Friday, 16th November 2018  

Vijayavani

Breaking News

ಭಾರತೀಯ ಕ್ರಿಕೆಟ್​ನ ಕ್ರಾಂತಿಕಿಡಿ ಕಪಿಲ್ ದೇವ್

Wednesday, 25.10.2017, 3:05 AM       No Comments

ಅಪಮಾನವಾದರೆ ಒಳ್ಳೇದು ಎಂದು ಪುರಂದರ ದಾಸರು ಸುಖಾಸುಮ್ಮನೇ ಹೇಳಿದ್ದಲ್ಲ. ನಿರಾಸೆ, ಹತಾಶೆ, ಅವಮಾನ, ಅಸಹನೆಯನ್ನು ತಂದೊಡ್ಡುವ ಕೆಲವು ವಿಲಕ್ಷಣ ಕ್ಷಣಗಳೇ ಮಹೋನ್ನತ ಸಾಧನೆಗೆ ಮೆಟ್ಟಿಲುಗಳಾಗಿಬಿಡುತ್ತವೆ. ನಮ್ಮೊಳಗಿನ ಅಂತಃಶಕ್ತಿಯನ್ನು, ಸಾಧನೆಯ ತುಡಿತವನ್ನು ಬಡಿದೆಬ್ಬಿಸಿ ಹೋರಾಡುವುದಕ್ಕೆ ಬಲ ತುಂಬುತ್ತವೆ.

ಆ ಘಟನೆ ನಡೆದಿದ್ದು 1975ರಲ್ಲಿ. ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಆವರಣದಲ್ಲಿ 19 ವಯೋಮಿತಿ ಆಟಗಾರರ ಕ್ರಿಕೆಟ್ ಶಿಬಿರ ನಡೆಯುತ್ತಿತ್ತು. ಕರ್ನಲ್ ಹೇಮು ಅಧಿಕಾರಿ ನೇತೃತ್ವದಲ್ಲಿ ಮಿಲಿಟರಿ ಶಿಸ್ತಿನಲ್ಲಿ ನಡೆಯುತ್ತಿದ್ದ ಆ ಶಿಬಿರದಲ್ಲಿ ಅಭ್ಯಾಸದ ನಡುವೆ ನೀರು ಕುಡಿಯುವುದಕ್ಕೂ ಅವಕಾಶ ಇರಲಿಲ್ಲ. ಬೇಸಿಗೆಯ ಬಿರುಬಿಸಿಲಿನಲ್ಲಿ ಸತತ 4 ಗಂಟೆಗಳ ಕಾಲ ವೇಗದ ಬೌಲಿಂಗ್ ಮಾಡಿ ದಣಿದಿದ್ದ 16 ವರ್ಷದ ಆ ತರುಣನಿಗೆ ಮಧ್ಯಾಹ್ನದ ಊಟಕ್ಕೆಂದು 2 ಒಣ ಚಪಾತಿ, ಸ್ವಲ್ಪ ದಾಲ್ ನೀಡಿದಾಗ ಕಣ್ಣಲ್ಲಿ ನೀರು ಬಂದಿತ್ತು. ‘ನಾನೊಬ್ಬ ವೇಗದ ಬೌಲರ್. ಊಟಕ್ಕೆ 2 ಚಪಾತಿ ಸಾಲುವುದಿಲ್ಲ. ಇನ್ನೂ ಸ್ವಲ್ಪ ಕೊಡಲು ಸಾಧ್ಯವೇ’ ಎಂದು ಆ ತರುಣ ಸಿಸಿಐನ ಕಾರ್ಯದರ್ಶಿಯಾಗಿದ್ದ ಕೇಕಿ ತಾರಾಪೋರ್ ಅವರಲ್ಲಿ ಮನವಿ ಮಾಡಿಕೊಂಡಾಗ ಇನ್ನಷ್ಟು ನಿರಾಸೆ ಕಾದಿತ್ತು. ‘ಅರೇ ಹುಡುಗ, ಭಾರತದಲ್ಲಿ ವೇಗದ ಬೌಲರ್​ಗಳೇ ಇಲ್ಲ. ವೇಗದ ಬೌಲರ್ ಆಗುವ ಬಗ್ಗೆ ನನ್ನೊಂದಿಗೆ ಭಾಷಣ ಬಿಗಿಯಬೇಡ’ ಎಂದು ಅಪಹಾಸ್ಯ ಮಾಡಿದ್ದರು.

