ಭಾರತ ತಂಡಕ್ಕೆ ಚಾಂಪಿಯನ್ ಪಟ್ಟ

ದುಬೈ: ನಾಯಕ ಅಜಯ್ ಠಾಕೂರ್ (9 ಅಂಕ) ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ ದುಬೈ ಮಾಸ್ಟರ್ಸ್ ಕಬಡ್ಡಿ ಚಾಂಪಿಯನ್​ಷಿಪ್​ನಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿತು. ಶನಿವಾರ ರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡ 44-26 ಅಂಕಗಳಿಂದ ಇರಾನ್ ತಂಡವನ್ನು ಮಣಿಸಿ ಈ ಸಾಧನೆ ಮಾಡಿತು.

ಪಂದ್ಯದ 7ನೇ ನಿಮಿಷದಲ್ಲಿ ಮೊದಲ ಬಾರಿಗೆ ಇರಾನ್ ತಂಡವನ್ನು ಆಲೌಟ್ ಮಾಡಿದ ಭಾರತ 10-3 ರಿಂದ ಮುನ್ನಡೆ ಸಾಧಿಸಿತು. ಬಲಿಷ್ಠ ರಕ್ಷಣಾ ಪಡೆ ಹೊಂದಿದ್ದ ಇರಾನ್ ತಂಡ ಆಕರ್ಷಕ ಟ್ಯಾಕಲಿಂಗ್​ನಿಂದ ಭಾರತಕ್ಕೆ ತಿರುಗೇಟು ನೀಡಲು ಯತ್ನಿಸಿತು. ಇದರ ನಡುವೆಯೂ ಭಾರತ ತಂಡ ಮೊದಲಾರ್ಧದಲ್ಲಿ 18-11 ರಿಂದ ಮುನ್ನಡೆ ಸಾಧಿಸಿತು. ಮೊದಲಾರ್ಧದಲ್ಲಿ ಅಜಯ್ ಠಾಕೂರ್ ತೆರಳಿದ್ದ 9 ರೈಡಿಂಗ್​ನಲ್ಲಿ 5 ಅಂಕ ಕಲೆಹಾಕಿದ್ದರು. ದ್ವಿತೀಯಾರ್ಧದಲ್ಲಿ 2 ಬಾರಿ (23, 39ನೇ ನಿಮಿಷ) ಇರಾನ್ ತಂಡವನ್ನು ಆಲೌಟ್ ಖೆಡ್ಡಾಗೆ ಬೀಳಿಸಿದ ಭಾರತ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು.

ಭಾರತದ ಸರ್ವಾಂಗೀಣ ಹೋರಾಟದ ಎದುರು ವಿಶ್ವಕಪ್​ನ ಹಾಲಿ ರನ್ನರ್​ಅಪ್ ತಂಡ ಪ್ರಬಲ ಹೋರಾಟ ನೀಡಲು ವಿಫಲವಾಯಿತು. 2016ರಲ್ಲಿ ಅಹಮದಾಬಾದ್​ನಲ್ಲಿ ನಡೆದ ವಿಶ್ವಕಪ್ ಫೈನಲ್​ನಲ್ಲಿ ಭಾರತಕ್ಕೆ ಕಠಿಣ ಸವಾಲು ನೀಡಿದ್ದ ಇರಾನ್ ತಂಡ ಅನುಭವಿ ಆಟಗಾರರ ಅನುಪಸ್ಥಿತಿ ನಡುವೆಯೂ ಟೂರ್ನಿಯಲ್ಲಿ ಉತ್ತಮ ನಿರ್ವಹಣೆಯಿಂದ ಗಮನಸೆಳೆಯಿತು. ಈ ಗೆಲುವಿನೊಂದಿಗೆ ಭಾರತ ತಂಡ ಮುಂಬರುವ ಏಷ್ಯಾಡ್​ಗೆ ಭರ್ಜರಿ ಸಿದ್ಧತೆ ಕೈಗೊಂಡಿತು.