರ್ಟಿ ಇದೆ. ನೀವು ದಯವಿಟ್ಟು ಬರಬೇಕು…..‘. ಫಳ್ಳನೆ ನಕ್ಕು ಬಿಸ್ಮಿಲ್ಲಾ ಖಾನ್ ಹೇಳಿದರು- ‘ಬರುತ್ತೇನೆ ಖಾವಂದ್, ನಿಜವಾಗಿಯೂ ಬರುತ್ತೇನೆ‘. ‘ಬರುವಾಗ ಈ ಇಸ್ಪೀಟ್ ಕಾರ್ಡಗಳನ್ನೂ ತರುತ್ತೀರಲ್ಲ? ಪಾರ್ಟಿಗೆ ಬರುವ ಮಕ್ಕಳಿಗೆ ತಮಾಷೆಯಾಗಿರುತ್ತದೆ!‘. ಆ ಮಾತಿಗುತ್ತರವಾಗಿ ಮತ್ತೊಮ್ಮೆ ಫಳ್ಳನೆ ನಕ್ಕರಷ್ಟೆ ಬಿಸ್ಮಿಲ್ಲಾ ಖಾನ್. ಅದರ ಮುಂದಿನ ತಿಂಗಳು ಎರಡನೇ ವಾರ ನಮ್ಮ ಶ್ರೀಮಂತನ ಮನೆಯಲ್ಲಿ ಭಾರಿ ಪಾರ್ಟಿ. ಮನೆಯಾ ಅದು?- ಅರಮನೆ! ಬಂದವರೆಲ್ಲರೂ ಶ್ರೀಮಂತರೇ!- ಶ್ರೀಮಂತರಿಗೆ ಬಡಬಗ್ಗರ ಜತೆ ಸ್ನೇಹವಾಗಲೀ, ನೆಂಟಸ್ತಿಕೆಯಾಗಲೀ ಇರುವುದಕ್ಕೆ ಸಾಧ್ಯವಾ? ಅರಮನೆಯಂಥಾ ಆ ಬಂಗಲೆಯಲ್ಲಿ ಕಣ್ಣು ಕೋರೈಸುವಷ್ಟು ಬೆಳಕು! ತಿಂದು ಬಿಸಾಡುವಷ್ಟು ತಿಂಡಿ-‘ತೀರ್ಥ!‘. ಪಾರ್ಟಿ ಶುರುವಾಗುವುದಕ್ಕೆ ಅರ್ಧಗಂಟೆ ಮೊದಲೇ ಬಂದರು ಬಿಸ್ಮಿಲ್ಲಾ ಖಾನ್. ಶ್ರೀಮಂತನಿಗೆ ‘ಸಲಾಂ‘ ಮಾಡಿದರು. ‘ನಾನು ಬಿಸ್ಮಿಲ್ಲಾ ಖಾನ್!‘- ಮತ್ತೆ ಪರಿಚಯಿಸಿಕೊಂಡರು. ‘ಅರೇ, ನೀವು ಹೆಸರು ಹೇಳಿದ್ದು ಒಳ್ಳೆಯದೇ ಆಯಿತು. ಮರೆತುಹೋಗಿತ್ತು ನನಗೆ! ತುಂಬಾ ಸಂತೋಷ, ಬನ್ನಿ. ಬೈದ ದ ಬೈ ಇಸ್ಪೀಟು ಕಾರ್ಡ ತಂದಿದ್ದೀರ ತಾನೇ?!‘ ಮತ್ತೆ ಫಳ್ಳನೆ ನಕ್ಕರು ಬಿಸ್ಮಿಲ್ಲಾ ಖಾನ್. ಅವರು ಹಾಗೆ ನಕ್ಕಾಗ ಗಮನಿಸಿದ ನಮ್ಮ ಶ್ರೀಮಂತ. ಅವರ ಕಂಕುಳಲ್ಲಿ ಏನೋ ಒಂದು ಕೊಳವೆಯಂಥದು ಜೋತಾಡುತ್ತಿತ್ತು. ಸುಮಾರು ಒಂದೂವರೆ ಅಡಿ, ಹೆಚ್ಚೆಂದರೆ ಎರಡು ಅಡಿ ಉದ್ದದ ಒಂದು ಪೀಪಿ ಥರದ ಕೊಳವೆ. ಶ್ರೀಮಂತ ಅಂಥದ್ದನ್ನು ಹಿಂದೆ ನೋಡಿರಲಿಲ್ಲ, ಕೇಳಿಯೇಬಿಟ್ಟ-