ಆದರೆ, ತಾರಾಪೋರ್ ಹಾಸ್ಯ ಮಾಡಿದ್ದರಲ್ಲೂ ಅಂಥ ವಿಶೇಷವೇನೂ ಇರಲಿಲ್ಲ. ಏಕೆಂದರೆ, ಆ ಕಾಲವೇ ಹಾಗಿತ್ತು. ಭಾರತೀಯ ಕ್ರಿಕೆಟ್ ಎಂದರೆ, ತಾಂತ್ರಿಕ ನಿಪುಣ ಬ್ಯಾಟ್ಸ್​ಮನ್​ಗಳು ಹಾಗೂ ಮಾಂತ್ರಿಕ ಸ್ಪಿನ್ ಬೌಲರ್​ಗಳೆಂಬ ನಂಬಿಕೆ ದಟ್ಟವಾಗಿದ್ದ ಕಾಲವದು. ಕ್ರಿಕೆಟ್​ನ ದೈತ್ಯ ವೆಸ್ಟ್ ಇಂಡೀಸ್​ನ ವೇಗದ ಬೌಲರ್​ಗಳೆಂದರೆ ಜಗತ್ತಿನ ಬ್ಯಾಟ್ಸ್​ಮನ್​ಗಳು ಬೆವರುತ್ತಿದ್ದ ಕಾಲವದು. ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳ ಶಕ್ತಿಯೂ ವೇಗದ ಬೌಲರ್​ಗಳೇ ಆಗಿದ್ದರು. ಪಾಕಿಸ್ತಾನದಲ್ಲೂ ಹೊಸ ಹೊಸ ವೇಗಿಗಳು ಹೊರಹೊಮ್ಮುತ್ತಿದ್ದರು. ಆದರೆ, ಭಾರತ ಮಾತ್ರ ಸ್ಪಿನ್ನರ್​ಗಳನ್ನೇ ನೆಚ್ಚಿಕೊಂಡು ಕ್ರಿಕೆಟ್ ಆಡುತ್ತಿತ್ತು. ಬೆರಳೆಣಿಕೆಯ ‘ವೇಗಿಗಳಿದ್ದರೂ’ ಅವರ ಬೌಲಿಂಗ್ ಮಧ್ಯಮ ವೇಗವನ್ನೂ ಮೀರುತ್ತಿರಲಿಲ್ಲ. ಪ್ರಾರಂಭದಲ್ಲಿ ಒಂದಷ್ಟು ಓವರ್ ಬೌಲಿಂಗ್ ಮಾಡಿ ಚೆಂಡಿನ ಹೊಳಪು ತೆಗೆದು ಸ್ಪಿನ್ನರ್​ಗಳಿಗೆ ಅನುವು ಮಾಡಿಕೊಡುವುದಕ್ಕಷ್ಟೇ ಅವರ ಪಾತ್ರ ಸೀಮಿತವಾಗಿರುತ್ತಿತ್ತು. 1967ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ತಂಡದಲ್ಲಿ 4 ಸ್ಪಿನ್ ದಂತಕಥೆಗಳು ಸ್ಥಾನ ಪಡೆದಿದ್ದರು. ಆದರೆ, ವೇಗಿಗಳಿರಲಿಲ್ಲ. ಆ ಪಂದ್ಯದಲ್ಲಿ ಪ್ರಾರಂಭದಲ್ಲಿ 4 ಓವರ್ ಬೌಲಿಂಗ್ ಮಾಡಿ ಚೆಂಡಿನ ಹೊಳಪು ಮಾಸುವಂತೆ ಮಾಡಿದ್ದು ತಂಡದಲ್ಲಿ ವಿಕೆಟ್ಕೀಪರ್ ಆಗಿದ್ದ ಬುಧಿ ಕುಂದೆರನ್. 1960ರ ದಶಕದಲ್ಲಿ ರಮಾಕಾಂತ್ ದೇಸಾಯಿ ಅವರಂಥ ಅಪ್ಪಟ ವೇಗದ ಬೌಲರ್ ಬಂದುಹೋಗಿದ್ದರೂ, ಸ್ಪಿನ್ನರ್​ಗಳ ಸುವರ್ಣ ಯುಗದಲ್ಲಿ ಅವರೊಬ್ಬ ಅಪವಾದದಂತಿದ್ದರು. ವೇಗದ ಬೌಲರ್​ಗಳ ಸಂತತಿ ಬೆಳೆಸುವ ಆಸಕ್ತಿಯೂ ಭಾರತೀಯ ಕ್ರಿಕೆಟ್​ನ ಆಡಳಿತಗಾರರಿಗಿರಲಿಲ್ಲ. ಇಂಥ ಕಾಲಘಟ್ಟದಲ್ಲಿ ವೇಗದ ಬೌಲಿಂಗ್​ನ ಕ್ರಾಂತಿಪುರುಷನಾಗಿ ಹೊರಹೊಮ್ಮಿದವರು ಹರಿಯಾಣದ ಹರಿಕೇನ್ ಕಪಿಲ್ ದೇವ್.

