ಭಾರಿ ಪ್ರಮಾಣದಲ್ಲಿ ಮತ್ಸ್ಯ ಬೇಟೆ

ಕಾರವಾರ: ಮೀನುಗಾರರ ಬಲೆಗೆ ಭಾರಿ ಪ್ರಮಾಣದಲ್ಲಿ ಮೀನುಗಳು ಬೀಳುತ್ತಿದ್ದು, ಮಾರಾಟವಾಗದ ಕೆಲವು ಮೀನುಗಳನ್ನು ಒಗೆಯುವ ಪರಿಸ್ಥಿತಿ ನಿರ್ವಣವಾಗಿದೆ.

ಇಲ್ಲಿನ ಬೈತಖೋಲ್ ಬಂದರಿನಲ್ಲಿ 60 ರಷ್ಟು ಟ್ರಾಲರ್ ಬೋಟ್​ಗಳು ಹಾಗೂ ಪರ್ಸೀನ್ ಬೋಟ್​ಗಳಿವೆ. ಅಲ್ಲದೆ, ಔಟ್​ಬೋರ್ಡ್ ಇಂಜಿನ್ ಹೊಂದಿದ ಫೈಬರ್ ಬೋಟ್​ಗಳ ಮೂಲಕ ಮೀನುಗಾರಿಕೆ ನಡೆಸಲಾಗುತ್ತದೆ.

ಅಷ್ಟೇ ಅಲ್ಲದೆ, ಅಲಿಗದ್ದಾ ಕಡಲ ತೀರದಲ್ಲಿ ಹಾಗೂ ಸುಮಾರು 4 ಕಿಮೀ ದೂರದ ಟ್ಯಾಗೋರ್ ಕಡಲ ತೀರದಲ್ಲಿ ಹತ್ತಾರು ಕಡೆ ಏಂಡಿ ಬಲೆ ಹಾಕಿ ಮೀನು ಹಿಡಿಯಲಾಗುತ್ತಿದೆ. ವಾರದಿಂದ ಎಲ್ಲ ಮೀನುಗಾರರ ಬಲೆಗೆ ಭರಪೂರ ಶಿಗಡಿ ಹಾಗೂ ಇತರ ಸಣ್ಣ ಜಾತಿಯ ಮೀನುಗಳು ಬೀಳುತ್ತಿವೆ. ಶಿಗಡಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಸಣ್ಣ ಮೀನುಗಳು ಮಾರಾಟವಾಗುತ್ತಿಲ್ಲ. ಕಾರವಾರದಲ್ಲಿ ಮೀನೆಣ್ಣೆ ಘಟಕವೂ ಇಲ್ಲ. ಗೋವಾ ಹಾಗೂ ಬೇರೆಡೆ ಕೊಂಡೊಯ್ದರೆ ವಾಹನ ಬಾಡಿಗೆಯೂ ಹುಟ್ಟದು. ಕಾರಣ ಕ್ವಿಂಟಾಲ್​ಗಟ್ಟಲೆ ಸಣ್ಣ ಮೀನನ್ನು ಮೀನುಗಾರರು ವಾಪಸ್ ಸಮುದ್ರಕ್ಕೆ ಎಸೆಯುತ್ತಿದ್ದಾರೆ.

ಈ ಮೊದಲು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್​ಡಿಸಿ) ಬೈತಖೋಲ್​ನಲ್ಲಿ ಮೀನು ಫ್ಯಾಕ್ಟರಿ ಹೊಂದಿತ್ತು. ಲೀಸ್ ಪಡೆದಿದ್ದ ಮಾಲೀಕರು ಹಾಗೂ ಕೆಎಫ್​ಡಿಸಿ ನಡುವೆ ವಿವಾದ ಉಂಟಾಗಿ ಅದು ನ್ಯಾಯಾಲಯದಲ್ಲಿದ್ದು ಘಟಕ ಬಂದಾಗಿದೆ. ಇದರಿಂದ ಮೀನುಗಾರರಿಗೆ ತೊಂದರೆ ಉಂಟಾಗಿದೆ.

ಮೀನೆಣ್ಣೆ ಘಟಕವಿದ್ದರೆ ಹಿಡಿದ ಮೀನು ವ್ಯರ್ಥವಾಗುವುದಿಲ್ಲ. ಎಂಥದ್ದೇ ಮೀನಿದ್ದರೂ ಘಟಕಕ್ಕಾಗಿ ಅದು ಮಾರಾಟವಾಗುತ್ತದೆ. ಮಂಗಳೂರು ಇಲ್ಲವೇ ಗೋವಾದಲ್ಲಿ ಸಾಕಷ್ಟು ಘಟಕಗಳಿದ್ದು, ಅಲ್ಲಿಗೆ ಕೊಂಡೊಯ್ದು ಮಾರಾಟ ಮಾಡುವುದು ಇಲ್ಲಿನ ಮೀನುಗಾರರಿಗೆ ತುಟ್ಟಿಯಾಗುತ್ತದೆ. ಇಲ್ಲಿ ಮೀನುಗಳನ್ನು ಸಂಗ್ರಹಿಸಲು ಡೀಪ್ ಫ್ರಿಜ್ ವ್ಯವಸ್ಥೆಯೂ ಇಲ್ಲ.

| ವಿನಾಯಕ ಹರಿಕಂತ್ರ ಮೀನುಗಾರರ ಮುಖಂಡ

Leave a Reply

Your email address will not be published. Required fields are marked *