‘ಬಿಸ್ಮಿಲ್ಲಾ ಖಾನ್​ಜೀ, ಇದೇನಿದು? ನೀವು ಕಂಕುಳಲ್ಲಿ ನೇತುಹಾಕಿಕೊಂಡಿರೋದು?‘.

‘ಇದು ಶೆಹನಾಯ್!‘.

‘ಯಾತಕ್ಕೆ ಇದು? ಇದರಲ್ಲಿ ಏನ್ ಮಾಡ್ತೀರಿ ನೀವು?‘.

‘ಇದನ್ನ ನುಡಿಸ್ತೇನೆ ನಾನು ಮಹಾರಾಜ್!‘.

‘ಹೌದಾ? ತೋಳುದ್ದದ ಈ ಪೀಪಿಯಲ್ಲಿ ಅದೇನು ನುಡಿಸ್ತಾನೋ ಈ ಮುದುಕ!‘ ಅಂತ ಆ ಶ್ರೀಮಂತ ಅಂದುಕೊಳ್ಳುತ್ತಿರುವಾಗಲೇ ಆ ಪಾರ್ಟಿಗೆ ಬಂದಿದ್ದ ಬೇರೆ ಕೆಲವರು ಬಂದು ಶ್ರೀಮಂತನಿಗೆ ಹೇಳಿದರು- ‘ಡಿಯರ್ ಫ್ರೆಂಡ್, ಇವರ್ಯಾರು ಗೊತ್ತಾ? ಉಸ್ತಾದ್ ಬಿಸ್ಮಿಲ್ಲಾ ಖಾನ್ ಸಾಹೇಬರು! ಶೆಹನಾಯ್ನ ಮಾಂತ್ರಿಕ ಈ ಮಹಾನುಭಾವ. ಬರೀ ಸಂಗೀತಗಾರ ಅಲ್ಲ, ಸಂಗೀತದ ಋಷಿ! ಇಡೀ ಜಗತ್ತಿನಲ್ಲಿ ಇವರದು ಬಹುದೊಡ್ಡ ಹೆಸರು. ಪದ್ಮವಿಭೂಷಣ ಗಿಭೂಷಣಗಳೆಲ್ಲಾ ಯಾವಾಗಲೋ ಬಂದುಹೋಗಿವೆ. ಇವರದೊಂದು ಕಛೇರಿಗೆ ಲಕ್ಷ ಲಕ್ಷ ಸುರೀತಾರೆ. ಆದರೆ ಈ ಪುಣ್ಯಾತ್ಮ ಕಾಶಿ ವಿಶ್ವನಾಥನ ದೇವಸ್ಥಾನದ ಮುಂದೆ ಒಂದು ಚಾಪೆಯ ಮೇಲೆ ಕುಳಿತು ಶೆಹನಾಯ್ ನುಡಿಸುತ್ತಾರೆ…..‘.

ಅವರ್ಯಾರೋ ಮಾತು ಮುಗಿಸುವ ಮೊದಲೇ ಮತ್ತೊಬ್ಬರು ಹೇಳಿದರು-

‘‘ಡು ಯು ನೋ?! ಅಮೆರಿಕದ ಒಂದು ಇವೆಂಟ್ ಮ್ಯಾನೇಜ್​ವೆುಂಟ್ ಕಂಪನಿಯವರು ಬಂದು, ‘ನೀವು ಅಮೆರಿಕಕ್ಕೆ ಬಂದುಬಿಡಿ. ನಿಮಗೆಷ್ಟು ಹಣ ಬೇಕು ಹೇಳಿ, ನಾವು ಕೊಡುತ್ತೇವೆ. ಜಗತ್ತಿನ ಬೇರೆಬೇರೆ ದೇಶಗಳಲ್ಲಿ ನಿಮ್ಮ ಸಂಗೀತ ಕಛೇರಿಗಳನ್ನು ಏರ್ಪಾಡು ಮಾಡ್ತೀವಿ. ಬಿಲಿಯನ್ ಬಿಲಿಯನ್ ಡಾಲರ್​ಗಳಷ್ಟು ದುಡಿದು ಹಾಕಬಹುದು. ದಯವಿಟ್ಟು ಮನಸ್ಸುಮಾಡಿ. ನಮಗೆ ಒಂದೆರಡು ವರ್ಷವಾದರೂ ಕಾಂಟ್ರಾಕ್ಟ್ ಕೊಡಿ….‘ ಅಂದರಂತೆ. ಅದಕ್ಕೆ- ‘ಹಮ್ ಕೋ ಮಾಫ್ ಕರ್ ದೀಜಿಯೆ ಸಾಬ್! ನನ್ನ ಸಂಗೀತ ಹುಟ್ಟೋದು ಹಿಮಾಲಯ ಪರ್ವತದಿಂದ, ಗಂಗಾ ನದಿಯಿಂದ, ಕಾಶಿ ವಿಶ್ವನಾಥನ ದೇವಾಲಯದಿಂದ. ನೀವು ಈ ಹಿಮಾಲಯ ಪರ್ವತಾನ, ಗಂಗಾ ನದಿಯನ್ನ, ಕಾಶಿ ವಿಶ್ವನಾಥನ ದೇವಾಲಯವನ್ನ ಅಮೆರಿಕಕ್ಕೆ ತರೋದಾದ್ರೆ ನೋಡಿ. ನಾನು ನಾನಾಗೇ ನಿಮ್ಮ ಹಿಂದೆ, ನಿಮ್ಮ ದೇಶಕ್ಕೆ ಓಡಿಬರ್ತೀನಿ. ನಿಮ್ಮ ದುಡ್ಡಿನ ಹಿಂದೆ ನಾನು ಬರಲಾರೆ. ಮಾಫ್ ಕರ್ ದೀಜಿಯೆ!‘- ಹಾಗಂದರಂತೆ ಹಮಾರಾ ಉಸ್ತಾದ್!‘.

ಆ ಮಾತಿಗೂ ಫಳ್ಳನೊಮ್ಮೆ ನಕ್ಕು ಮೇಲೆ ನೋಡಿದರಂತೆ ಬಿಸ್ಮಿಲ್ಲಾ ಖಾನ್! ಆಗ ನಮ್ಮ ಶ್ರೀಮಂತನಿಗೆ ತಟಕ್ಕನೆ ಅನ್ನಿಸಿದ್ದು- ‘ಎಲ ಎಲಾ! ಈ ಮಹಾನುಭಾವ ಯಾರು ಅಂತಾನೇ ನನಗೆ ಗೊತ್ತಿರಲಿಲ್ಲವಲ್ಲಾ?- ನಾನೆಂಥಾ ಅಜ್ಞಾನಿ. ಇಡೀ ಜಗತ್ತಿಗೆ ಈತನ ಸಂಗೀತ ಗೊತ್ತು ಅಂತಾರೆ. ನನಗೇ (!) ಗೊತ್ತಿರಲಿಲ್ಲವಲ್ಲಾ?!‘.

ಹಾಗಂತ ಹೇಳಿ ನಮ್ಮ ಶ್ರೀಮಂತ, ‘ಉಸ್ತಾದ್​ಜೀ, ನಿಮ್ಮ ಅಭ್ಯಂತರವಿಲ್ಲದೇ ಇದ್ದರೆ ಇವತ್ತು ಒಂದರ್ಧ ಗಂಟೆ ಇಲ್ಲಿ ನಿಮ್ಮ ಸಂಗೀತ ನುಡಿಸಬಹುದಾ? ನಾನು ಅದಕ್ಕೆಷ್ಟು ಹಣ ಬೇಕೋ ಕೊಡ್…‘ ಮಾತು ಮುಗಿಯುವ ಮೊದಲೇ ನಾಲಿಗೆ ಕಚ್ಚಿಕೊಂಡ. ತನ್ನ ಅವಿವೇಕಕ್ಕೆ ತಾನೇ ನಾಚಿಕೊಂಡ. ಬಿಸ್ಮಿಲ್ಲಾ ಖಾನ್ ಸಾಹೇಬರು ಶ್ರೀಮಂತನ ಒಂದೇ ಮಾತಿಗೆ ಶೆಹನಾಯ್ ನುಡಿಸಲು ಒಪ್ಪಿಕೊಂಡರು. ಕ್ಷಣಹೊತ್ತಿನಲ್ಲೇ ವೇದಿಕೆಯೂ ಸಿದ್ಧವಾಯಿತು. ಬಿಸ್ಮಿಲ್ಲಾ ಖಾನ್ ಯಾವುದೇ ಪಕ್ಕವಾದ್ಯವಿಲ್ಲದೆ ಒಂದರ್ಧ ಗಂಟೆ ಶೆಹನಾಯ್ ನುಡಿಸಿಯೇಬಿಟ್ಟರು. ಆ ಮರದ ಕೊಳವೆಗೆ ಅದ್ಯಾವ ಮಂತ್ರ ಉಸುರಿದನೋ ಆ ಶೆಹನಾಯ್ ಮಾಂತ್ರಿಕ! ಶ್ರೀಮಂತನ ಬಂಗಲೆಯ ಆ ಹಸಿರು ಆವರಣದ ತುಂಬಾ, ಅಲ್ಲಿದ್ದ ಗಿಡಮರ ಹೂಗಳ ಅಂತರಾಳಕ್ಕೆಲ್ಲಾ ಆ ಶೆಹನಾಯ್ನ ಮಾಧುರ್ಯ ಹನಿದಂತೆ ಅನ್ನಿಸಿತು. ಅಲ್ಲಿದ್ದ ಎಲ್ಲ ಅತಿಥಿಗಳೂ ನಿಶ್ಶಬ್ದವಾಗಿ ಕೂತು ಆ ಸುಸ್ವರವನ್ನು ಅನುಭವಿಸಿದರು. ಸಂಗೀತದಲ್ಲಿ ಯಾವ ಪರಿಶ್ರಮವೂ ಅಭಿರುಚಿಯೂ ಇಲ್ಲದಿದ್ದ ನಮ್ಮ ಶ್ರೀಮಂತನಿಗೂ, ಈ ಮಹಾನುಭಾವ ಇಂಥದೊಂದು ಸಂಗೀತದಿಂದಲೇ ಜಗದ್ವಿಖ್ಯಾತನಾಗಿರುವುದರಲ್ಲಿ ಏನೂ ಅಚ್ಚರಿಯಿಲ್ಲ ಎಂದೇ ಅನ್ನಿಸಿತು. ಕೊನೆಗೆ ಉಸ್ತಾದರ ಮುಂದೆ ಕೈಜೋಡಿಸಿ ನಿಂತು ಅವನು ಹೇಳಿದ-