ಭಾರತೀಯ ಕ್ರಿಕೆಟ್​ನ ದಂತಕಥೆಗಳಲ್ಲೊಬ್ಬರಾದ ದಿಲೀಪ್ ಸರ್ದೇಸಾಯಿ ಅವರ ಪುತ್ರ ಹಾಗೂ ವೃತ್ತಿಯಿಂದ ಹಿರಿಯ ಪತ್ರಕರ್ತರಾಗಿರುವ ರಾಜ್​ದೀಪ್ ಸರ್ದೇಸಾಯಿ ತಮ್ಮ ಇತ್ತೀಚಿನ ‘ಡೆಮಾಕ್ರೆಸೀ’ಸ್ ಇಲೆವೆನ್’ ಕ್ರಿಕೆಟ್ ಕೃತಿಯಲ್ಲಿ ಭಾರತೀಯ ಕ್ರಿಕೆಟ್​ನ ಸಾಂಪ್ರದಾಯಿಕ ಚೌಕಟ್ಟನ್ನು ಮೆಟ್ಟಿ ಕಪಿಲ್ ದೇವ್ ಎಂಬ ಕ್ರಾಂತಿಯ ಕಿಡಿ ಸಿಡಿದ ಬಗೆಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಭಾರತೀಯ ಕ್ರಿಕೆಟ್ ಎಂದರೆ, ಕೆಲವೇ ಜಾತಿಗೆ, ಸಿರಿವಂತರಿಗೆ, ಮಹಾನಗರಗಳಲ್ಲಿ ವಾಸಿಸುತ್ತಿದ್ದವರಿಗೆ, ವಿದ್ಯಾವಂತರಿಗೆ, ಇಂಗ್ಲಿಷ್ ಬಲ್ಲವರಿಗೆ ಸೀಮಿತ ಎಂದೆನಿಸಿದ್ದ ಕಾಲದಲ್ಲಿ (ಭಾರತೀಯ ಕ್ರಿಕೆಟ್​ನ ಮೊದಲ ಐವತ್ತು ವರ್ಷಗಳಲ್ಲಿ ಕೇವಲ 7 ಆಟಗಾರರು ಮಾತ್ರ ಗ್ರಾಮೀಣ ಭಾಗದಿಂದ ಹೊರಹೊಮ್ಮಿದ್ದರಂತೆ. ಅದರಲ್ಲೂ, ಮೂವರು 1930ರ ದಶಕದಲ್ಲೇ ಆಡಿದ್ದವರು) ಗ್ರಾಮೀಣ ಭಾಗದವರೂ ಈ ಆಟ ಆಡಬಲ್ಲರು ಎಂದು ನಿರೂಪಿಸಿದ ದೊಡ್ಡ ಶ್ರೇಯ ಕಪಿಲ್​ಗೆ ಸಲ್ಲಬೇಕು ಎಂದು ರಾಜ್​ದೀಪ್ ಬರೆಯುತ್ತಾರೆ. ಅವರ ಮಾತು ನಿಜ. ಓರ್ವ ಅಪ್ಪಟ ವೇಗದ ಬೌಲರ್ ಆಗಿ, ಅದ್ಭುತ ಆಲ್​ರೌಂಡರ್ ಆಗಿ, ಅಪ್ರತಿಮ ನಾಯಕನಾಗಿ, ಅದೆಲ್ಲವನ್ನೂ ಮೀರಿದ ದಿಟ್ಟತೆ, ನಿರ್ಭೀತಿ, ಆತ್ಮವಿಶ್ವಾಸವನ್ನು ದೇಶವಾಸಿಗಳಲ್ಲಿ, ಸಹ ಆಟಗಾರರಲ್ಲಿ ತುಂಬಿದ ಮಹಾನ್ ಹೋರಾಟಗಾರನಾಗಿ, ಧೈರ್ಯ, ಔದಾರ್ಯಗಳ ಪ್ರತಿರೂಪವಾಗಿ 1983ರಲ್ಲಿ ಭಾರತಕ್ಕೆ ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್​ಗೆ ಭಾರತೀಯ ಕ್ರಿಕೆಟ್ ಸದಾ ಋಣಿಯಾಗಿರಬೇಕು. ಎಷ್ಟು ಜನ ಒಪ್ಪುವರೋ ಇಲ್ಲವೋ? 1983ರಲ್ಲಿ ಭಾರತ ವಿಶ್ವಕಪ್ ಗೆಲ್ಲುವುದಕ್ಕೆ ಕಾರಣರಾದ ಏಕೈಕ ವ್ಯಕ್ತಿ-ಶಕ್ತಿ ಕಪಿಲ್ ದೇವ್ ಎಂದು ಈಗಲೂ ನಂಬುವವರಿದ್ದಾರೆ.

