More

  ಭಾರತದ ಚರಿತ್ರೆ ಓದಿಗೆ ಬೇಕು ಪ್ರೀತಿ-ಪ್ರಾಚಾರ್ಯ ಡಾ.ಬಿ.ಪಿ.ಕುಮಾರ್ ಹೇಳಿಕೆ

  ದಾವಣಗೆರೆ: ಭಾರತೀಯ ಇತಿಹಾಸವನ್ನು ವಿದೇಶಿಗರು ಅರ್ಥ ಮಾಡಿಕೊಂಡಿದ್ದಾರೆ. ಭಾರತದ ಅಗಾಧ ಚರಿತ್ರೆಯನ್ನು ಓದಲು ನಮ್ಮಲ್ಲಿ ಪ್ರೀತಿ ಬೇಕು ಎಂದು ಎವಿಕೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಪಿ.ಕುಮಾರ್ ಹೇಳಿದರು.
  ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್ ಹಾಗೂ ಜಿಲ್ಲಾ ಕಸಾಪ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ, ‘ಕರುನಾಡ ಅರಸೊತ್ತಿಗೆಗಳು’ ಶೀರ್ಷಿಕೆಯ ಇತಿಹಾಸ ಮಾಹಿತಿ ಪಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
  ದ್ವಿತೀಯ ಮಹಾಯುದ್ಧ ಕಾಲದಲ್ಲಿ ಭಾರತದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರಗಳನ್ನು ಇರಿಸಿಕೊಂಡೇ ವಿದೇಶಿಗರೊಬ್ಬರು ಪಿಎಚ್‌ಡಿ ಮಾಡಿದ್ದಾರೆ. ಆಗ ಕೊಲೆಗಳು ಏಕಾದವು. ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ. ನಮ್ಮ ಚರಿತ್ರೆ ಬಗ್ಗೆ ನಮ್ಮಲ್ಲಿ ಪ್ರೀತಿ- ವಿಶ್ವಾಸ, ಆಳವಾದ ಅಧ್ಯಯನ ಬೇಕು ಎಂದರು.
  ಕೆೆಎಎಸ್, ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಕೇಳಲಾಗುವ ಸಣ್ಣ ಸಣ್ಣ ರಾಜ ವಂಶಗಳ ಕುರಿತಾದ ಪ್ರಶ್ನೆಗಳ ಬಗ್ಗೆ ಸಾಮಾನ್ಯ ಇತಿಹಾಸ ಪಠ್ಯಗಳಲ್ಲಿ ಮಾಹಿತಿ ಇರುವುದಿಲ್ಲ. ಸ್ಥಳಾವಕಾಶ ಕೊರತೆ, ಪುಟಗಳ ಹೆಚ್ಚಳದ ಭೀತಿ ಇನ್ನಿತರೆ ಕಾರಣಾಂತರಗಳಿಂದಾಗಿ ಅವು ಪ್ರಕಟವಾಗಿರುವುದಿಲ್ಲ. ಆಳ ಅಧ್ಯಯನ, ಸಂಶೋಧನೆಗಳಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಸಿಗದು ಎಂದು ಹೇಳಿದರು.
