Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಭಾರತೀಯ ಚಿತ್ರರಂಗದಲ್ಲೇ ಅದೊಂದು ಹಿಮಾಲಯ ಪ್ರತಿಭೆ

Sunday, 23.04.2017, 3:00 AM       No Comments

ಕೆಲವರು ಕಣ್ಮರೆಯ ನಂತರವೂ ನಮ್ಮನ್ನು ಕಾಡುತ್ತಲೇ ಇರುತ್ತಾರೆ, ಪ್ರೇರಣೆ ನೀಡುತ್ತಲೇ ಇರುತ್ತಾರೆ. ಮೇರುನಟ ರಾಜಕುಮಾರ್ ಅಂಥವರು. ಪ್ರತಿಭೆ, ವಿನಯಗಳ ಸಂಗಮವಾಗಿದ್ದ ಅವರು ವೃತ್ತಿ ಜೀವನದಲ್ಲಿ ಬೆಳೆದ ಬಗೆ ಅನನ್ಯ. ನಾಳೆ, ಏಪ್ರಿಲ್ 24 ಅವರ ಜನ್ಮದಿನ. ಈ ನಿಮಿತ್ತ ಒಂದಷ್ಟು …

‘ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂಧ ವರ್ವ| ಯಾವ ಕದಂಬರ ವಂಶವೃಕ್ಷ ನಿನ್ನ ಕ್ರೌರ್ಯಕ್ಕೆ ಸಿಕ್ಕಿ ನಿರ್ನಾಮವಾಯಿತೆಂದು ತಿಳಿದಿರುವೆಯೋ ಆ ಮಹಾವಂಶವೃಕ್ಷವಿಂದು ಮತ್ತೆ ಚಿಗುರಿ ತಲೆಯೆತ್ತಿ ನಿಂತಿದೆ| ಪಲ್ಲವರ ಸೊಲ್ಲಡಗಿಸಿ| ನಮ್ಮ ನೆಲದಿಂದ ಬಡಿದೋಡಿಸಿ| ವೈಜಯಂತಿಯ ರತ್ನ ಸಿಂಹಾಸನದಲ್ಲಿ ಮತ್ತೆ ಕನ್ನಡ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಠಿಸುವ ಮುಹೂರ್ತ ಹತ್ತಿರವಾಗುತ್ತಿದೆ| ಕನ್ನಡಿಗರ ಪೌರುಷ| ಕನ್ನಡಿಗರ ಸಾಹಸ| ಕನ್ನಡಿಗರ ಸ್ವಾಭಿಮಾನ| ಆಚಂದ್ರಾರ್ಕವಾಗಿ ನಿಲ್ಲುವಂತದ್ದೇ ಹೊರತು ನಿನ್ನಂಥ ಕೋಟಿ ಪಲ್ಲವರ ನಿರಂತರ ದಾಳಿಯಿಂದ ಅಳಿಯದು ಎಂಬ ಸತ್ಯವನ್ನು| ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ| ಇದೇ ನನ್ನ ಗುರಿ| ಇದೇ ನನ್ನ ಮಂತ್ರ| ಇದೇ ನನ್ನ ಪ್ರತಿಜ್ಞೆ….!!’

-ಮಾತುಗಳಾ ಇವು?! ಮಸೆದ ಕತ್ತಿಯ ಕಿಡಿಗಳು! ಎಸೆದ ಕೂರಂಬಿನ ಕುಡಿಗಳು! ಅಕ್ಷರಕ್ಷರದಲ್ಲೂ ಕಿಡಿಯುತ್ತದೆ ಆಕ್ರೋಶ! ಸಿಡಿಯುತ್ತದೆ ಆರ್ಭಟ!

ಕೇಳಿದವರ ಕಿವಿತಟ್ಟೆಗಳು ಕೆಂಪಾಗುತ್ತವೆ! ಹುಬ್ಬು ಗಂಟಿಕ್ಕುತ್ತದೆ! ಮುಷ್ಟಿ ಬಿಗಿಯುತ್ತದೆ! ಮೈಮನಗಳಲ್ಲೆಲ್ಲಾ ಕನ್ನಡವೇ ಹೊಳೆಯಾಗಿ ಹರಿದು ಆರ್ಭಟಿಸಿದಂತಾಗುತ್ತದೆ!

ಕನ್ನಡವೆಂದರದು ಬೆಂಕಿಕಣಾ! ಗುಡುಗು ಕಣಾ! ಸಿಡಿಲು ಕಣಾ! ಅಂದರಲ್ಲ ಕುವೆಂಪು. ಅದರ ಅನುಭೂತಿಯಾಗುತ್ತದೆ ಫಿರಂಗಿಯ ಬಾಯಿಂದ ಸಿಡಿದ ಗುಂಡುಗಳ ಹಾಗೆ ಭೋರ್ಗರೆವ ಈ ಕನ್ನಡವನ್ನು ಕೇಳಿದರೆ!