ಕಪಿಲ್ ದೇವ್ ತಾನು ಹರಿಯಾಣದಿಂದ ಬಂದಿದ್ದೇನೆ ಎಂದು ಹೇಳಿಕೊಂಡಾಗ, ‘ಟ್ರ್ಯಾಕ್ಟರ್ ಓಡಿಸುವುದನ್ನು ಬಿಟ್ಟು ಇಲ್ಲೇನು ಮಾಡುತ್ತಿದ್ದಿ’ ಎಂದು ಹಿರಿಯ ಕ್ರಿಕೆಟಿಗರು ಅವಮಾನಿಸಿದ ದಿನಗಳಿದ್ದವು. ಆದರೆ, ಇಂಥ ಅವಮಾನಗಳೇ ಅವರಿಗೆ ಇನ್ನಷ್ಟು ವೇಗವಾಗಿ ಬೌಲಿಂಗ್ ಮಾಡುವುದಕ್ಕೆ ಪ್ರೇರಣೆ ಒದಗಿಸುತ್ತಿತ್ತು. 1978ರಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಪಂದ್ಯ ಆಡಿದ ಕಪಿಲ್, ಭಾರತದ ಪರ ಅತ್ಯಂತ ಕಿರಿಯ ವಯಸ್ಸಿನಲ್ಲಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ಬಳಿಕವೇ ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಕೇಕಿ ತಾರಾಪೋರ್ ಅವರಿಗೆ ‘ತಮ್ಮ ವೃತ್ತಿಜೀವನಕ್ಕೆ ತಿರುವು ನೀಡಿದ್ದಕ್ಕಾಗಿ’ ಥ್ಯಾಂಕ್ಸ್ ಹೇಳಿದ್ದರು.