‘ಮಹೋದಯಾ, ನಾನು ಇಷ್ಟು ದೊಡ್ಡ ಕಾರ್ಖಾನೆಗಳಿಂದ, ಇಷ್ಟೊಂದು ಸಿಬ್ಬಂದಿಯಿಂದ, ರಾಶಿ ದುಡ್ಡಿನಿಂದ ಸಾಧಿಸಲಾಗದ್ದನ್ನು ನೀನು ಈ ಒಂದು ತೋಳುದ್ದದ ಮರದ ಕೊಳವೆಯಿಂದ ಸಾಧಿಸಿಬಿಟ್ಟಿದ್ದೀಯಲ್ಲಪ್ಪಾ! ನಿನ್ನ ಈ ವಾದ್ಯ ನನಗೆ ಕೇಳಿಸಿದ್ದು ಸಂಗೀತವನ್ನು ಮಾತ್ರವಲ್ಲ, ಅದು ನಾನು ಈವರೆಗೆ ಕೇಳದಿದ್ದ ಯಾವಯಾವುದೋ ದನಿಗಳನ್ನ ಕೇಳಿಸಿತು‘.

ಮತ್ತೆ ಬಿಸ್ಮಿಲ್ಲಾ ಖಾನ್ ಒಮ್ಮೆ ಫಳ್ಳನೆ ನಕ್ಕರೇನೋ!

– ಈ ಕತೆ ನಾನೊಮ್ಮೆ ದೆಹಲಿಗೆ ಹೋಗಿದ್ದಾಗ ಅಲ್ಲಿ ಪರಿಚಯವಾದ ಹರಿಯಾಣದ ಒಬ್ಬ ಕಲಾವಿದನ ಬಾಯಿಂದ ಕೇಳಿದ್ದು. ಇದು ಹೀಗೆ ನಡೆದಿರಬಹುದು ಅಥವಾ ಯಾರೋ ಕತೆ ಕಟ್ಟಿರಲೂಬಹುದು. ಅಂತೂ ಇದು ಹೀಗೇ ನಡೆದಿದ್ದರೂ ಅಚ್ಚರಿಯಿಲ್ಲ; ಕಟ್ಟಿದ ಕತೆಯಾದರೂ ಅಚ್ಚರಿಯಿಲ್ಲ. ಆದರೆ ಈ ಕತೆ ಹೇಳುವ ಆಶಯ ಮಾತ್ರ ಚೆಂದ!

ಏನೋ ಹೇಳಲು ಹೊರಟವನಿಗೆ ಬರವಣಿಗೆಯ ಹೊಸಿಲಲ್ಲೇ ಈ ಪ್ರಸಂಗ ನೆನಪಾಯಿತು. ಅದನ್ನೇ ವಿವರವಾಗಿ ಯಾಕೆ ಹೇಳಿದೆನೆಂದರೆ, ಸಾಹಿತ್ಯ, ಕಲೆಗಳ ಸಹವಾಸದಲ್ಲಿ ಬದುಕುವುದು ಈ ಮನುಷ್ಯ ಬದುಕಿನ ದೊಡ್ಡ ಭಾಗ್ಯ ಎಂದು ಭಾವಿಸಿದವನು ನಾನು. ಸಾಹಿತ್ಯ ಕೃತಿಯೊಂದನ್ನು ಸೃಷ್ಟಿಸುವುದು ಅಥವಾ ಆಸ್ವಾದಿಸುವುದು, ಹಾಗೆಯೇ ಕಲಾವಿದನಾಗಿರುವುದು ಅಥವಾ ಕಲೆಯನ್ನು ಆಸ್ವಾದಿಸುವುದು- ಇಂಥದೊಂದು ಮನಃಸ್ಥಿತಿ, ಅಭಿರುಚಿ ಬೆಳೆದರೆ ಬದುಕಿಗೆ ಆನಂದವನ್ನು ಹೊರಗಿನಿಂದ ತರಬೇಕಾಗಿಲ್ಲ, ಅದು ನಮ್ಮ ಬದುಕಿನ ಮಧ್ಯೆಯೇ ಸೃಷ್ಟಿಯಾಗುತ್ತದೆ. ದುಡ್ಡಿನ ಬೆನ್ನುಹತ್ತಿರುವ ನಮಗೆ, ಅಧಿಕಾರ, ಅಹಂಕಾರಗಳನ್ನೇ ಆಸ್ವಾದಿಸುವವರಿಗೆ ನಮ್ಮ ಸುತ್ತಮುತ್ತಲೇ ಬಿದ್ದು ಹೊರಳಾಡುತ್ತಿರುವ ಸಣ್ಣ ಸಣ್ಣ ಸಂಗತಿಗಳಲ್ಲೂ ಪ್ರಕಟವಾಗುತ್ತಿರುವ ಸಂತೋಷ ಕಾಣುವುದಿಲ್ಲ.

ನೋಡು ಇದೋ ಇಲ್ಲರಳಿ ನಗುತಿದೆ, ಏಳು ಸುತ್ತಿನ ಮಲ್ಲಿಗೆ!, ಇಂಥ ಹಚ್ಚನೆ ಹಸುರು ಗಿಡದಿಂದೆಂತು ಮೂಡಿತೊ ಬೆಳ್ಳಗೆ!! -ಎಂದು ಹಾಡುವ ಕವಿ (ಜಿ.ಎಸ್. ಶಿವರುದ್ರಪ್ಪ)ಗೆ ಮೈಯಾನುಮೈಯೆಲ್ಲ ಹಸಿರಾಗಿರುವ ಗಿಡದಿಂದ, ಬುಡದಲ್ಲಿ ಗಬ್ಬುನಾರುವ ಗೊಬ್ಬರ ತಿನ್ನುವ ಗಿಡದಿಂದ ಇಂಥ ಬೆಳ್ಳಂಬೆಳ್ಳಗಿನ, ಅಂಥಾ ಮೃದುಸೌಂದರ್ಯದ, ಸವಿಸುಗಂಧದ ಹೂವು ಅರಳುವುದೇ ಒಂದು ದೊಡ್ಡ ಅಚ್ಚರಿ! ಆನಂದ! ನನಗಂತೂ ಹೀಗೆ ಅಕ್ಷರಗಳಲ್ಲಿ ಕಾವ್ಯ ಕಟ್ಟಬಹುದೆಂಬುದೇ ಒಂದು ವಿಸ್ಮಯ! ನಮ್ಮ ಗಂಟಲಲ್ಲಿ ಒಂದು ಹಾಡು ಹುಟ್ಟುತ್ತದೆಯೆನ್ನುವುದು, ಈ ಮನುಷ್ಯ ಶರೀರದ ಅಂಗಾಂಗಗಳಲ್ಲೇ ಅಂಥದೊಂದು ಭಾವಸ್ಪುರಣೆಗೆ ಕಾರಣವಾಗುವ ನೃತ್ಯವಿದೆ ಎನ್ನುವುದು, ಒಂದು ಬಿದಿರಿನ ಕೊಳವೆಯಲ್ಲಿ, ಬಿಗಿದ ತಂತಿಗಳಲ್ಲಿ, ಸಂಗೀತ ಹೊಮ್ಮುತ್ತದೆ ಎನ್ನುವುದು ಒಂದು ದೊಡ್ಡ ವಿಸ್ಮಯ! ಆನಂದ! ನನಗೆ ಸಾಹಿತ್ಯ ಪಾಠ ಮಾಡಿದ ಗುರುಗಳು, ಅಕ್ಷರಗಳಲ್ಲಿ ಕಟ್ಟುವ ಕಾವ್ಯದಲ್ಲೂ ಒಂದು ಆನಂದವಿದೆ, ಸೌಂದರ್ಯವಿದೆ ಎಂದು ಕಲಿಸಿಕೊಟ್ಟಿದ್ದು ನನ್ನ ಬದುಕಿನ ದೊಡ್ಡ ಅದೃಷ್ಟ. ಜತೆಗೆ ಹಾಡುಗಳನ್ನು ಕೇಳುವುದು ನನಗೊಂದು ಗೀಳು. ಬರೀ ಚಿತ್ರಗೀತೆಗಳನ್ನು ಕೇಳುತ್ತಿದ್ದ ನನಗೆ ಈ ಸುಗಮಸಂಗೀತ ಅನ್ನುವುದು ಯಾವಾಗ ಬಂತೋ, ಆಗ ಅವುಗಳನ್ನು ಕೇಳುವ ಆಸೆ ಬೆಳೆಯಿತು. ಆಗಲೇ ಧ್ವನಿಸುರುಳಿ (ಕ್ಯಾಸೆಟ್)ಗಳ ಯುಗವೂ ಆರಂಭವಾಯಿತು