ಅವರ ನಾಲಿಗೆಯಲ್ಲಿ ಸಂಭಾಷಣೆಯ ಒಂದಕ್ಷರವೂ ಹುಸಿಯುವುದಿಲ್ಲ. ಯಾವ ಅಕ್ಷರವನ್ನು ಹೇಗೆ ಉಚ್ಚರಿಸಬೇಕು, ಎಷ್ಟು ಉಚ್ಚರಿಸಬೇಕು, ಯಾವ ಅಕ್ಷರ ಎಷ್ಟು ರಭಸವಾಗಬೇಕು, ಎಷ್ಟು ಮೃದುವಾಗಬೇಕು, ಯಾವ ಮಾತು ಹೇಗೆ ಸಾಗಬೇಕು, ಹೇಗೆ ತೂಗಬೇಕು, ವಾಕ್ಯ ದೀರ್ಘವಾದರೆ ಅದರ ಮಧ್ಯದ ಉಸಿರ್ದಾಣ ಯಾವುದು? ಪದಪದಗಳ ನಡುವೆ ಎಷ್ಟು ಬಿಡುವು? ಎಷ್ಟು ಬಿಗುವು? ಯಾವ ವಾಕ್ಯದ ಯಾವ ಭಾಗ ಮಂದ್ರ? ಯಾವುದು ತಾರ?- ಎಲ್ಲವನ್ನೂ ಖಚಿತವಾಗಿ ಕರಾರುವಾಕ್ಕಾಗಿ ನಿರ್ಧರಿಸಿದಂತೆ ಆಡುತ್ತವೆ ಆ ನಾಲಿಗೆ. ಆ ಪುಣ್ಯಾತ್ಮನ ನಾಲಿಗೆಯಲ್ಲಿ ಕನ್ನಡವನ್ನು ಕೇಳುತ್ತಿದ್ದರೆ ‘ಆಹಾ, ನಮ್ಮ ಕನ್ನಡವೇ!!’ ಎಂಬಭಿಮಾನವೊಂದು ಎದೆ ತುಂಬಿಕೊಳ್ಳುತ್ತದೆ.

ಹೌದು, ಹೌದಪ್ಪಾ ಹೌದು! ನಾವು ರಾಜಕುಮಾರ್ ಬಗ್ಗೆಯೇ ಮಾತಾಡುತ್ತಿರುವುದು! ನಾಳೆ ಏಪ್ರಿಲ್ 24. ನಮ್ಮ ಕನ್ನಡ ಬೆಳ್ಳಿತೆರೆಯ ಶಕಪುರುಷ ರಾಜಕುಮಾರ್ ಹುಟ್ಟಿದ ದಿನ. ಬದುಕಿದ್ದರೆ ಈಗ ಎಂಭತ್ತಾರು ವರ್ಷ ತುಂಬುತ್ತಿತ್ತು.

ಡಾ. ರಾಜಕುಮಾರ್ ಬಗ್ಗೆ ಈ ಅಂಕಣದಲ್ಲಿ ಈ ಹಿಂದೆ ಎರಡು ಬಾರಿ ಬರೆದಿದ್ದೇನೆ. ಆದರೂ ಅವರ ಬಗ್ಗೆ ಬರೆಯುವುದಕ್ಕೆ ಅದೇನೋ ಸಂಭ್ರಮವಾಗುತ್ತದೆ. ಯಾಕೆಂದರೆ ಅವರು ನನ್ನ ಭಾವಕೋಶವನ್ನೆಲ್ಲಾ ವ್ಯಾಪಿಸಿಕೊಂಡಿದ್ದಾರೆ. ಕನ್ನಡದ ಎರಡು ಮೂರು ತಲೆಮಾರು ಅವರ ಸಿನಿಮಾ ನೋಡಿಕೊಂಡೇ ಬೆಳೆದವರು. ಅಗಾಧ ಸಂಖ್ಯೆಯ ಜನ ಅವರ ಸಿನಿಮಾ ನೋಡಿಕೊಂಡೇ ಕನ್ನಡ ಪ್ರೀತಿಯನ್ನು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಈಗಲೂ ನಾನು ಅವಕಾಶ ದೊರೆತಾಗಲೆಲ್ಲಾ (ಅಥವಾ ಅವಕಾಶ ಮಾಡಿಕೊಂಡು) ರಾಜಕುಮಾರ್ ಅವರ ಬಗ್ಗೆ, ಅವರ ಕನ್ನಡವಾಡುವ ಮಹಾಪ್ರತಿಭೆಯ ಬಗ್ಗೆ, ಅಗಾಧ ವಿನಯ ಸಂಪತ್ತಿನ ಬಗೆಗೆ ಮಾತಾಡುತ್ತಲೇ ಇರುತ್ತೇನೆ. ಬರೆಯುತ್ತಲೂ ಇರುತ್ತೇನೆ.

ರಾಜಕುಮಾರ್ ಕನ್ನಡದ ತೆರೆಯ ಮೇಲಷ್ಟೇ ಕಾಣಿಸಿಕೊಂಡಿದ್ದರೂ ಕೂಡಾ ಇಡೀ ಭಾರತೀಯ ಚಿತ್ರರಂಗದಲ್ಲೇ ಅವರೊಂದು ಹಿಮಾಲಯ ಪ್ರತಿಭೆ ಎಂಬ ಮಾತನ್ನು ಯಾರೂ ವಿರೋಧಿಸಲಾರರು. ಕನ್ನಡದ ಮಟ್ಟಿಗಂತೂ ಕೇವಲ ಚಿತ್ರರಂಗವನ್ನು ಮಾತ್ರವಲ್ಲದೆ ಇಡೀ ಕನ್ನಡನಾಡನ್ನು, ಕನ್ನಡದ ಜಗತ್ತನ್ನು ಅರ್ಧಶತಮಾನಕ್ಕಿಂತಲೂ ಹೆಚ್ಚು ಕಾಲ ಆವರಿಸಿಕೊಂಡ ಮಹಾನ್ ವ್ಯಕ್ತಿತ್ವ ಅವರದು.

ಬಡತನವನ್ನೇ ಹಾಸಿ ಹೊದ್ದುಕೊಂಡು ಹುಟ್ಟಿದ ರಾಜಕುಮಾರ್(ಹುಟ್ಟು ಹೆಸರು- ಮುತ್ತುರಾಜು) ಸಿನಿಮಾಕ್ಕೆ ಬಂದದ್ದು ತೀರಾ ಆಕಸ್ಮಿಕವೇನೂ ಅಲ್ಲ. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನಾಟಕದ ಕಲಾವಿದರೇ ಆಗಿದ್ದವರು. ಆದ್ದರಿಂದ ಸಹಜವಾಗಿಯೇ ರಾಜಕುಮಾರ್ ಕೂಡಾ(ಅವರ ಇಬ್ಬರು ತಂಗಿಯರ ಜೊತೆಗೆ) ಬಾಲ್ಯದಲ್ಲೇ ನಾಟಕದ ಕಂಪನಿ ಸೇರಿಕೊಂಡಿದ್ದರು. 1930ರಿಂದ 1950ರ ಸಮಯದಲ್ಲಿ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರು. ರೌದ್ರಪಾತ್ರಗಳಿಗೆ ಹೆಸರಾಗಿದ್ದವರು. ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜು ಮೂರನೇ ತರಗತಿಯಿಂದ ಆಚೆಗೆ ಓದಲಾಗಲಿಲ್ಲ. ಆದರೆ ಗುಬ್ಬಿ ಕಂಪನಿಯಿತ್ತಲ್ಲ ಅದೊಂದು ಬರೀ ನಾಟಕದ ಕಂಪನಿಯಲ್ಲ, ಒಂದು ಯೂನಿವರ್ಸಿಟಿ. ಆ ಕಂಪನಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಕೊಟ್ಟ ಕೊಡುಗೆಯನ್ನು ಯಾವ ಯೂನಿವರ್ಸಿಟಿಯೂ ಕೊಟ್ಟಿಲ್ಲ. ಸ್ವತಃ ಗುಬ್ಬಿ ವೀರಣ್ಣ, ಬಿ. ಜಯಮ್ಮ, ಎಂ.ವಿ ಸುಬ್ಬಯ್ಯ ನಾಯ್ಡು, ಕೆ.ಹಿರಣ್ಣಯ್ಯ, ರಾಜಕುಮಾರ್, ಬಿ.ವಿ.ಕಾರಂತ, ಬಾಲಕೃಷ್ಣ, ನರಸಿಂಹರಾಜು, ಜಿ.ವಿ.ಅಯ್ಯರ್, ಎಂ.ವಿ.ವಾಸುದೇವರಾವ್, ಬಿ.ಜಯಶ್ರೀ ಮುಂತಾದ ಹೆಸರುಗಳು ಒಂದು ನಾಡಿನ ಗೌರವವನ್ನೇ ಹೆಚ್ಚುಗೊಳಿಸುವಂಥವು. ಅವರೆಲ್ಲಾ ಗುಬ್ಬಿ ಕಂಪನಿಯಿಂದಲೇ ಬಂದವರು. ಅದು ಮಾತ್ರವಲ್ಲ ಕನ್ನಡವನ್ನು ಈ ಕಲಾವಿದರು ಅದೆಷ್ಟು ಚೆನ್ನಾಗಿ ಬಳಸುತ್ತಾರೆಂದರೆ, ಅದರ ಹಿಂದೆ ಗುಬ್ಬಿ ಕಂಪನಿ ಅವರಿಗೆಲ್ಲಾ ಎಂಥಾ ತರಬೇತಿ ನೀಡಿತ್ತೆನ್ನುವುದು ಅರ್ಥವಾಗುತ್ತದೆ. ರಾಜಕುಮಾರ್ ಅವರಂತೂ ಕನ್ನಡ ಭಾಷಾ ಪ್ರಯೋಗದ ಸೀಮಾಪುರುಷ. ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ಅಭಿನಯಿಸಿರುವ ಕಲಾವಿದರು ಬಹುಶಃ ಇಡೀ ಜಗತ್ತಿನಲ್ಲಿಲ್ಲ. ಅದು ಪೌರಾಣಿಕ ಪಾತ್ರವಿರಬಹುದು, ಐತಿಹಾಸಿಕ ಪಾತ್ರವಿರಬಹುದು. ಇನ್ನು ನಮ್ಮ ಸಾಮಾಜಿಕ ಬದುಕಿನ ಯಾವುದೇ ಪಾತ್ರವಿರಬಹುದು- ಲಾಯರು, ಡಾಕ್ಟರು, ಲೆಕ್ಚರರು, ಪ್ರೊಫೆಸರು, ಪತ್ರಕರ್ತ, ಪೊಲೀಸ್ ಆಫೀಸರು, ಕಾಲೇಜು ಹುಡುಗ, ಗೃಹಸ್ಥ, ಪ್ರೇಮಿ, ಸಂಗೀತಗಾರ, ಪತ್ತೇದಾರ, ಕಳ್ಳ, ಕೇಡಿ, ಕಿಲಾಡಿ, ಪೆದ್ದ, ಮುಗ್ಧ, ಊರ ಯಜಮಾನ, ಮನೆಯ ಆಳು, ಹಳ್ಳಿ ಹುಡುಗ, ನಗರದ ನಾಗರಿಕ ಇತ್ಯಾದಿಯಾದ ಯಾವುದೇ ಪಾತ್ರಕ್ಕೂ ಸಹಜವಾದ ಭಾಷೆಯನ್ನು ರಾಜಕುಮಾರ್ ಮಾತಾಡಿದರು.

ರಾಜಕುಮಾರ್ ಈಗ ಇಲ್ಲ. ಈಗಿನ ಕನ್ನಡ ಸಿನಿಮಾಗಳನ್ನು ನೋಡಿದರೇ ಅದು ತಿಳಿಯುತ್ತದೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ ರಾಜಕುಮಾರ್ ಸಿನಿಮಾಕ್ಕೆ ಒಬ್ಬ ಕಲಾವಿದರಷ್ಟೇ ಆಗಿದ್ದವರಲ್ಲ. ಇಡೀ ಚಿತ್ರರಂಗದ ಅಭಿರುಚಿಯ ಜಲಚಿಹ್ನೆಯಾಗಿದ್ದರು. ಆದ್ದರಿಂದಲೇ ಅವರ ಯಾವ ಚಿತ್ರಗಳೂ ಮನರಂಜನೆಯ ಹೆಸರಿನಲ್ಲಿ ಹೊಲಸನ್ನು ಹಂಚಲಿಲ್ಲ. ಈವತ್ತು ಅದೆಷ್ಟೋ ನಿರ್ದೇಶಕರು, ಕಲಾವಿದರು ಹೇಳುತ್ತಾರೆ ನೋಡಿ-‘ಏನ್ ಮಾಡೋದು, ಒಳ್ಳೆ ಚಿತ್ರಗಳನ್ನ ಮಾಡಿದರೆ ಜನ ನೋಡೋದಿಲ್ಲವಲ್ಲ. ಜನ ಏನು ಕೇಳ್ತಾರೋ ಅದನ್ನೇ ನಾವು ಕೊಡ್ತೀವಿ.’ ಒಂದಿಷ್ಟೂ ಸಾಮಾಜಿಕ ಜವಾಬ್ದಾರಿಯಿಲ್ಲದವರು, ಅಭಿರುಚಿಹೀನರು ಹೇಳಬಹುದಾದ ಮಾತುಗಳು ಇವು. ಜನ ಏನು ಕೇಳ್ತಾರೋ ಅದನ್ನು ಮಾತ್ರ ಕೊಡುವವರು ವ್ಯಾಪಾರಿಗಳಾಗುತ್ತಾರೇ ವಿನಾ ಕಲಾವಿದರಾಗುವುದಿಲ್ಲ, ನಿರ್ದೇಶಕರಾಗುವುದಿಲ್ಲ. ಸಿನಿಮಾ ಅಥವಾ ಕಲೆ ಅವರಿಗೊಂದು ವೃತ್ತಿಯೇ ವಿನಾ ಅದಕ್ಕೆ ಇನ್ಯಾವ ಘನಂದಾರಿ ಅರ್ಥವೂ ಇಲ್ಲ. ಆದರೆ ರಾಜಕುಮಾರ್ ಅವರಿಗೆ ಸಿನಿಮಾ ಬರೀ ವೃತ್ತಿಯಲ್ಲ. ಅದೊಂದು ಧ್ಯಾನ, ಕರ್ತವ್ಯ, ಬದುಕು, ತಪಸ್ಸು, ಪೂಜೆ ಅಥವಾ ಅದೇ ಸರ್ವಸ್ವ ಅನ್ನಿ. ಇದಕ್ಕೆ ನಾನು ಎಲ್ಲೋ ಕೇಳಿದ ಇದೊಂದು ಪ್ರಸಂಗ ಒಂದು ಉದಾಹರಣೆಯಾಗಬಹುದು.

ರಾಜಕುಮಾರ್ ಅವರ ಅಭಿನಯ ಬದುಕಿನ ಕೊನೆಕೊನೆಯಲ್ಲಿ ನಟಿಸಿದ ಚಿತ್ರ ‘ಜೀವನಚೈತ್ರ’. ಅದರಲ್ಲಿ ಅವರದು ಊರ ಹಿರಿಯನ ಪಾತ್ರ. ಚಿತ್ರದಲ್ಲಿ ರಾಜ್​ಕುಮಾರ್ ಊರ ಹಿರಿಯನಾಗಿ ಊರಿನ ಹೆಂಡದಂಗಡಿಗಳನ್ನೆಲ್ಲಾ ಮುಚ್ಚಿಸುತ್ತಾನೆ. ಈಚಲ ಮರಗಳನ್ನು ಕಡಿಸಿ ಹಾಕುತ್ತಾನೆ. ಮೇಲ್ನೋಟಕ್ಕೆ ಇದು ಸಾಧಾರಣವೆನ್ನುವಂತೆ ತೋರುತ್ತದೆ ನಿಜ. ಆದರೆ ರಾಜಕುಮಾರ್ ಅವರ ನಿಜಬದುಕಿನ ಜೊತೆ ಈ ಸಂದರ್ಭವನ್ನು ತೂಕಕ್ಕೆ ಹಾಕಬೇಕು. ಅದೇನೆಂದರೆ ರಾಜ್ ಲೌಕಿಕ ಲೆಕ್ಕಾಚಾರಗಳಿಂದ ಜಾತಿಯಿಂದ ಈಡಿಗರು. ಈಡಿಗರಿಗೆ ಹೆಂಡ ಇಳಿಸುವುದು, ಹೆಂಡ ಮಾರುವುದು ಕುಲಕಸುಬು. ಈಚಲು ಮರ ಆ ಜಾತಿಯವರಿಗೆ ದೈವ ಸಮಾನ. ಆಗ ಈಡಿಗ ಸಮಾಜದ ಕೆಲ ಮುಖಂಡರು ರಾಜ್​ಕುಮಾರ್ ಅವರ ಬಳಿಗೆ ಹೋಗಿ-‘ಅಣ್ಣಾ, ಇದೇನು ಹೀಗೆ ಮಾಡಿಬಿಟ್ರೀ? ನೀವು ನಮ್ಮ ಕುಲದವರಾಗಿ ಈಚಲು ಮರಗಳನ್ನ ಕಡಿಸಿಹಾಕಬಹುದಾ? ಹೆಂಡದಂಗಡಿಗಳನ್ನು ಮುಚ್ಚಿಸಬಹುದಾ? ದಯವಿಟ್ಟು ಯೋಚನೆ ಮಾಡಿ. ಸಿನಿಮಾದಲ್ಲಿ ಆ ದೃಶ್ಯಗಳನ್ನು ಕತ್ತರಿಸಿ ಹಾಕಲು ಹೇಳಿ’ ಅಂದರಂತೆ. ಆಗ ರಾಜಕುಮಾರ್ ಹೇಳಿದರಂತೆ- ‘ನೀವು ಹೇಳೋದೆಲ್ಲ ಸರೀನೆ. ಆದರೆ, ಇದು ಕಲೆ. ಕಲಾವಿದನಾದಾಗ ನನಗೆ ಯಾವ ಜಾತಿ ಮತ ಪಂಥ ಏನೂ ಇರೋದಿಲ್ಲ. ಕಲೆ ಬಹಳ ಪವಿತ್ರವಾದದ್ದು. ದೈವಿಕವಾದದ್ದು. ಅಲ್ಲಿ ಸತ್ಯವನ್ನು ಮಾತ್ರ ಹೇಳಬೇಕು. ಆದ್ದರಿಂದ ಈ ಜಾತಿ ಕುಲ ಎಲ್ಲವನ್ನೂ ಇದರ ಮಧ್ಯೆ ತರಬೇಡಿ.’ ಇದು ಕಲಾವಿದರಾಗಿ ಅವರಿಗಿದ್ದ ನೈತಿಕ ಬದ್ಧತೆ.