  ಇತಿಹಾಸ ವಿಷಯದಲ್ಲಿ ಇಸವಿಗಳಿದ್ದು ನೆನಪಿನಲ್ಲಿ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಚರಿತ್ರೆ ಓದಲು ಅಸಡ್ಡೆ ಮಾಡುತ್ತಿದ್ದಾರೆ. ಎಂಬಿಬಿಎಸ್, ಎಂಡಿ ಪದವಿ ಓದಿದವರೂ ಕೂಡ ಇತಿಹಾಸ ಓದಿ ಕೆಎಎಸ್, ಐಎಎಸ್ ಮಾಡಿದ ನಿದರ್ಶನಗಳಿವೆ. ನೀರಿದ್ದಲ್ಲಿ ನಾಗರಿಕತೆ ಬೆಳೆದಿವೆ. ಹೀಗಾಗಿ ನಾವಿದ್ದಲ್ಲೇ ನೀರು ಬರಬೇಕೆಂಬ ಮನೋಧೋರಣೆ ಬೇಡ. ಅಧ್ಯಯನದ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
  ಬಸವರಾಜ ಯಳಮಲ್ಲಿ ಮೂಲತಃ ವ್ಯಾಪಾರಿಗಳಾದರೂ ಇತಿಹಾಸ ಕ್ಷೇತ್ರಕ್ಕೆ ಉತ್ತಮವಾದ ಕೊಡುಗೆ ನೀಡಿದ್ದಾರೆ. ಇತಿಹಾಸದ ಎರಡು ಕಣ್ಣುಗಳಾದ ಕಾಲ ಮತ್ತು ಸ್ಥಳದ ವಿವರವನ್ನು ಪಟದ ಮೂಲಕ ನೀಡಿದ್ದಾರೆ. ಕರ್ನಾಟಕದ ಹಿಂದಿನ ಅರಸರ ಕುರಿತಾದ ಸ್ಪಷ್ಟತೆ ಈ ಪಟಗಳಿಂದ ಸಿಗಲಿದೆ ಎಂದು ಹೇಳಿದರು.
  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಕ್ರಿಸ್ತಪೂರ್ವ 273ನೇ ಇಸವಿಯಿಂದ ಸ್ವಾತಂತ್ರೃದ ಹಂತದವರೆಗೆ ರಾಜ್ಯವನ್ನಾಳಿದ 130 ರಾಜ ವಂಶಗಳ ಮಾಹಿತಿ ಕಲೆ ಹಾಕಿದ ಬಸವರಾಜ ಯಳಮಲ್ಲಿ ಅವರ ತಂಡದ ಪ್ರಯತ್ನ ಗಮನಾರ್ಹ. ಮುಂದಿನ ಪೀಳಿಗೆಗೆ ಸಂಶೋಧನೆಗೆ ಬಳಸಿಕೊಳ್ಳುವಂಥ ಮಾಹಿತಿ ಇದರಲ್ಲಿದೆ ಎಂದರು.
  ಕರ್ನಾಟಕದ ಇತಿಹಾಸ ವಿದೇಶೀಯರಿಗೆ ತಿಳಿದಿದೆ. ಆದರೆ ನಮ್ಮವರಿಗೇ ಅದರ ಪರಿಚಯವಿಲ್ಲ. ಚರಿತ್ರೆ ವಿಷಯವನ್ನು ಕೇವಲ ಇತಿಹಾಸ ವಿದ್ಯಾರ್ಥಿಗಳೇ ಓದಬೇಕಿಲ್ಲ. ಎಲ್ಲರಿಗೂ ಅತ್ಯಗತ್ಯ ಎಂದು ಹೇಳಿದರು.
  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಆರ್.ನಟರಾಜ್ ಮಾತನಾಡಿ ಎಲ್ಲದರ ಹಿಂದೆಯೂ ಇತಿಹಾಸವಿದೆ. ನಮ್ಮ ಪೂರ್ವಜರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ಇತಿಹಾಸದ ಅರಿವು ಕಡಿಮೆಯಾಗುತ್ತಿರುವ ಕಾಲದಲ್ಲಿ ಈ ಮಾಹಿತಿ ಪಟ ಸಹಾಯಕವಾಗಲಿದೆ ಎಂದರು.
  ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್ ಗೌರವಾಧ್ಯಕ್ಷ ಎನ್.ಟಿ.ಮಂಜುನಾಥ್, ವರ್ತಕ ಬಸವರಾಜ್ ಯಳಮಲ್ಲಿ,ಚಂದನ್ ಪಬ್ಲಿಸಿಟಿಯ ಡಿ. ಶೇಷಾಚಲ ಇದ್ದರು. ಎಚ್.ಆರ್.ಶಿಶಿರ ಪ್ರಾರ್ಥನೆ ಗೀತೆ ಹಾಡಿದರೆ, ಎಸ್.ಕೆ. ಸಹನಾ ಸ್ವಾಗತಿಸಿದರು. ಎಂ.ಪಿ.ಸೃಷ್ಟಿ-ಎಚ್.ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು. ಕೆ.ಎಂ.ಲಕ್ಷ್ಮೀ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts