ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿ, ಬಾಳೆ, ಮಾವು ನೆಲಕ್ಕುರುಳಿ ಅಪಾರ ಹಾನಿ ಉಂಟಾಗಿದೆ.

ಪಟ್ಟಣ ಸೇರಿ ಗೋಗೇರಿ, ಜಿಗೇರಿ, ಮ್ಯಾಕಲಝುರಿ, ಕುಂಟೋಜಿ, ರಾಮಾಪೂರ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ನಾಗೇಂದ್ರಗಡ, ನೆಲ್ಲೂರ, ಮುಶಿಗೇರಿ, ದಿಂಡೂರ, ರಾಜೂರ ಸೇರಿ 97 ಗ್ರಾಮಗಳಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ಮಾವು, 62 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, 58 ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆ, 15 ಹೆಕ್ಟೇರ್ ಪ್ರದೇಶದಲ್ಲಿ ಚಿಕ್ಕು, 10 ಎಕರೆ ಪೇರಲ ಹಾಗೂ ಮೊಸಂಬಿಯನ್ನು ಬೆಳೆಯಲಾಗಿದೆ. ಆದರೆ, ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಹಲವೆಡೆ ಬೆಳೆ ನಾಶವಾಗಿದ್ದು ರೈತರನ್ನು ಚಿಂತೆಗೀಡುಮಾಡಿದೆ.

ಕೆಲವೆಡೆ ರೇಷ್ಮೆ ಹುಳು ಸಾಕಾಣಿಕೆಗೆ ನಿರ್ವಿುಸಲಾಗಿದ್ದ ಮನೆಗಳು ಹಾನಿಗೀಡಾಗಿವೆ. ರೇಷ್ಮೆ ಬೆಳೆಯೂ ನೆಲಕ್ಕುರಳಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನ ಸಾವಿರಾರು ರೈತ ಕುಟಂಬಗಳು ತೋಟಗಾರಿಕೆ ಬೆಳೆಯನ್ನೇ ನಂಬಿ ಜೀನವ ಸಾಗಿಸುತ್ತವೆ. ಬಹುತೇಕ ತೋಟಗಾರಿಕೆ ಬೆಳೆಗಳ ಫಸಲು ಈ ಬಾರಿ ಚೆನ್ನಾಗಿ ಬಂದಿತ್ತು. ಆದರೆ, ಪ್ರಕೃತಿಯ ಮುನಿಸಿನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಲಕ್ಷಾಂತರ ರೂ. ಖರ್ಚು…
ಸಸಿ ನಡುವ ಕಾರ್ಯದಿಂದ ಹಿಡಿದು, ಮಡಿ ಹಾಕುವುದು, ಗೊಬ್ಬರ ಕಟ್ಟುವುದು ಸೇರಿ ಫಸಲು ನೀಡುವವರೆಗೂ 1 ಎಕರೆ ಬಾಳೆಗೆ ಕನಿಷ್ಠ 50 ರಿಂದ 60 ಸಾವಿರ ರೂ. ಖರ್ಚು ಬರುತ್ತದೆ. ದ್ರಾಕ್ಷಿ ಹಾಗೂ ವೀಳ್ಯದೆಲೆ 1 ಎಕರೆಗೆ 50 ರಿಂದ 1 ಲಕ್ಷ ರೂ, ಮಾವು, ಚಿಕ್ಕು, ಪೇರಲ 10 ರಿಂದ 30 ಸಾವಿರ ರೂ. ಖರ್ಚು ಬರುತ್ತದೆ. ಎಕರೆಗೆ 15 ಟನ್ ಬಾಳೆ ಬರುತ್ತದೆ. ಕ್ವಿಂಟಾಲ್​ಗೆ ಸದ್ಯ 900 ರೂ. ಬೆಲೆ ಇದೆ. ದ್ರಾಕ್ಷಿ, ವೀಳ್ಯದೆಲೆ, ಚಿಕ್ಕು, ಮಾವು ಬೆಳೆಗಾರರು 1 ಎಕರೆಗೆ ವಾರ್ಷಿಕ 1.5 ಲಕ್ಷ ರೂ. ಆದಾಯ ಪಡೆಯುತ್ತಾರೆ. ಇಂತಹ ಲಾಭದಾಯಕ ಬೆಳೆ ಬೆಳೆಯುತ್ತಿದ್ದ ಬೆಳೆಗಾರರು ಇದೀಗ ಹಾನಿ ಅನುಭವಿಸಿದ್ದು ಅವರಿಗೆ ದಿಕ್ಕು ತೋಚದಂತಾಗಿದೆ.

ಕೊಳವೆಬಾವಿ ಆಶ್ರಿತ 3 ಎಕರೆ ಪ್ರದೇಶದಲ್ಲಿ 5 ವರ್ಷಗಳಿಂದ ಸುಮಾರು 3 ಸಾವಿರ ವೀಳ್ಯದೆಲೆ ಬಳ್ಳಿ ಬೆಳೆದಿದ್ದೇವೆ. ಬೆಲೆ ಕುಸಿತ ಮತ್ತು ಕೊಳವೆಬಾವಿ ನೀರು ಪಾತಾಳಕ್ಕೆ ಇಳಿದರೂ ಮಗುವಿನಂತೆ ಬೆಳೆಸಿದ ದೀರ್ಘಕಾಲದ ಬೆಳೆಯು ನಮ್ಮ ಕೈಹಿಡಿಯುತ್ತದೆ ಎನ್ನುವ ಆಶಾಭಾವನೆ ಇತ್ತು. ಆದರೆ, ಬಿರುಗಾಳಿ, ಮಳೆಯಿಂದ ಬಹುತೇಕ ಗಿಡಗಳು ನೆಲಕ್ಕುರುಳಿ ನಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ.
| ಪರಶುರಾಮ, ಕುಮಾರ, ತಿರುಪತಿ, ವಿಳ್ಯದೆಲೆ ಬೆಳೆಗಾರರು.

ಭಾರಿ ಬಿರುಗಾಳಿಯಿಂದಾಗಿ ಜಿಗೇರಿ, ವದೇಗೊಳ, ದಿಂಡೂರ, ರಾಜೂರ, ಲಕ್ಕಲಕಟ್ಟಿ, ನಾಗೇಂದ್ರಗಡ, ಬೇವಿನಕಟ್ಟಿ ಭಾಗದಲ್ಲಿ ಬಹುತೇಕ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಹೆಚ್ಚಾಗಿ ವೀಳ್ಯದೆಲೆ ಬೆಳೆಗಾರರಿಗೆ ಹಾನಿಯಾಗಿದೆ. ಹಾನಿಯಾದ ರೈತರು ತಹಸೀಲ್ದಾರ್​ಗೆ ಮಾಹಿತಿ ನೀಡಿದರೆ ಇಲಾಖೆಗೆ ಪರಿಹಾರಕ್ಕಾಗಿ ವರದಿ ಕಳುಹಿಸಲಾಗುತ್ತದೆ.
| ಎಂ.ಎಂ. ತಾಂಬೋಟಿ, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ.