ಭಾರತ್ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಮೈಸೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆಕೊಟ್ಟಿದ್ದ ಭಾರತ್ ಬಂದ್​ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರು ಸ್ತಬ್ಧವಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕೆಲ ಕಡೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದನ್ನು ಬಿಟ್ಟರೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿಲ್ಲ. ನಗರದ ಹೊರವಲಯದಲ್ಲಿ ಅಷ್ಟಾಗಿ ಬಂದ್ ವಾತಾವರಣ ಕಂಡು ಬರಲಿಲ್ಲ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್​ಗಳು ರಸ್ತೆಗಿಳಿಯಲಿಲ್ಲ. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳೆರಡು ಬಿಕೋ ಎನ್ನುತ್ತಿದ್ದವು. ಈ ನಡುವೆ, ಇಲ್ಲಿ ಕೆಲವರು ನಿದ್ದೆಗೆ ಜಾರಿದ್ದರೆ, ಇನ್ನು ಕೆಲವರು ಬಸ್​ಗಾಗಿ ಕಾಯ್ದು ಕುಳಿತಿದ್ದರು. ಈ ವೇಳೆ, ವಿದೇಶಿ ದಂಪತಿ ಬಸ್​ಗಾಗಿ ಕಾಯ್ದು ಹೈರಾಣರಾದರು.

ಶಾಲಾ- ಕಾಲೇಜುಗಳಿಗೆ ರಜೆ ಘೊಷಿಸಿದ್ದರಿಂದ ವಿದ್ಯಾರ್ಥಿಗಳು ರಜಾ ಮೂಡ್​ನಲ್ಲಿ ಕಾಲ ಕಳೆದರು. ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಹಳ ವಿರಳವಾಗಿತ್ತು. ಬೆರಳೆಣಿಗೆಯಷ್ಟು ಬೈಕ್​ಗಳು, ಕಾರ್​ಗಳ ಸಂಚಾರ ಕಂಡು ಬಂತು. ಕೆಲ ಆಟೋಗಳು ಮಾತ್ರ ಜನರಿಗೆ ಸೇವೆ ಕಲ್ಪಿಸಿಕೊಟ್ಟವು. ಆದರೆ, ಅವುಗಳ ಸಂಖ್ಯೆ ಎಂದಿನಷ್ಟು ಇರಲಿಲ್ಲ.

ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳ ಅಂಗಡಿಗಳಿಗೆ ಬೀಗ ಹಾಕಲಾಗಿತ್ತು. ಜನರಿಲ್ಲದೆ ನಗರದ ಪ್ರಮುಖ ರಸ್ತೆಗಳು ಭಣಗುಟ್ಟುತ್ತಿದ್ದವು.

ನಗರದ ಎಲ್ಲ ಚಲನಚಿತ್ರ ಮಂದಿರ ಮತ್ತು ಮಲ್ಟಿಫ್ಲೆಕ್ಸ್​ನಲ್ಲಿ ಬೆಳಗಿನ ಹಾಗೂ ಮಧ್ಯಾಹ್ನದ ಸಿನಿಮಾ ಪ್ರದರ್ಶನವನ್ನು ರದ್ದುಪಡಿಸಲಾಗಿತ್ತು. ಇದರೊಂದಿಗೆ ಸೂಪರ್ ಮಾರ್ಕೆಟ್ ಮತ್ತು ಮಾಲ್​ಗಳು ಸಂಜೆ ವರೆಗೆ ಮುಚ್ಚಿದ್ದವು. ಪೆಟ್ರೋಲ್ ಬಂಕ್​ಗಳು ಕೆಲ ಕಡೆ ಮುಚ್ಚಿದ್ದವು, ಇನ್ನು ಕೆಲ ಬಂಕ್​ಗಳು ತೆರೆದಿದ್ದವು. ಆದರೆ, ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಮಾತ್ರ ಎಂದಿನಂತೆ ಸೇವೆ ನೀಡಿದವು.

ಹೋಟೆಲ್​ಗಳಿಗೂ ಬೀಗ ಬಿದ್ದಿತ್ತು. ರಸ್ತೆ ಬದಿಯ ಫಾಸ್ಟ್​ಫುಡ್ ಅಂಗಡಿಗಳೂ ತೆರೆದಿರಲಿಲ್ಲ. ವಸತಿಗೃಹದಲ್ಲಿ ವಾಸ್ತವ್ಯ ಹೂಡಿದವರಿಗೆ ಊಟ-ತಿಂಡಿ ಸರಬರಾಜು ಬಿಟ್ಟರೆ, ಉಳಿದಂತೆ ಯಾವುದೇ ಚಟುವಟಿಕೆಯೂ ಇರಲಿಲ್ಲ. ಹೋಟೆಲ್, ಟೀ ಅಂಗಡಿಗಳು ಮುಚ್ಚಿದ್ದರಿಂದ ಕೆಲವರು ಊಟ, ಉಪಾಹಾರಕ್ಕಾಗಿ ಪರದಾಡಿದರು.

ಎಂದಿನಂತೆ ಕಾರ್ಯನಿರ್ವಹಿಸಿದ ಚಾಮರಾಜೇಂದ್ರ ಮೃಗಾಲಯ, ಅಂಬಾವಿಲಾಸ ಅರಮನೆಯೂ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿತ್ತು. ಪಾಲಿಕೆ ಕಚೇರಿಯನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದರು. ಕೆಲ ಕಡೆ ಬ್ಯಾಂಕ್​ಗಳು ತೆರೆದಿದ್ದವು. ಇನ್ನು ಕೆಲ ಕಡೆ ಬ್ಯಾಂಕ್​ಗಳು ಬಂದ್ ಆಗಿದ್ದವು.

ರೈಲು ಸೇವೆಗೆ ಭಂಗ ಇಲ್ಲ: ರೈಲ್ವೆ ಸೇವೆ ಎಂದಿನಂತೆ ಮುಂದುವರಿಯಿತು. ದೂರದ ಊರುಗಳಿಗೆ ತೆರಳಲು ಬಹುತೇಕ ಪ್ರಯಾಣಿಕರು ರೈಲು ಸೇವೆಯನ್ನೇ ನೆಚ್ಚಿಕೊಂಡಿದ್ದರು. ಇದರಿಂದ ಬೆಂಗಳೂರು, ಚಾಮರಾಜನಗರ, ಅರಸೀಕೆರೆ, ಶಿವಮೊಗ್ಗ ಕಡೆ ತೆರಳುವ ರೈಲುಗಳು ಬಹುತೇಕ ಭರ್ತಿಯಾಗಿದ್ದವು. ಆದರೆ, ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಎಂದಿನಷ್ಟು ಇರಲಿಲ್ಲ.

ನಗರದ ಪ್ರಮುಖ ಪ್ರದೇಶಗಳು, ವೃತ್ತ, ಸಿಗ್ನಲ್​ಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಅರಮನೆ ಸುತ್ತಲು, ಬಸ್ ನಿಲ್ದಾಣ, ಸೂಕ್ಷ್ಮ ಪ್ರದೇಶಗಳು, ವಾಣಿಜ್ಯ ಕೇಂದ್ರಗಳ ರಸ್ತೆ, ಪ್ರಮುಖ ವೃತ್ತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಂಡು ಬಂದರು.

ಪ್ರತಿಭಟನೆಗೆ ನಿರ್ಬಂಧಿತ ಪ್ರದೇಶವಾದ ಕೆ.ಆರ್.ವೃತ್ತದಲ್ಲಿ ಪ್ರತಿಭಟನೆಗೆ, ಮೆರವಣಿಗೆಗೆ ಅವಕಾಶ ನೀಡಲಿಲ್ಲ. ಹೀಗಾಗಿ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣ, ಚಿಕ್ಕಗಡಿಯಾರ, ಅಗ್ರಹಾರ, ಡಿಸಿ ಕಚೇರಿ ಸೇರಿದಂತೆ ಇತರೆ ಕಡೆ ಪ್ರತಿಭಟನೆಗಳು ನಡೆದವು.

ಆದರೆ, ನಗರದ ಹೃದಯಭಾಗದಲ್ಲಿರುವ ದೇವರಾಜ ಮಾರುಕಟ್ಟೆಗೆ ಮಾತ್ರ ಬಂದ್ ಬಿಸಿ ತಟ್ಟಲಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅಂಗಡಿಗಳ ಬಾಗಿಲು ಮುಚ್ಚಲು ವ್ಯಾಪಾರಸ್ಥರು ಮುಂದಾಗಲಿಲ್ಲ. ಅವುಗಳನ್ನು ಮುಚ್ಚುವಂತೆ ಯಾವುದೇ ಸಂಘಟನೆಗಳು ಒತ್ತಾಯ ಮಾಡಲಿಲ್ಲ. ಆದರೆ, ಗ್ರಾಹಕರ ಸಂಖ್ಯೆ ಇಲ್ಲೂ ಕಡಿಮೆ ಇತ್ತು. ಜನರಿಂದ ಗಿಜಿಗುಡುವ ಮಾರುಕಟ್ಟೆ ಮೌನಕ್ಕೆ ಜಾರಿತ್ತು.

ಬೆಳಗ್ಗೆ 6ರಿಂದ ಮಧ್ಯಾಹ್ನ 3ರ ವರೆಗೆ ನಗರ ಭಾಗಶಃ ಸ್ತಬ್ಧವಾಗಿತ್ತು. ಬಂದ್ ಅವಧಿ ಮುಗಿದ ಬಳಿಕ ನಗರ ಸಹಜ ಸ್ಥಿತಿಗೆ ಮರಳಿತು. ಬಸ್​ಗಳು, ಅಂಗಡಿಗಳು, ಚಿತ್ರಮಂದಿರಗಳು ಸೇರಿದಂತೆ ಎಲ್ಲ ವಹಿವಾಟುಗಳು ನಿಧಾನಗತಿಯಲ್ಲಿ ಗರಿಬಿಚ್ಚಿದ್ದವು.

ನಿಲ್ಲದ ಗಜಪಡೆ ತಾಲೀಮು: ಬಂದ್​ನಿಂದಾಗಿ ಜನರ ದೈನಂದಿನ ಚಟುವಟಿಕೆಗಳು ಏರುಪೇರಾದರೂ ದಸರಾ ಗಜಪಡೆಗೆ ಮಾತ್ರ ಬಂದ್ ಬಿಸಿ ತಟ್ಟಲಿಲ್ಲ. ವಿರಳ ವಾಹನ ಸಂಚಾರದಿಂದ ಆನೆಗಳು ರಾಜಬೀದಿಯಲ್ಲಿ ಹೆಜ್ಜೆ ಹಾಕಿದವು.

ಅಂಬಾರಿ ಹೊರುವ ಅರ್ಜುನ ನೇತೃತ್ವದಲ್ಲಿ ಆರು ಆನೆಗಳು ನಿರ್ವಿಘ್ನವಾಗಿ ತಾಲೀಮು ನಡೆಸಿದವು. ಅವುಗಳು ಎಂದಿನಂತೆ ಅರಮನೆಯಿಂದ ಬನ್ನಿಮಂಟಪದ ವರೆಗೆ ತಾಲೀಮಿನಲ್ಲಿ ಮಗ್ನವಾಗಿದ್ದವು.