ಬೇರೆ. ಆ ಕಾಲದಲ್ಲಿ ನನಗೆ ಹಾಡುಗಳ ಹುಚ್ಚು ಹಿಡಿಸಿದ್ದು ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಸುಲೋಚನಾ ಮುಂತಾದವರ ಧ್ವನಿಮಾಧುರ್ಯ. ನಿಜವಾಗಿಯೂ ಹುಚ್ಚೇ ಹಿಡಿದವನಂತೆ ಗಂಟೆಗಟ್ಟಲೆ ಅವರ ಹಾಡುಗಳನ್ನು ಕೇಳುತ್ತಿದ್ದೆ. ನಾನು ಸಾಹಿತ್ಯದ ವಿದ್ಯಾರ್ಥಿಯೇ ಆಗಿದ್ದುದರಿಂದಲೂ, ನನಗೂ ಒಂದಿಷ್ಟು ಹಾಡುವುದಕ್ಕೆ ಬರುತ್ತಿದ್ದುದರಿಂದಲೂ ನೂರಾರು ಹಾಡುಗಳು ನಾಲಿಗೆ ಮೇಲೆ ಉಳಿದವು. ಹಾಗೆ ನೋಡಿದರೆ ನನ್ನ ನಾಲಿಗೆಯ ಸಂಗ್ರಹವೇ, ನನ್ನ ಬ್ಯಾಂಕ್ ಅಕೌಂಟಿನಲ್ಲಿ ಸಂಗ್ರಹಿಸಿದ್ದಕ್ಕಿಂತ ಮಿಗಿಲಾಗಿ ಬದುಕಿಗೆ ಸುಖವನ್ನೂ, ಹುಲು ಮಾನವನಾದ ನನಗೊಂದು ವ್ಯಕ್ತಿತ್ವವನ್ನೂ, ಸಾಮಾಜಿಕ ಗೌರವವನ್ನೂ ಕೊಟ್ಟಿದೆ. ಪದ್ಯ ಮತ್ತು ಹಾಡಿನ ಬಗ್ಗೆ ನಾನು ಹೀಗೆ ಆನಂದದಿಂದ ಹರಟುತ್ತಿದ್ದುದನ್ನು ಕೇಳಿದ ನನ್ನ ಬೆಂಗಳೂರಿನ ಆಪ್ತಮಿತ್ರರು- ಎಚ್.ವಿ. ಮಂಜುನಾಥ್, ಜಗದೀಶ್, ಸತ್ಯಪ್ರಕಾಶ್, ರಘು ಮುಂತಾದ ಹಲವು ಆತ್ಮೀಯರು ‘ಭಾವಧಾರೆ‘ ಅನ್ನುವ ವಿಶಿಷ್ಟ ಕಾರ್ಯಕ್ರಮವೊಂದನ್ನು ರೂಪಿಸಿದರು. ಆ ಕಾರ್ಯಕ್ರಮದಲ್ಲಿ ಅಶ್ವತ್ಥ್, ರತ್ನಮಾಲಾ, ಸಂಗೀತಾ ಕಟ್ಟಿ, ಶಂಕರ್ ಶಾನುಭೋಗ್, ಸುನೀತಾ, ಯುವರಾಜ್, ಗಣೇಶ್ ದೇಸಾಯಿ ಮುಂತಾದ ಕಲಾವಿದರು ಭಾವತುಂಬಿ ಹಾಡಿದರು. ನಾನು ಆ ಹಾಡುಗಳಿಗೆಲ್ಲಾ ಸುದೀರ್ಘ ವ್ಯಾಖ್ಯಾನ ಮಾಡಿದೆ. ಆ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಪ್ರಭುಶಂಕರ, ‘ನನ್ನ ಅರವತ್ತು ವರ್ಷಗಳ ಸಾಹಿತ್ಯಕ ಬದುಕಿನಲ್ಲಿ ನಾನು ನೋಡಿದ ಒಂದು ಅಪೂರ್ವ ಕಾರ್ಯಕ್ರಮ ಇದು‘ ಅಂದರು. ಕಾರ್ಯಕ್ರಮ ದೊಡ್ಡ ಯಶಸ್ಸು ಕಂಡಿತು. ಅನಂತರ ಮೈಸೂರಿನಲ್ಲಿ ಒಂದೆರಡು ಬಾರಿ, ರಾಜ್ಯದ ಇತರೆ ಜಿಲ್ಲೆಗಳಲ್ಲಿ, ಅಮೆರಿಕದ ಬೇರೆಬೇರೆ ನಗರಗಳಲ್ಲಿ ಈ ‘ಭಾವಧಾರೆ‘ಯನ್ನು ‘ದೊಡ್ಡ ಯಶಸ್ಸು‘ ಅನ್ನುವಂತೆಯೇ ನಡೆಸಿಕೊಂಡು ಬಂದೆವು. ಇದೀಗ ‘ದಿಗ್ವಿಜಯ‘ ಟಿ.ವಿ. ವಾಹಿನಿಯಲ್ಲೂ ಈ ‘ಭಾವಧಾರೆ‘ ಬಿತ್ತರಗೊಳ್ಳುತ್ತಿದೆ. ಎಂತೆಂಥವೋ ಸುದ್ದಿ, ಸೆನ್ಸೇಷನ್ನುಗಳಿಂದ ಜನರನ್ನು ಕೆರಳಿಸುವುದರ ಬದಲು ವೀಕ್ಷಕರ ಮನಸ್ಸನ್ನು ಅರಳಿಸುವಂಥ, ಅವರ ಅಭಿರುಚಿಗಳನ್ನು ವಿಸ್ತರಿಸುವಂಥ ಕಾರ್ಯಕ್ರಮಗಳನ್ನೇ ರೂಪಿಸಬೇಕೆಂಬುದು ‘ದಿಗ್ವಿಜಯ‘ ಟಿ.ವಿ.ಯ ಆಶಯ ಕೂಡಾ. ಹಾಗಾಗಿ ಈಗಾಗಲೇ ‘ಭಾವಧಾರೆ‘ಯ ಪ್ರಸಾರ ಆರಂಭವಾಗಿದೆ. ಕನ್ನಡನಾಡಿನ ಗಾಯಕ-ಗಾಯಕಿಯರೊಂದಿಗೆ, ಕವಿಗಳೊಂದಿಗೆ ಕೂತು ಒಂದಿಷ್ಟು ಗಂಭೀರವಾಗಿ ಮತ್ತೊಂದಿಷ್ಟು ತಮಾಷೆಯಾಗಿ ಒಂದು ಸಾಹಿತ್ಯಕ ಹರಟೆ ಹೊಡೆಯಬೇಕೆಂಬುದು ಉದ್ದೇಶ. ಪ್ರತಿ ಶನಿವಾರ ಸಂಜೆ 7ಕ್ಕೆ, ಭಾನುವಾರ ಬೆಳಗ್ಗೆ 11ಕ್ಕೆ ದಿಗ್ವಿಜಯ ವಾಹಿನಿಯ ಮುಖಾಂತರ ನಿಮ್ಮ ಮನೆಗೆ ಬರುತ್ತೇನೆ. ಒಳಗೆ ಕರೆದುಕೊಳ್ಳುತ್ತೀರಲ್ಲ?!!

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top