ಭಾರತ VS ಯುಎಇ

ದುಬೈ: ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಎದುರು ಅತ್ಯುತ್ತಮ ನಿರ್ವಹಣೆ ತೋರುವ ಮೂಲಕ ಭರ್ಜರಿ ಆರಂಭ ಕಂಡಿರುವ ಭಾರತ ತಂಡ ಎಎಫ್​ಸಿ ಏಷ್ಯನ್ ಕಪ್ ಫುಟ್​ಬಾಲ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಗುರುವಾರ ಆತಿಥೇಯ ಯುಎಇ ತಂಡವನ್ನು ಎದುರಿಸಲಿದೆ. ಫಿಫಾ ರ್ಯಾಂಕಿಂಗ್​ನಲ್ಲಿ ಭಾರತಕ್ಕಿಂತ 18 ಸ್ಥಾನ ಮೇಲಿರುವ ಯುಎಇ ತಂಡವನ್ನು ಸೋಲಿಸಲು ಸುನೀಲ್ ಛೇಟ್ರಿ ಪಡೆಗೆ ಮತ್ತೊಂದು ಕಠಿಣ ಸವಾಲಾಗಿದೆ.

ಆದರೆ ಎರಡೂ ತಂಡಗಳ ಮೊದಲ ಪಂದ್ಯದ ನಿರ್ವಹಣೆ ಗಮನಿಸಿದರೆ ಭಾರತ ಫೇವರಿಟ್ ಆಗಿ ಕಾಣುತ್ತದೆ. ಸ್ಟೀಫನ್ ಕಾನ್ಸ್​ಸ್ಟಂಟೆನ್ ಮಾರ್ಗದರ್ಶನದ ವಿಶ್ವ ನಂ.97 ಭಾರತ 4-1 ಗೋಲುಗಳಿಂದ ಥಾಯ್ಲೆಂಡ್ ತಂಡವನ್ನು ಮಣಿಸಿದರೆ, ವಿಶ್ವ ನಂ.79 ಯುಎಇ ತಂಡ ಬಹ್ರೇನ್ ಎದುರು 1-1ರ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತ್ತು. ಈಗ ಎ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ಈ ಪಂದ್ಯವನ್ನೂ ಗೆದ್ದರೆ ಮುಂದಿನ ಅಂತಿಮ 16ರ ಘಟ್ಟದ ಅರ್ಹತೆಯನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ.

ಭಾರತ ಫಿಟ್ನೆಸ್​ನಲ್ಲಿ ಇತ್ತೀಚೆಗೆ ಸಾಕಷ್ಟು ಸುಧಾರಿಸಿದ್ದು, ಕೊನೇ 90ನೇ ನಿಮಿಷದವರೆಗೆ ಒಂದೇ ವೇಗದಲ್ಲಿ ಆಡುತ್ತಿದೆ. ಇದು ಬಲಿಷ್ಠ ತಂಡವನ್ನು ಎದುರಿಸಲು ಇರಬೇಕಾದ ಮುಖ್ಯ ಅಂಶ ಎಂದು ಎಐಎಫ್​ಎಫ್ ತಾಂತ್ರಿಕ ಸಮಿತಿ ಮುಖ್ಯಸ್ಥ ಶ್ಯಾಮ್ ಥಾಪ ಕೂಡ ಹೇಳುವ ಮೂಲಕ ಆತ್ಮವಿಶ್ವಾಸ ತುಂಬಿದ್ದಾರೆ. ಯುಎಇ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ, ಇತ್ತೀಚೆಗಿನ ವರ್ಷಗಳಲ್ಲಿ ಬಲಿಷ್ಠ ತಂಡಗಳ ಎದುರು ಆಡಿ ಅನುಭವವಿರುವ ತಂಡವಾಗಿದೆ.-ಏಜೆನ್ಸೀಸ್

ಆರಂಭ: ರಾತ್ರಿ: 9.30

ನೇರಪ್ರಸಾರ: ಸ್ಟಾರ್​ಸ್ಪೋರ್ಟ್ಸ್

Leave a Reply

Your email address will not be published. Required fields are marked *