ಭಾಲ್ಕಿಯಲ್ಲಿ ಮನೆ ಹಂಚಿಕೆಯಲ್ಲಿ ಗೋಲ್ಮಾಲ್

ಭಾಲ್ಕಿ: ಮನೆಗಳ ಹಂಚಿಕೆಯಲ್ಲಿ ಭಾಲ್ಕಿ ತಾಲೂಕಿನಲ್ಲಿ ವ್ಯಾಪಕ ಗೋಲ್ಮಾಲ್ ನಡೆದಿದೆ. ಮುಗ್ಧ ಜನರಿಗೆ ಈಶ್ವರ ಖಂಡ್ರೆ ಮೋಸ ಮಾಡಿದ್ದಾರೆ. ಈ ಬಗ್ಗೆ ಬರೀ ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆರೋಪಿಸಿದರು.

ಲಾಧಾ, ಮೇಹಕರ್, ಭಾತಂಬ್ರಾ ಇತರ ಕಡೆ ಪಾದಯಾತ್ರೆ ನಡೆಸಿ ಮಾತನಾಡಿ, ಜಿಲ್ಲೆಯ ಜನರಿಗೆ ಸುಳ್ಳು ಹೇಳುವುದು ಹಾಗೂ ಮೋಸ ಮಾಡುವುದು ಕಾಂಗ್ರೆಸ್ ಅಭ್ಯರ್ಥಿ ಖಂಡ್ರೆ ಕಾಯಕ ಮಾಡಿಕೊಂಡಿದ್ದಾರೆ. 50 ವರ್ಷಗಳಿಂದ ಅಧಿಕಾರದಲ್ಲಿರುವ ಈ ಕುಟುಂಬ ಜಾತಿ-ಜಾತಿ, ಮನೆ-ಮನೆಗಳಲ್ಲಿ ಜಗಳ ಹಚ್ಚಿದೆ. ಹಣ ಬಲದ ಮೇಲೆ ಚುನಾವಣೆಯಲ್ಲಿ ಜಯ ಗಳಿಸುತ್ತಿದೆ. ಆದರೆ ಈಗ ನನ್ನ ಮುಂದೆ ಹಣ ಸೇರಿ ಖಂಡ್ರೆಯವರ ಯಾವುದೇ ಆಟ ನಡೆಯದು ಎಂದರು.

ಮುಖಂಡ ಡಿ.ಕೆ. ಸಿದ್ರಾಮ ಮಾತನಾಡಿ, ಈಶ್ವರ ಖಂಡ್ರೆಗೆ ಹಣದ ಮದ ಹೆಚ್ಚಾಗಿದೆ. ಆರು ತಿಂಗಳ ಹಿಂದೆ ಕ್ಷೇತ್ರದ ಮತದಾರರು ಅವರನ್ನು ಶಾಸಕರನ್ನಾಗಿ ಮಾಡಿದರು. ಜನರ ತೀರ್ಪಿನ ವಿರುದ್ಧ ಈಗ ಲೋಕಸಭೆಗೆ ನಿಂತಿದ್ದಾರೆ. ಚುನಾವಣೆಗೆ ನಿಲ್ಲುವ ಮುಂಚೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಅಧಿಕಾರದ ಹಪಾಹಪಿ ಖಂಡ್ರೆಗೆ ಆವರಿಸಿದೆ ಎಂದು ಕಿಡಿಕಾರಿದರು.

ಪ್ರಮುಖರಾದ ಶಿವರಾಜ ಗಂದಗೆ, ದತ್ತಾತ್ರಿ ತೂಗಾಂವಕರ, ಸೂರಜಸಿಂಗ್, ದಿಗಂಬರರಾವ ಮಾನಕಾರಿ, ರಾಮರಾವ ಬಿರಾದಾರ, ಪ್ರತಾಪ ಪಾಟೀಲ್, ಸುರೇಶ ಬಿರಾದಾರ, ರಾವಸಾಬ್ ಬಿರಾದಾರ, ಬಸವರಾಜ ಹೊನ್ನಾ, ಶಿವರಾಜ ತೋರಣೆ, ಶಾಂತವೀರ ಕೇಸ್ಕರ್, ಶರದ್ ದುರ್ಗಾಳೆ, ನವನಾಥ ಪಾಟೀಲ್, ಸಂತೋಷ ಪಾಟೀಲ್, ಸತೀಶ ಚಾಂದಿವಾಲೆ, ಗಣೇಶ ಪಾಟೀಲ್, ಜಗದೀಶ ಬಿರಾದಾರ, ಬಾಬುರಾವ ಮದಕಟ್ಟಿ, ಸಂಗಮೇಶ ಭೂರೆ ಇತರರಿದ್ದರು.