Tuesday, 11th December 2018  

Vijayavani

Breaking News

ಭಾರತದ ಪ್ರಸಿದ್ಧಿ-ಪ್ರತಿಷ್ಠೆ ಹೆಚ್ಚಳಕ್ಕೆ ಮುನ್ನುಡಿ

Thursday, 23.11.2017, 3:05 AM       No Comments

ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) 15 ಸದಸ್ಯರ ನ್ಯಾಯಪೀಠದಲ್ಲಿ ಖಾಲಿಯಿದ್ದ 5 ನ್ಯಾಯಮೂರ್ತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತದ ದಲ್ವೀರ್ ಭಂಡಾರಿ ಜಯಭೇರಿ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಬ್ರಿಟಿಷರ ಪಾರಮ್ಯಕ್ಕೆ ಅಂತ್ಯಹಾಡುವಲ್ಲಿ ಈ ವಿಜಯ ಮುನ್ನುಡಿಯಾಗಿರುವುದರ ಜತೆಗೆ, ಭಾರತದ ಪ್ರಸಿದ್ಧಿ-ಪ್ರತಿಷ್ಠೆ ವಿಶ್ವವ್ಯಾಪಕಗೊಳ್ಳುವುದಕ್ಕಿರುವ ಸೂಚನೆಯೂ ಆಗಿದೆ ಎಂಬುದು ದಿಟ.

 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಾಮುಖ್ಯ ಗಿಟ್ಟಿಸಿಕೊಳ್ಳುವುದಕ್ಕೆ ಅಥವಾ ಪ್ರಭಾವಿ ಎನಿಸಿಕೊಳ್ಳುವುದಕ್ಕೆ ಭಾರತದ ಯತ್ನಕ್ಕೆ ಅದರದ್ದೇ ಆದ ಮಹತ್ವವಿದೆ; ಕುಲಭೂಷಣ್ ಜಾಧವ್​ಗೆ ವಿಧಿಸಲಾಗಿರುವ ಕಾನೂನುಬಾಹಿರ ಮರಣದಂಡನೆ ಪ್ರಕರಣದ ಕುರಿತಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಹಗ್ಗಜಗ್ಗಾಟದಿಂದಾಗಿ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಪರಿಣಾಮಕಾರಿ ಪ್ರಾತಿನಿಧ್ಯವನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಇದು ಅನಿವಾರ್ಯವಾಗಿತ್ತು. ಐಸಿಜೆ 15 ನ್ಯಾಯಾಧೀಶರನ್ನು ಒಳಗೊಂಡಿದ್ದು, ಅವರಲ್ಲಿ ಪ್ರತಿಯೊಬ್ಬರೂ 9 ವರ್ಷ ಅವಧಿಗೆ ಸೇವೆ ಸಲ್ಲಿಸುತ್ತಾರೆ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಹಾಗೂ ಭದ್ರತಾ ಮಂಡಳಿಯ ಒಮ್ಮತಾಭಿಪ್ರಾಯ/ಬಹುಮತಾಭಿಪ್ರಾಯದ ಆಧಾರದ ಮೇಲೆ ಅವರನ್ನು ನೇಮಿಸಲಾಗುತ್ತದೆ. ಇಲ್ಲಿ ಒಂದೇ ದೇಶದ ಇಬ್ಬರು ರಾಷ್ಟ್ರೀಯರು ನ್ಯಾಯಾಧೀಶರಾಗುವಂತಿಲ್ಲ. ಭಾರತದ ಪ್ರಖ್ಯಾತ ನ್ಯಾಯಶಾಸ್ತ್ರಜ್ಞ, ಸವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ. ದಲ್ವೀರ್ ಭಂಡಾರಿ ಚುನಾಯಿತರಾಗಿ 2012ರ ಏಪ್ರಿಲ್ 27ರಿಂದ ಐಸಿಜೆಯ ಓರ್ವ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದು, ಅವರ ಅಧಿಕಾರಾವಧಿ 2018ರಲ್ಲಿ ಕೊನೆಯಾಗಲಿದೆ.

ನ್ಯಾ. ದಲ್ವೀರ್ ಭಂಡಾರಿ ಜತೆಗೆ, ಕ್ರಿಸ್ಟೋಫರ್ ಗ್ರೀನ್​ವುಡ್ (ಬ್ರಿಟನ್), ರೋನಿ ಅಬ್ರಹಾಂ (ಫ್ರಾನ್ಸ್), ಅಬ್ದುಲ್​ಕಾವಿ ಅಹ್ಮದ್ ಯೂಸುಫ್ (ಸೊಮಾಲಿಯಾ) ಹಾಗೂ ಆಂಟೋನಿಯೊ ಅಗಸ್ಟೊ ಕ್ಯಾನ್​ಕೆಡೊ ಟ್ರಿನ್​ಡೇಡ್ (ಬ್ರೆಜಿಲ್) ಇವರುಗಳ ಅಧಿಕಾರಾವಧಿಗಳೂ 2018ರಲ್ಲಿ ಅಂತ್ಯವಾಗಲಿವೆ. ಹೀಗಾಗಿ, ಐಸಿಜೆಯಲ್ಲಿನ 5 ಸ್ಥಾನಗಳಿಗಾಗಿದ್ದ ಚುನಾವಣೆಗಳು ಮತ್ತು ಮರುಚುನಾವಣೆಗಳು ನಡೆದವು. ಆರಂಭಿಕ ಹಂತದಲ್ಲಿ ಸ್ಪಷ್ಟವಾಗಿ ತೋರಿದಂತೆ, ಫ್ರಾನ್ಸ್, ಸೊಮಾಲಿಯಾ ಮತ್ತು ಬ್ರೆಜಿಲ್​ನ ಅಭ್ಯರ್ಥಿಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯ ಬೆಂಬಲವನ್ನು ಗಿಟ್ಟಿಸಿಕೊಂಡಿದ್ದರು. ಲೆಬನಾನ್​ನ ನವಾಫ್ ಸಲಾಂ ಎಂಬ ಓರ್ವ ಹೊಸ ಸ್ಪರ್ಧಾಳು ಕೂಡ ಈ ಎರಡು ಅಂಗಗಳ ಬೆಂಬಲವನ್ನು ಗಳಿಸಿದ್ದರಿಂದಾಗಿ, ಸುಲಭವಾಗಿ ಸಿಕ್ಕುವಂಥ ಒಂದೇ ಒಂದು ಸ್ಥಾನ ಹಾಗೂ ಇಬ್ಬರು ಸ್ಪರ್ಧಿಗಳು (ಭಾರತದ ಭಂಡಾರಿ ಮತ್ತು ಬ್ರಿಟನ್​ನ ಕ್ರಿಸ್ಟೋಫರ್) ಉಳಿದುಕೊಂಡಿದ್ದರು. ಈ ಇಬ್ಬರೂ ಮರುಚುನಾವಣೆಗಾಗಿ ತಂತಮ್ಮ ದೇಶಗಳಿಂದ ನಾಮನಿರ್ದೇಶಿತರಾಗಿದ್ದವರು.

ಒಂದೆಡೆ, ನ್ಯಾ. ಭಂಡಾರಿಯವರು ಸಾಮಾನ್ಯ ಸಭೆಯಲ್ಲಿ ಏಕಪ್ರಕಾರವಾಗಿ ಬಹುಮತದ ಬೆಂಬಲವನ್ನು ಪಡೆಯುತ್ತಿದ್ದರೆ, ಮತ್ತೊಂದೆಡೆ ಬ್ರಿಟನ್​ನ ಗ್ರೀನ್​ವುಡ್ ಭದ್ರತಾ ಮಂಡಳಿಯಲ್ಲಿ ಬೆಂಬಲವನ್ನು ಗಳಿಸುತ್ತಿದ್ದರು. ಈ ಮಹತ್ವಪೂರ್ಣ ಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟನ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲುಭಾರತ ಪ್ರಬಲ ಸ್ಪರ್ಧೆಯನ್ನೇ ಒಡ್ಡಿತ್ತು; ಹೀಗಾಗಿ ಐಸಿಜೆ ಇತಿಹಾಸದಲ್ಲೇ ಈ ಸ್ಪರ್ಧೆ ಬಿರುಸಿನ-ತುರುಸಿನ ವಾತಾವರಣವನ್ನು ಹುಟ್ಟುಹಾಕಿತ್ತು.