1983ರ ವಿಶ್ವಕಪ್ ದಿಗ್ವಿಜಯ ಭಾರತೀಯ ಕ್ರಿಕೆಟ್​ಗೆ ಪುನರ್ಜನ್ಮ ನೀಡಿತು. ಕಪಿಲ್ ಡೆವಿಲ್ಸ್ ಇಂಗ್ಲೆಂಡ್​ನಲ್ಲಿ ನಡೆದ ಆ ವಿಶ್ವಕಪ್ ಗೆಲ್ಲದೇ ಹೋಗಿದ್ದರೆ, ಇಂದಿನ ಈ ಸುವರ್ಣಯುಗ ಕಾಣುವುದು ಸಾಧ್ಯವಿರಲಿಲ್ಲ. ನಿಜ ಹೇಳಬೇಕೆಂದರೆ, 1983ರಲ್ಲಿ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ಇದ್ದಿದ್ದು ಕೇವಲ ಒಬ್ಬರಿಗೆ ಮಾತ್ರ. ಆ ವ್ಯಕ್ತಿ ಭಾರತದ ನಾಯಕರಾಗಿದ್ದ ಕಪಿಲ್ ದೇವ್.

ಇತ್ತೀಚೆಗೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರೆಲ್ಲ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಸೇರಿದ್ದಾಗ 83ರ ನೆನಪುಗಳನ್ನು ಮೆಲುಕು ಹಾಕಿದರು. 1975 ಹಾಗೂ 1979ರ ಎರಡು ವಿಶ್ವಕಪ್​ಗಳಿಂದ ಭಾರತದ ಸಾಧನೆ ಗುಜರಾತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೂರ್ವ ಆಫ್ರಿಕಾ ವಿರುದ್ಧದ ಏಕೈಕ ಗೆಲುವು ಮಾತ್ರ ಆಗಿತ್ತು. ಇಂಥ ಹಿನ್ನೆಲೆಯ ತಂಡವನ್ನು ಕಟ್ಟಿಕೊಂಡು 1983ರ ವಿಶ್ವಕಪ್​ನಲ್ಲಿ 2 ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಸೋಲಿಸುವ ಅವಕಾಶ ನಮಗಿದೆ ಎಂದು ನಾಯಕ ಕಪಿಲ್ ಸ್ಪೂರ್ತಿಯ ಮಾತುಗಳನ್ನಾಡುತ್ತಿದ್ದರೆ, ತಂಡದ ಸದಸ್ಯರೆಲ್ಲ, ಈತನಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆ ಎಂದು ಒಳಗೊಳಗೇ ನಗುತ್ತಿದ್ದರಂತೆ. ಹಾಗೆ ನೋಡಿದರೆ, 83ರ ವಿಶ್ವಕಪ್ ಟೂರ್ನಿಯನ್ನು ಬಿಸಿಸಿಐ ಇರಲಿ, ತಂಡದ ಸದಸ್ಯರೇ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾಜಿ ನಾಯಕ ಸುನೀಲ್ ಗಾವಸ್ಕರ್ ಟೂರ್ನಿ ಮುಗಿದ ಬಳಿಕ ಅಮೆರಿಕಕ್ಕೆ ಪ್ರವಾಸ ತೆರಳುವ ಯೋಜನೆ ಹಾಕಿಕೊಂಡಿದ್ದರು. ‘ಮುಂಬೈನಿಂದ ನ್ಯೂಯಾರ್ಕ್​ಗೆ ವಿಮಾನ ಟಿಕೆಟ್ ಮಾಡಿಸೋಣ, ನಡುವೆ ಇಂಗ್ಲೆಂಡ್​ನಲ್ಲಿ ವಿಶ್ವಕಪ್ ಆಡಿದರಾಯಿತು’ ಎಂದು ಗಾವಸ್ಕರ್ ತಮ್ಮೊಂದಿಗೆ ಫೋನ್​ನಲ್ಲಿ ಹೇಳಿಕೊಂಡಿದ್ದರು ಎನ್ನುವುದು ಕೃಷ್ಣಮಾಚಾರಿ ಶ್ರೀಕಾಂತ್ ಬಿಚ್ಚಿಟ್ಟ ಸತ್ಯ. ವಿಶ್ವಕಪ್​ಗೆ ಒಂದೆರಡು ತಿಂಗಳು ಮುನ್ನ ವಿವಾಹವಾಗಿದ್ದ ಶ್ರೀಕಾಂತ್, ಪತ್ನಿ ವಿದ್ಯಾ ಜೊತೆ ಶ್ರೀಲಂಕಾಕ್ಕೆ ಕಿರು ಹನಿಮೂನ್ ಪ್ರವಾಸಕ್ಕೆ ಹೋಗಿ ಬಂದಿದ್ದರು. ವಿಶ್ವಕಪ್ ಸಲುವಾಗಿ ಇಂಗ್ಲೆಂಡ್ ಹಾಗೂ ನಂತರ ಅಮೆರಿಕ ಹೀಗೆ ಮೂರು ಹನಿಮೂನ್ ಪ್ರವಾಸಗಳಿಗೆ ಅವರೂ ಪ್ಲಾ ್ಯ್

