ಭಾರಿ ಬಿರುಗಾಳಿಗೆ ಹಾರಿದ ಶಾಲಾ ಮೇಲ್ಛಾವಣಿ

ನರಗುಂದ:ಭಾರಿ ಬಿರುಗಾಳಿಯ ಹೊಡೆತಕ್ಕೆ ಸಂಕದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ ತಗಡು ಮತ್ತು ಹೆಂಚುಗಳು ಹಾರಿ ಹೋದ ಘಟನೆ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಬುಧವಾರ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಈ ಶಾಲೆಯ ಕೆಲವು ಕೊಠಡಿಗಳ ಹಳೆಯ ಹೆಂಚುಗಳನ್ನು ತೆರವುಗೊಳಿಸಿ ಹೊಸ ತಗಡುಗಳನ್ನು ಹಾಕಲಾಗಿತ್ತು. ಬುಧವಾರ ಮಧ್ಯಾಹ್ನ 1.40 ರ ಸುಮಾರಿಗೆ ಗ್ರಾಮದಲ್ಲಿ ಬೀಸಿದ ಭಾರಿ ಬಿರುಗಾಳಿಗೆ ಶಾಲೆಯ 20 ತಗಡುಗಳು ಹಾರಿಬಿದ್ದಿವೆ.

ಮಧ್ಯಾಹ್ನ 1.30 ರ ಸುಮಾರಿಗೆ ಶಾಲೆಯ 200 ಮಕ್ಕಳು ಮತ್ತು 10 ಜನ ಶಿಕ್ಷಕರು ಮಧ್ಯಾಹ್ನದ ಬಿಸಿಯೂಟವನ್ನು ಮುಗಿಸಿಕೊಂಡು ಕೊಠಡಿಯೊಳಗೆ ತೆರಳಿದ್ದರು. 10 ನಿಮಿಷದಲ್ಲಿ ಏಕಾಏಕಿ ಭಾರಿ ಬಿರುಗಾಳಿ ಬೀಸಿದ್ದರಿಂದ ಕೊಠಡಿಯ ತಗಡು ಮತ್ತು ಹೆಂಚುಗಳು ಹಾರಿ ಹೋಗಿವೆ. ಅದೃಷ್ಟವಶಾತ್ ಶಾಲೆಯಲ್ಲಿದ್ದ ಮಕ್ಕಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.