ವಾಸ್ತವವಾಗಿ, ಮತದಾನದ ಉಪಾಂತ್ಯ ಸುತ್ತುಗಳ ಪೈಕಿ ಒಂದರಲ್ಲಿ, ನ್ಯಾ. ಭಂಡಾರಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಬಹುತೇಕ ಮೂರನೇ ಎರಡರಷ್ಟು ಭರ್ಜರಿ ಬಹುಮತ (ಅಥವಾ 121 ಸದಸ್ಯ ರಾಷ್ಟ್ರಗಳ ಬೆಂಬಲವನ್ನು) ದಕ್ಕಿಸಿಕೊಂಡಿದ್ದರು. ಅಷ್ಟೇ ಅಲ್ಲ, ಎದುರಾಳಿ ಕ್ರಿಸ್ಟೋಫರ್ ಗ್ರೀನ್​ವುಡ್​ಗೆ ಹೋಲಿಸಿದಾಗ, ಅನೇಕ ಕಾಮನ್​ವೆಲ್ತ್ ರಾಷ್ಟ್ರಗಳ ಬೆಂಬಲವೂ ಸೇರಿದಂತೆ ಸಾಮಾನ್ಯ ಸಭೆಯ ಒಟ್ಟು ಸದಸ್ಯತ್ವದ ಅರ್ಧಕ್ಕಿಂತ ಹೆಚ್ಚು ಬೆಂಬಲವನ್ನು (ಅಂದರೆ ನಿಚ್ಚಳ ಬಹುಮತವನ್ನು) ಪಡೆದಿದ್ದರು. ಆದರೆ ಭಾರತದ ದುರದೃಷ್ಟ ಮತ್ತು ನ್ಯಾ. ಭಂಡಾರಿ ವಿರುದ್ಧ ನಿರಂತರವಾಗಿ ಮತ ಚಲಾಯಿಸಿದ ಭದ್ರತಾ ಮಂಡಳಿಯಲ್ಲಿನ ಭಾರತದ ಅನುಪಸ್ಥಿತಿ, ಈ ಯಶಸ್ಸಿಗೆ ತಡೆಯೊಡ್ಡುವ ಮುಳ್ಳಾಗಿ ಪರಿಣಮಿಸಿದವು.

