ಕಲಬುರಗಿ: ಪ್ರಪಂಚದಲ್ಲಿ ಆಗುತ್ತಿರುವ ಅನೇಕ ತಲ್ಲಣ, ಅಶಾಂತಿ, ಹಿಂಸೆ ಇತ್ಯಾದಿಗಳ ಉಪಶಮನಕ್ಕೆ ಭಾರತೀಯ ಜ್ನಾನ ಪರಂಪರೆಯ ಆಳ ಅಧ್ಯಯನ, ಅನುಷ್ಠಾನದ ಅಗತ್ಯ ಇದೆ. ಭಾರತ ಮಾತ್ರ ಜಗತ್ತಿಗೆ ಒಂದು ಮಾದರಿ ಜೀವನಧರ್ಮವನ್ನು ನೀಡುವ ಶಕ್ತಿ ಹೊಂದಿದೆ ಎಂದು ಚಿಂತಕ ಸಂಜೀವ ಸಿರನೂರಕರ್ ಹೇಳಿದರು.
ನಗರದ ಸೇಡಂ ರಸ್ತೆಯಲ್ಲಿನ ಸ್ವಾಭಿಮಾನ ಸ್ವದೇಶಿ ಕೇಂದ್ರದಲ್ಲಿ ಸ್ವದೇಶಿ ಚಿಂತನ ವೇದಿಕೆಯಿಂದ ಭಾನುವಾರ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿ, ಸಹಸ್ರಾರು ವರ್ಷದಿಂದ ಭಾರತದ ಋಷಿ ಪರಂಪರೆ ಹಾಗೂ ದಾರ್ಶನಿಕರು ಕಾಪಾಡಿಕೊಂಡು ಬಂದ ಅದ್ಭುತ ಜ್ನಾನರಾಶಿಯನ್ನು ರಕ್ಷಿಸುವ ಹಾಗೂ ಮುಂದಿನ ಪೀಳಿಗೆಗೆ ಧಾರೆ ಎರೆಯುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರದ್ದು ಎಂದರು.
ಭಾರತದಲ್ಲಿ ಪ್ರತಿ ಕ್ಷೇತ್ರದಲ್ಲೂ ಭಾರತೀಯತೆಯ, ಭಾರತೀಯ ಶಾಸ್ತ್ರದ ದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ಯಾವುದೋ ವಿದೇಶೀ ಮಾದರಿಯನ್ನು ಎರವಲು ತಂದು ನಮ್ಮ ದೇಶದಲ್ಲಿ ಹರಡಲಾಗಿದೆ. ನಮ್ಮ ದೇಶದ ಜನರಿಗೆ, ವಿಶೇಷವಾಗಿ ಯುವಕರಿಗೆ ಕೀಳರಿಮೆ ಕಾಡುತ್ತಿದೆ ಎಂದರು.
ನಮ್ಮತನದ ಅರಿವು, ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ದರ್ಶನ, ಜೀವನ ಪದ್ಧತಿಗಳ ಅರಿವಿಲ್ಲದೇ ವಿಸ್ಮೃತಿಯಲ್ಲಿ ಬದುಕುತ್ತಿದ್ದಾರೆ. ಈ ಸಮಸ್ಯೆಗೆ ಇರುವ ಏಕೈಕ ಪರಿಹಾರ ಭಾರತೀಯ ಜ್ನಾನ ಪರಂಪರೆಗಳತ್ತ ಮರಳುವುದು. ನಮ್ಮ ನಡೆ, ನುಡಿ, ಕೆಲಸ, ಕಾರ್ಯಗಳಲ್ಲಿ ನಮ್ಮತನದ ಅರಿವು ಜಾಗೃತವಾಗಬೇಕು. ಆಳ ಅಧ್ಯಯನ, ಸಂಶೋಧನೆಯ ಪ್ರವೃತ್ತಿ ಹೆಚ್ಚಬೇಕು. ಭಾರತಕ್ಕೆ ಉಜ್ವಲ ಭವಿಷ್ಯವಿದೆ ಹಾಗೂ ನಾವೆಲ್ಲರೂ ಭವಿಷ್ಯದ ಭಾಗವಾಗುವ ಸೌಭಾಗ್ಯ ಸನ್ನಿಹಿತವಾಗಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ನಿರ್ದೇಶಕ ವಿ.ಡಿ.ಮೈತ್ರಿ ಮಾತನಾಡಿ, ಶಿಕ್ಷಣ, ಸಂಶೋಧನೆಗಳೆಲ್ಲವೂ ನಮ್ಮ ಸ್ಥಳೀಯ ಬೇಡಿಕೆ, ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ನಮ್ಮ ಭಾಗದ ತೊಗರಿ, ಶಹಾಬಾದ್ ಕಲ್ಲು ಸೇರಿ ಹಲವು ವಸ್ತುಗಳನ್ನು ಬಹುವಿಧ ಆಯಾಮದಲ್ಲಿ ರೂಪಿಸಬೇಕು. ಸ್ಥಳೀಯವಾಗಿ ಅಪಾರ ಜ್ಞಾನ ಬಂಡಾರ, ಸಂಶೋಧನೆಗೆ ಅವಕಾಶಗಳು ಇವೆ ಎಂದರು.
ಮರತೂರಿನ ವಿಜ್ಞಾನೇಶ್ವರರ ಮಿತಾಕ್ಷರ ಕಾನೂನು ಅರಿಯುವಲ್ಲಿ ನಾವು ವಿಫಲರಾಗಿದ್ದೇವೆ. ಎಲ್ಲವನ್ನು ಪಾಶ್ಚಾತ್ಯ ರಾಷ್ಟಗಳಿಂದ ಎರವಲು ಪಡೆದಿರುವುದು ಎನ್ನುತ್ತಾರೆ. ನಮ್ಮ ಪರಂಪರೆ, ಪುಸ್ತಕಗಳಲ್ಲಿ ಜ್ಞಾನದ ನಿಧಿಯೇ ಇದೆ. ವಿದೇಶಿ ಸಂಸ್ಕೃತಿ, ನೀತಿ, ಬೋಧನೆಗಳನ್ನು ಬಿಟ್ಟು ನಮ್ಮ ನೆಲ ಮೂಲಕ ಅಂಶಗಳನ್ನು ಇಟ್ಟುಕೊಂಡು ಜೀವನ ಮುಂದುವರಿಸಬೇಕು ಎಂದು ಹೇಳಿದರು.