ಮಾಡಿದ್ದರಂತೆ! ಮೊಹಿಂದರ್ ಅಮರನಾಥ್, ಕೀರ್ತಿ ಆಜಾದ್ ಇವರೆಲ್ಲ ನೆನಪಿಸಿಕೊಂಡಿರುವಂತೆ ವಿಶ್ವಕಪ್ ನೆಪದಲ್ಲಿ ಖರ್ಚಿಲ್ಲದೆ ಇಂಗ್ಲೆಂಡ್ ಪ್ರವಾಸ ಮಾಡಿ ಬರುವ ಬಗ್ಗೆಯೇ ಅನೇಕರ ಯೋಚನೆಗಳಿದ್ದವು.

ಅದರರ್ಥ, ಭಾರತದ ಸಾಧ್ಯತೆಗಳ ಬಗ್ಗೆ ಯಾರೊಬ್ಬರಿಗೂ ವಿಶ್ವಾಸವಿರಲಿಲ್ಲ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದಿದ್ದು ಆಕಸ್ಮಿಕ, ಪವಾಡ ಎಂಬುದೇ ಹಲವರ ನಂಬಿಕೆಯಾಗಿತ್ತು. ಆದರೆ, ಕಪಿಲ್ ಮಾತ್ರ ಟೂರ್ನಿಯುದ್ದಕ್ಕೂ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ನಾಯಕತ್ವ ಎಲ್ಲದರಲ್ಲೂ ಮುಂಚೂಣಿಯಲ್ಲಿ ಹೋರಾಡಿದರು. ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯದಲ್ಲಿ 17ಕ್ಕೆ 5 ವಿಕೆಟ್ ಉರುಳಿದ್ದ ದಯನೀಯ ಸನ್ನಿವೇಶದಿಂದ ಮಹೋನ್ನತ 175 ರನ್ ಬಾರಿಸಿ ಭಾರತೀಯ ಕ್ರಿಕೆಟ್​ನ ಭವಿಷ್ಯ ಬದಲಾಯಿಸಿದ ಕಪಿಲ್, ಸೆಮಿಫೈನಲ್​ನಲ್ಲೂ ಮದನ್​ಲಾಲ್ ಬೌಲಿಂಗ್​ನಲ್ಲಿ ರಿಚರ್ಡ್ಸ್ ಟಾಪ್ ಎಡ್ಜ್ ಮಾಡಿದಾಗ ಮಿಡ್​ವಿಕೆಟ್​ನಿಂದ ಬೌಂಡರಿ ಅಂಚಿನವರೆಗೆ ಹಿಮ್ಮುಖವಾಗಿ ಓಡಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು. ಕಪಿಲ್​ರ ಇಂಥ ಆಟವೇ ಟೂರ್ನಿಯಲ್ಲಿ ಮೊಹಿಂದರ್ ಅಮರನಾಥ್, ಮದನ್​ಲಾಲ್, ರೋಜರ್ ಬಿನ್ನಿ, ಸಂದೀಪ್ ಪಾಟೀಲ್, ದಿಲೀಪ್ ವೆಂಗ್ಸರ್ಕಾರ್, ಯಶಪಾಲ್ ಶರ್ಮ, ಕಿರ್ವನಿ, ಕೀರ್ತಿ ಆಜಾದ್ ಸಹಿತ ಎಲ್ಲ ಸದಸ್ಯರಿಂದ ಸರ್ವಶ್ರೇಷ್ಠ ಆಟ ಹೊರಹೊಮ್ಮಲು ಪ್ರೇರಣೆಯಾಯಿತು.