ಬ್ರಿಟನ್​ನಿಂದ ಪ್ರಸ್ತಾವಿಸಲ್ಪಟ್ಟಂತೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯ ತಲಾ ಮೂರು ಸದಸ್ಯರಾಷ್ಟ್ರಗಳನ್ನಷ್ಟೇ ಒಳಗೊಂಡ ಜಂಟಿ ಸಮಾಲೋಚನೆ/ಸಮಾವೇಶ ಇಂಥ ಬಿಕ್ಕಟ್ಟಿನ ಪರಿಸ್ಥಿತಿಗಿದ್ದ ಒಂದು ಪರಿಹಾರೋಪಾಯವಾಗಿತ್ತು. ವಿಶ್ವಸಂಸ್ಥೆ ಮತ್ತು ಐಸಿಜೆಯ ಆಡಳಿತ ನಿರ್ವಹಣಾ ಶಾಸನಗಳು ಇಂಥದೊಂದು ಜಂಟಿ ಸಮಾವೇಶಕ್ಕೆ ಅವಕಾಶ ಕಲ್ಪಿಸುತ್ತವೆಯಾದರೂ, ಇಂಥ ಸಮಾವೇಶದ ಸಂಭಾವ್ಯ ಸದಸ್ಯರ ಆಯ್ಕೆವಿಧಾನದ ಕುರಿತು ಅವು ಸೊಲ್ಲೆತ್ತುವುದಿಲ್ಲ. ಬ್ರಿಟನ್ ಸೇರಿದಂತೆ, ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗಿರುವ ಅಧಿಕಾರಗಳು ಮತ್ತು ಸ್ಥಾನಮಾನ, ಜಂಟಿ ಸಮಾವೇಶವೊಂದರ ಕಾರ್ಯವಿಧಾನದ ಅಸ್ಪಷ್ಟತೆಯ ಜತೆಗೆ ಇಂಥದೊಂದು ಕ್ರಮವು ಬ್ರಿಟನ್ ಅಭ್ಯರ್ಥಿಯ ಜಯಭೇರಿಗೆ ಅನುಕೂಲ ಒದಗಿಸಿಬಿಡುತ್ತಿತ್ತು ಹಾಗೂ ಭಾರತದ ಅಭ್ಯರ್ಥಿಯ ಸೋಲು ಖಾತ್ರಿಯಾಗುತ್ತಿತ್ತು. ಜಂಟಿ ಸಮಾವೇಶದ ಕಾರ್ಯವಿಧಾನಗಳಲ್ಲಿ ಇಂಥ ತೊಡಕುಗಳು ನಿಜಕ್ಕೂ ಇರುವುದರಿಂದಾಗಿಯೇ, ವಿಶ್ವಸಂಸ್ಥೆಗೆ ಸಂಬಂಧಿಸಿದ ಹಿಂದಿನ ಕಾನೂನು ಸಲಹೆಗಾರರು ಜಂಟಿ ಸಮಾವೇಶವೊಂದರ ವಿರುದ್ಧವಾಗಿದ್ದರು ಮತ್ತು ಮತದಾನದ ಮುಂದಿನ ಸುತ್ತುಗಳ ಪರವಾಗಿದ್ದರು. ಹೀಗಾಗೇ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯವನ್ನು ಅಲಕ್ಷಿಸುವ/ಮೊಟಕಾಗಿಸುವ ಏಕಮಾತ್ರ ಗುರಿಯಿಟ್ಟುಕೊಂಡಿದ್ದ ಈ ಪ್ರಜಾಪ್ರಭುತ್ವ-ವಿರೋಧಿ ಪ್ರಕ್ರಿಯೆಯ ವಿರುದ್ಧ ಭಾರತ ದನಿಯೆತ್ತಿತು.

ಈ ಪ್ರಸ್ತಾವನೆಯು ‘ಬ್ರಿಟಿಷ್ ರಾಜ್’ನ ಪಿತೂರಿ ಕಾರ್ಯತಂತ್ರವನ್ನು ನೆನಪಿಗೆ ತರುತ್ತದೆ; ಚಾಲ್ತಿಯಲ್ಲಿರುವ ನ್ಯಾಯಸಮ್ಮತ ಕಾರ್ಯವಿಧಾನಗಳನ್ನು ಬ್ರಿಟಿಷರ ಹಿತಾಸಕ್ತಿಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಒಳಗೊಳಗೇ ಹಾಳುಮಾಡುವುದು ಈ ಕಾರ್ಯತಂತ್ರದ ಭಾಗವಾಗಿತ್ತು. ಐತಿಹಾಸಿಕವಾಗಿ ಹೇಳುವುದಾದರೆ, ತಮ್ಮ ಅಸ್ತಿತ್ವವನ್ನು ಗಟ್ಟಿಮಾಡಿಕೊಳ್ಳುವುದಕ್ಕಾಗಿ ಭಾರತೀಯ ಉಪಖಂಡದಲ್ಲಿ ಕಾಣಬರುತ್ತಿದ್ದ ಸಾಮಾಜಿಕ ಮತ್ತು ರಾಜಕೀಯ ಒಡಕುಗಳ ಫಾಯಿದೆ ಪಡೆದುಕೊಳ್ಳುವಲ್ಲಿ ಬ್ರಿಟಿಷರು ಯಶಸ್ವಿಯಾಗಿದ್ದರು. ಆದರೆ, ನಿರಂತರ ಅಪ್ಪಳಿಸಿದ ಬರಗಾಲ ಪರಂಪರೆಗೆ ಸಿಲುಕಿದ್ದ ಹಾಗೂ ಬ್ರಿಟಿಷ್ ಪ್ರಭುತ್ವದಡಿಯಲ್ಲಿ ಸಿಲುಕಿ ಹಕ್ಕುಗಳಿಂದ ವಂಚಿತರಾಗುವಂಥ ಕಾಲಘಟ್ಟದ ಬಂದಿಯಾಗಿದ್ದ ಭಾರತವೀಗ, ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಗಟ್ಟಿಯಾಗಿ ನೆಲೆನಿಂತಿದೆ, ಸದೃಢ ಅಂತಾರಾಷ್ಟ್ರೀಯ ಉಪಸ್ಥಿತಿಯನ್ನೂ ದಕ್ಕಿಸಿಕೊಂಡಿದೆ. ಓರ್ವ ವ್ಯಕ್ತಿಯ ಆಯ್ಕೆಯ ವಿಷಯವಾಗಿ ಶುರುವಾದ್ದು, ‘ವಿಶ್ವ ನ್ಯಾಯಾಲಯ’ವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ನೈಜಸ್ವರೂಪದ ಒಂದು ಚರ್ಚಾವಿಷಯವಾಗಿ ಈಗ ಬೃಹದಾಕಾರ ತಳೆದಿದೆ.

ನಿಕಟಸ್ಪರ್ಧೆಯಿದ್ದ ಈ ಚುನಾವಣೆಯಲ್ಲಿ ಭಾರತಕ್ಕೆ ನಿರ್ಣಾಯಕ ಜಯ ಸಿಕ್ಕಿದೆ. ಪ್ರಸ್ತಾವಿತ ಕೊನೆಯ ಸುತ್ತಿನ ಮತದಾನಕ್ಕೂ ಸ್ವಲ್ಪ ಮುಂಚೆ, ಬ್ರಿಟನ್ ತನ್ನ ಉಮೇದುವಾರಿಕೆಯನ್ನೂ, ಜಂಟಿ ಸಮಾವೇಶ ಸಂಬಂಧಿತ ತನ್ನ ಪ್ರಸ್ತಾವನೆಯನ್ನೂ ಹಿಂಪಡೆಯಿತು. ಬ್ರಿಟನ್​ನ ‘ಪುನರಾವರ್ತಿತ ಸೋಲನ್ನು’, ಅದರಲ್ಲೂ ಭಾರತದಿಂದಾದ ಸೋಲನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮ್ಮುಖದಲ್ಲಿ ಒಪ್ಪಿಕೊಂಡ ಅದರ ರಾಯಭಾರಿ, ‘ಚುನಾವಣೆಯ ಮುಂದಿನ ಸುತ್ತುಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಸಾಮಾನ್ಯ ಸಭೆಯ ಅಮೂಲ್ಯ ಸಮಯವನ್ನು ತೆಗೆದುಕೊಳ್ಳಲೆಂದು ಮುಂದುವರಿಯುವುದು ತಪು್ಪನಡೆಯಾಗುತ್ತದೆ ಎಂದು ಬ್ರಿಟನ್ ತೀರ್ವನಿಸಿದೆ’ ಎಂದು ಹೇಳಿದರೆಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಪ್ರಸಿದ್ಧಿ-ಪ್ರತಿಷ್ಠೆಯ ದೃಷ್ಟಿಕೋನ ಮತ್ತು ಜಾಗತಿಕ ಪ್ರಜಾಪ್ರಭುತ್ವದ ದೃಷ್ಟಿಕೋನದಿಂದ ನೋಡಿದಾಗ, ಇದು ನಿಜಕ್ಕೂ ಯಥೋಚಿತ ನಡೆಯೇ ಆಗಿತ್ತು; ಅದರಲ್ಲೂ ವಿಶೇಷವಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಸೊಕ್ಕುಮುರಿಯುವಂಥ’ ಹೊಡೆತಗಳನ್ನು ಭಾರತ ನೀಡಿದ ನಂತರ ಇಂಥದೊಂದು ಜ್ಞಾನೋದಯ ಆಗಲೇಬೇಕಿತ್ತು. ಅಂತಾರಾಷ್ಟ್ರೀಯ ನ್ಯಾಯಾಲಯದ 71 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಸಿಜೆ ನ್ಯಾಯಪೀಠದಲ್ಲಿ ಬ್ರಿಟನ್​ನ ನ್ಯಾಯಾಧೀಶರೊಬ್ಬರ ಅನುಪಸ್ಥಿತಿ ತಲೆದೋರಲಿದೆ.

ಇನ್ನು ಮುಂದೆ ಅಂತಾರಾಷ್ಟ್ರೀಯ ಮಾತುಕತೆಗಳಲ್ಲಿ ಬ್ರಿಟಿಷರ ಪ್ರಾಬಲ್ಯ ಇರುವುದಿಲ್ಲ, ಅಥವಾ ಅವು ಬ್ರಿಟಿಷರ ಚತುರೋಪಾಯ/ಕಾರ್ಯತಂತ್ರಗಳ ಪ್ರಭಾವಕ್ಕೆ ಸಿಲುಕುವುದಿಲ್ಲ. ಬದಲಿಗೆ ಅಲ್ಲಿ ಭಾರತದ ಸಮಗ್ರತಾ ದೃಷ್ಟಿಯ ಬೆಂಬಲದ ಮಾರ್ಗದರ್ಶನ ಕಾಣಬರಲಿದೆ. ಇದು ಹೊಮ್ಮುವುದು ಅಂತಾರಾಷ್ಟ್ರೀಯ ಸಾಮರಸ್ಯ ಅಥವಾ ಬಹುಮತಾಭಿಪ್ರಾಯ ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿರುವ ಅಸ್ತಿತ್ವವೊಂದರಿಂದ. ಪ್ರಜಾಪ್ರಭುತ್ವ-ವಿರೋಧಿ ಪ್ರಕ್ರಿಯೆಯ ಪ್ರತಿಬಿಂಬವೇ ಆಗಿರುವ ಸಂಕುಚಿತ ಮನೋವೃತ್ತಿಯ ಹಿತಾಸಕ್ತಿಯೊಂದು, ಒಂದು ‘ವಿಶ್ವ ನ್ಯಾಯಾಲಯ’ವಾಗಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಸ್ವರೂಪವನ್ನು ಒಳಗೊಳಗೇ ಹಾಳುಗೆಡಹುವಂಥ ಪರಿಸ್ಥಿತಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ. ಅದರ ಬದಲಿಗೆ, ‘ವಿಶ್ವ ಸಮುದಾಯ’ದ ಒಂದು ಪ್ರಜಾಸತ್ತಾತ್ಮಕ ಸಂಕಲ್ಪಶಕ್ತಿಯ ನೆರವಿನಿಂದಾಗಿ ಅದು ಮತ್ತಷ್ಟು ಬಲಗೊಳ್ಳಲಿದೆ. ಬ್ರಿಟಿಷ್ ಸಾಮ್ರಾಜ್ಯದ ಮತ್ತು ಅವರ ಊಳಿಗಮಾನ್ಯ ವಸಾಹತುಶಾಹಿ ಪರಿಪಾಠಗಳ ಸೂರ್ಯ ಅಸ್ತಂಗತನಾಗಿ ಯಾವುದೋ ಕಾಲವಾಗಿದೆ. ಆದರೆ ನಾವು, ಗಾಢಾಂಧಕಾರದ ಸಮಯದಲ್ಲೂ, ಪ್ರಜಾಸತ್ತಾತ್ಮಕ ಕಾರ್ಯವಿಧಾನಗಳ ಮೂಲಕ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವ ವಿಷಯದಲ್ಲಿ ಜಾಗರೂಕರಾಗಿದ್ದೇವೆ. ಕತ್ತಲೆಯು ಕತ್ತಲೆಯನ್ನು ಹೊಡೆದೋಡಿಸಲಾರದು, ಬೆಳಕಿಂದ ಮಾತ್ರವೇ ಅದು ಸಾಧ್ಯ. ಈ ಪ್ರಜ್ಞೆ, ಪರಿಪಾಠ ನಿರಂತರವಾಗಿರಲಿ.

ಜೈ ಹಿಂದ್!

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top