1950-60ರ ದಶಕ. ಕನ್ನಡ ಚಿತ್ರರಂಗದಲ್ಲಿ ಮೂವರು ಕುಮಾರರು ಏರೆತ್ತರದ ಕಲಾವಿದರಾಗಿ ನಟಿಸುತ್ತಿದ್ದ ಕಾಲ- ರಾಜಕುಮಾರ್, ಉದಯಕುಮಾರ್ ಮತ್ತು ಕಲ್ಯಾಣಕುಮಾರ್. ಪ್ರತಿಭೆಯಲ್ಲಿ ಆ ಮೂವರಲ್ಲಿ ಯಾರಿಗೂ ಯಾರೂ ಕಡಿಮೆಯಿಲ್ಲ ಅನ್ನುವಂತೆಯೇ ಇದ್ದರು. ಕೆಲವು ಚಿತ್ರಗಳಲ್ಲಿ ಮೂವರೂ ನಟಿಸಿ ಅದೊಂದು ಗುಪ್ತವಾದ ಸ್ಪರ್ಧೆಯೂ ನಡೆಯುತ್ತಿತ್ತು. ಆದರೆ ರಾಜ್ ಬಹುಬೇಗನೆ ಆ ಈರ್ವರನ್ನು ದಾಟಿ ಮೇಲೇರಿಬಿಟ್ಟರು. ಆ ಕಾಲದ ಆ ಸ್ಪರ್ಧೆ ತುಂಬಾ ಆರೋಗ್ಯಕರವಾಗಿತ್ತೆಂದೂ ಹೇಳುವಂತಿಲ್ಲ. ರಾಜ್ ಅವರಿಗೆ ಇರಿಸುಮುರಿಸಾಗುವಂಥ ಹಲವಾರು ಘಟನೆಗಳೂ ಆಗ ನಡೆದವು. ಆದರೆ ಅವರಲ್ಲಿ ಅವರ ನಟನೆಯ ಪ್ರತಿಭೆಯನ್ನೂ ಮೀರಿದ ಆಧ್ಯಾತ್ಮಿಕ ಎನ್ನಬಹುದಾದ ಅದೊಂದು ಅಂತರ್​ದ್ರವ್ಯವಿತ್ತು. ರಾಜಕುಮಾರ್ ತಮ್ಮೆಲ್ಲಾ ಲೌಕಿಕ, ವ್ಯಾವಹಾರಿಕ ಜಂಜಡಗಳನ್ನು ಕಿತ್ತುಕೊಂಡು ಕಲೆಗೆ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಂಡರು. ‘ಇದಲ್ಲದೆ ಬೇರೆ ಬದುಕೇ ಇಲ್ಲ’ ಎಂಬಂತೆ ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡರು. ಫಲಿತಾಂಶ- ಎಪ್ಪತ್ತರ ದಶಕಕ್ಕೆ ಬರುವ ಹೊತ್ತಿಗೆ ಅವರಿಗೆ ಇಡೀ ಚಿತ್ರರಂಗದಲ್ಲಿ ಸರಿಸಾಟಿ ಎನ್ನುವವರು, ಹೋಲಿಸಬಹುದಾದವರು ಯಾರೂ ಇಲ್ಲ ಎಂಬಂತೆ ರಾಜ್ ಏಕಮೇವರಾಗಿಬಿಟ್ಟರು. ಬಹುಶಃ ಇಡೀ ಭಾರತೀಯ ಚಿತ್ರರಂಗದಲ್ಲಿ ಇದೂ ಒಂದು ದಾಖಲೆಯಿರಬಹುದೇನೋ. ಈ ಮಹಾನ್ ನಟ ಅಭಿನಯಿಸಿದ ಚಿತ್ರಗಳಲ್ಲಿ ಅಯಶಸ್ವಿ ಎನ್ನುವಂಥ ಚಿತ್ರಗಳು ಶೇಕಡಾ ಹತ್ತು ಕೂಡಾ ಇಲ್ಲ. ಅದರಲ್ಲೂ ರಾಜ್ ಚಿತ್ರ ಬದುಕಿನ ಆರಂಭದ ದಿನಗಳನ್ನು ಬಿಟ್ಟರೆ ಉಳಿದಂತೆ ಬಿಡುಗಡೆಯಾದ ಎಲ್ಲಾ ಚಿತ್ರಗಳೂ ಯಶಸ್ಸನ್ನೇ ಕಂಡಿವೆ. ಅದರಲ್ಲೂ ಎರಡು ವರ್ಷ ನಿರಂತರವಾಗಿ ಪ್ರದರ್ಶನ ಕಂಡ ‘ಬಂಗಾರದ ಮನುಷ್ಯ’ ಕನ್ನಡದ ಮಟ್ಟಿಗೆ ಈವರೆಗಿನ ದೊಡ್ಡ ದಾಖಲೆಯೇ.

ನಾನು ರಾಜ್ ಅಭಿನಯಿಸಿದ ಎಂಟೋ ಹತ್ತೋ ಚಿತ್ರಗಳನ್ನು ಬಿಟ್ಟರೆ ಬಹುಪಾಲು ಎಲ್ಲಾ ಚಿತ್ರಗಳನ್ನು ನೋಡಿದವನು. ಅದಕ್ಕೆ ಕಾರಣ ನಾನು ರಾಜ್ ಅಭಿಮಾನಿ ಸಂಘದವನು ಎಂದಲ್ಲ. ನನಗೆ ಅವರ ಬಗ್ಗೆ ಇರುವ ಗೌರವ ಈ ಅಭಿಮಾನಿ ಗಿಭಿಮಾನಿ ಅನ್ನುವ ಕ್ಲೀಷೆಗಿಂತ ಹೆಚ್ಚಿನದು. ಯಾಕೆಂದರೆ ರಾಜಕುಮಾರ್ ಅದೊಂದು ಸಾಮಾಜಿಕ ಜವಾಬ್ದಾರಿಯಿಂದ ತಮ್ಮ ಸಿನಿಮಾಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಕಟ್ಟುವ ಬಗೆ ನನಗೆ ಅತ್ಯಂತ ಆಪ್ಯಾಯಮಾನ. ಅಂಥದೊಂದು ನಿರೀಕ್ಷೆಯಿಟ್ಟುಕೊಂಡೇ ಇತ್ತೀಚಿನ ಕೆಲವು ಸ್ಟಾರುಗಳ ಸಿನಿಮಾ ನೋಡಿ ನಾನು ಅಸಹ್ಯಪಟ್ಟುಕೊಂಡಿದ್ದೇನೆ. ಒಂದು ಸಣ್ಣ ಉದಾಹರಣೆಯೆಂದರೆ-

ಇತ್ತೀಚೆಗೆ ಒಂದು ಕನ್ನಡ ಸಿನಿಮಾದ ಕಾಮಿಡಿ ದೃಶ್ಯ ನೋಡುವಾಗ ಅದರಲ್ಲಿ ಒಂದು ಸಂಭಾಷಣೆ ಬಂತು- ‘ಆಹಾ, ನಿನ್ನ್ ಮೊಕ ನೋಡಿದ್ರೆ ಒಳ್ಳೆ ಗಂಡಸತ್ತ ಮುಂ…. ಮೊಕಾ ಇದ್ದಂಗದೆ’- ತೆರೆಯ ಮೇಲೆ ಹಾಸ್ಯಕ್ಕಾದರೂ ಇಂಥ ಮಾತುಗಳನ್ನು ಬಳಸುವುದು ಹೀನಾಭಿರುಚಿಯ ಅಧಃಪಾತಾಳ. ಅದರಲ್ಲೂ ಗಂಡ ತೀರಿಕೊಂಡಿರುವ ಹೆಣ್ಣು ಮಗಳನ್ನು ‘ಮುಂ… ’ ಎಂದು ಕರೆಯುವುದೇ ಅತ್ಯಂತ ಅನಾಗರಿಕ, ಅಸಹ್ಯ. ಅಂಥ ಶಬ್ದಗಳನ್ನು ಈ ಕಲಾವಿದರು ಎಂದು ಕರೆಸಿಕೊಳ್ಳುವ ಜನ ಹಾಸ್ಯಕ್ಕೆ ಬಳಸಿಕೊಳ್ಳುವುದನ್ನು ಕಂಡಾಗ ಈಗ ಕನ್ನಡ ಚಿತ್ರರಂಗದಲ್ಲಿ ರಾಜ್​ಕುಮಾರ್ ಇಲ್ಲ ಎಂದು ನೆನಪು ಮಾಡುತ್ತದೆ. ಆದರೆ ರಾಜಕುಮಾರ್ ಅದೆಂಥ ಪಾತ್ರ ಮಾಡಿದಾಗಲೂ ಇಂಥ ಅಸಹ್ಯದ ಶಬ್ದಗಳನ್ನು ಬಳಸುವುದಿಲ್ಲ. ಇದು ‘ಮಡಿ’ಯ ವಿಷಯವಲ್ಲ ಅಭಿರುಚಿಯ ವಿಷಯವಷ್ಟೇ.

ರಾಜ್, ಇಷ್ಟು ದೊಡ್ಡ ಕಲಾವಿದರಾಗಿ ಬೆಳೆದದ್ದರ ಹಿಂದಿನ ಬಹುದೊಡ್ಡ ಶಕ್ತಿಯೆಂದರೆ ಅವರ ವಿನಯ. ಎಷ್ಟೋ ಜನರಿಗೆ ವಿನಯ ಎಷ್ಟೋ ಬಾರಿ ಕೃತಕ ಎನ್ನುವಂತೆ ಕಾಣುತ್ತದೆ. ಆದರೆ ರಾಜಕುಮಾರ್ ಅವರಿಗೆ ಮಾತ್ರ ವಿನಯ ಅತ್ಯಂತ ಸಹಜಗುಣ. ಕಲಾಜಗತ್ತಿನ ಅನಂತತೆಯನ್ನು, ಅಗಾಧತೆಯನ್ನು ಅರಿತವರಿಗೆ ಮಾತ್ರ ಪ್ರಾಪ್ತವಾಗುವ ವಿನಯಗುಣ ಅವರದು. ಅದಕ್ಕೆ ಒಂದೇ ಉದಾಹರಣೆ- ಅವರಿಗೆ 1995ರಲ್ಲಿ ಭಾರತ ಸರ್ಕಾರದ ವತಿಯಿಂದ ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದವರಿಗೆ ನೀಡುವ ‘ದಾದಾ ಸಾಹೇಬ ಫಾಲ್ಕೆ’ ಪ್ರಶಸ್ತಿ ದೊರೆಯಿತು. ಆ ಪ್ರಶಸ್ತಿ ದೆಹಲಿಯಲ್ಲಿ ಘೊಷಿತವಾದಾಗ ವಿಷಯ ತಮ್ಮೋರ್ವ ಗೆಳೆಯರ ಮುಖಾಂತರ ಶಿವರಾಜ್​ಕುಮಾರ್​ಗೆ ತಿಳಿಯಿತಂತೆ. ಸಹಜವಾಗೇ ಅವರಿಗೆ ತುಂಬಾ ಸಂತೋಷವಾಯಿತು. ಆಗ ಶೂಟಿಂಗ್​ಗಾಗಿ ಬೇರೊಂದು ಊರಿನಲ್ಲಿದ್ದ ಶಿವರಾಜಕುಮಾರ್ ವಿಷಯ ತಿಳಿದಕೂಡಲೇ ತಂದೆಯವರಿಗೆ ಫೋನು ಮಾಡಿ- ‘ಅಪ್ಪಾಜೀ, ನಿಮಗೆ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಬಂದಿದೆ’ ಅಂದರಂತೆ. ಅದಕ್ಕೆ ರಾಜಕುಮಾರ್ ಹೇಳಿದ್ದು- ‘ಹೌದಾ, ಅದನ್ನ್ಯಾಕೆ ನನಗೆ ಕೊಟ್ಟರು?’ ಶಿವರಾಜಕುಮಾರ್ ಹೇಳಿದರು- ‘ಅಪ್ಪಾಜಿ, ಅದು ಇಡೀ ಭಾರತೀಯ ಸಿನಿಮಾರಂಗದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದವರಿಗೆ ಕೋಡೋದು’. ಮತ್ತೆ ರಾಜ್ ಕೇಳಿದರು-‘ಅದಕ್ಕೇ ಕಂದಾ ನಾನು ಕೇಳ್ತಾ ಇರೋದು, ಅದು ಇಡೀ ಭಾರತೀಯ ಚಿತ್ರರಂಗದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದೋರಿಗೆ ಕೊಡೋದು, ಅದನ್ನು ನನಗ್ಯಾಕೆ ಕೊಟ್ಟರು ಅಂತ!’

ಅವರಂಥ ಮಹಾನ್ ಕಲಾವಿದ ಈ ಪ್ರಶ್ನೆ ಕೇಳಿದ್ದು ಸಹಜವೇ ಆಗಿತ್ತು. ಅದಕ್ಕೇ ರಾಜ್ ಅಷ್ಟು ದೊಡ್ಡ ಕಲಾವಿದನಾದದ್ದು, ದೊಡ್ಡ ಮನುಷ್ಯನಾದದ್ದು, ಇಲ್ಲದಿರುವಾಗಲೂ ಹೆಚ್ಚು ಹೆಚ್ಚು ಇರೋದು!

Leave a Reply

Your email address will not be published. Required fields are marked *

Back To Top