ಕಪಿಲ್ ಡೆವಿಲ್ಸ್ 1983ರ ವಿಶ್ವಕಪ್ ಗೆದ್ದ ಸುವರ್ಣ ಗಳಿಗೆಗಳ ವಿಡಿಯೋಗಳು ಬಿಬಿಸಿ ಚಾನೆಲ್​ನವರ ಮಲತಾಯಿ ಧೋರಣೆಯಿಂದಾಗಿ ಲಭ್ಯವಿಲ್ಲ. ಆದರೆ, ಆ ಮಹತ್ಸಾಧನೆಯನ್ನು ಬೆಳ್ಳಿತೆರೆಯ ಮೇಲೆ ತರುವ ಪ್ರಯತ್ನವೊಂದು ಪ್ರಾರಂಭವಾಗಿದೆ. ಸಲ್ಮಾನ್ ಖಾನ್​ರ ಏಕ್ ಥಾ ಟೈಗರ್, ಭಜರಂಗಿ ಭಾಯಿಜಾನ್​ನಂಥ ಹಿಟ್ ಚಿತ್ರಗಳ ನಿರ್ದೇಶಕ ಕಬೀರ್ ಖಾನ್ 83 ಶೀರ್ಷಿಕೆಯಲ್ಲಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ರಣವೀರ್ ಸಿಂಗ್ ಬೆಳ್ಳಿತೆರೆಯಲ್ಲಿ ಕಪಿಲ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಎಷ್ಟೇ ದೊಡ್ಡ ಸಾಧಕನಾದರೂ, ವಿಧಿಯ ಸಂಚಿನ ಎದುರು ಚಿಕ್ಕವರೇ ಎಂಬ ಮಾತಿಗೆ ಕಪಿಲ್ ಸಹ ಉದಾಹರಣೆ. ವಿಸ್ಡನ್​ನಿಂದ ಶತಮಾನದ ಶ್ರೇಷ್ಠ ಭಾರತೀಯ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದ ಕಪಿಲ್, ಒಂದು ಕಾಲದ ಜೊತೆ ಆಟಗಾರ ಮನೋಜ್ ಪ್ರಭಾಕರ್ ಅವರ ಅವಿವೇಕದಿಂದಾಗಿ ಮ್ಯಾಚ್​ಫಿಕ್ಸಿಂಗ್ ಆರೋಪಕ್ಕೆ ಸಿಲುಕಬೇಕಾಯಿತು. ಮುಂದೆ ಅವರು ನಿದೋಷಿ ಎಂದು ಸಾಬೀತಾದರೂ, ಭಾರತೀಯ ಕ್ರಿಕೆಟ್​ನ ಇವತ್ತಿನ ಸ್ಥಿತಿಗೆ ಕಾರಣರಾದ ವ್ಯಕ್ತಿ ನರಕಯಾತನೆ ಅನುಭವಿಸಿದ್ದನ್ನು ಸರಿಪಡಿಸುವುದು ಸಾಧ್ಯವಿಲ್ಲ. ಅಪಮಾನವಾದರೆ ಒಳ್ಳೇದು ಎಂಬ ದಾಸವಾಣಿಯ ಸಮಾಧಾನ ಹೇಳಬಹುದಷ್ಟೇ…

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top