ಭಾರತದ ಎಲ್ಲ ಭಾಷೆಗಳಿಗೆ ಇಂಗ್ಲಿಷ್ ಸಮಸ್ಯೆ

ಧಾರವಾಡ (ಡಾ. ಶಂ.ಭಾ. ಜೋಶಿ ವೇದಿಕೆ): ಜನರೇ ಇಲ್ಲದ ಗೋಷ್ಠಿ ನಡೆಸುತ್ತಿರುವುದು ದುರ್ದೈವದ ಸಂಗತಿ. ಜೀವನದ ದಶಕಗಳ ಅನುಭವನಲ್ಲಿ ಇಂದು ನೋವಿನ ದಿನ ಎಂದು ಡಾ. ಎ.ವಿ. ನಾವಡ ಹೇಳಿದರು.

ನಗರದ ಕೃಷಿ ವಿವಿ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ಕಟ್ಟುವಿಕೆ: ಸಾಂಸ್ಥಿಕ ಸಾಧನೆಗಳು ಮತ್ತು ನಿರೀಕ್ಷೆಗಳು’ ಗೋಷ್ಠಿಯಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆ’ ವಿಷಯ ಕುರಿತು ಮಾತನಾಡುವಾಗ ತೀವ್ರ ಆಕ್ರೋಶ ಹೊರಹಾಕಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನನ ಗೋಷ್ಠಿಯ ಆರಂಭದಲ್ಲಿ 8 ಜನ ಇದ್ದರು. ಸಮ್ಮೇಳನದ ಗೋಷ್ಠಿಗಳ ಬಗ್ಗೆ ಆಯೋಜಕರು ಸರಿಯಾಗಿ ಪ್ರಚಾರ ಮಾಡದೇ ಸಮ್ಮೇಳನಕ್ಕೆ 8 ಕೋಟಿ ರೂ. ಖರ್ಚು ಮಾಡಿರುವುದು ಏಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ವಿವಿಧ ವಿಷಯ ತಜ್ಞರನ್ನು ಆಯೋಜಕರು ಸರಿಯಾಗಿ ನೋಡಿಕೊಂಡಿಲ್ಲ. ಸಮ್ಮೇಳನ ಆಯೋಜಕರು ಮೋಹನ ಆಳ್ವರ ಆಳ್ವಾಸ್ ನುಡಿಸಿರಿಯನ್ನೊಮ್ಮೆ ನೋಡಿಕೊಂಡು ಬರಲಿ. ನೋವಿನಿಂದ ವಿಷಯ ಮುಗಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಅನುದಾನಿತ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು’ ವಿಷಯ ಕುರಿತು ಡಾ. ಜಿ.ಎಂ. ಹೆಗಡೆ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಕಟ್ಟುವ ಕೆಲಸಕ್ಕಿಂತ ನಾಶದ ಕಾರ್ಯವೇ ಸಾಗುತ್ತಿದೆ. ದೇಶದಲ್ಲಿ ಮಾತೇ ಬಂಡವಾಳವಾಗಿರುವುದರಿಂದ ಕನ್ನಡ ಉತ್ಕರ್ಷ ಹೊಂದಲಾರದು. ಕರ್ನಾಟಕದಲ್ಲಿ ಕನ್ನಡ ಕಟ್ಟುವ ಮೊದಲ ಹೆಜ್ಜೆ ಶಿಕ್ಷಣದಲ್ಲಿ ಕನ್ನಡವನ್ನು ಪ್ರತಿಷ್ಠಾಪಿಸುವುದು. ಆದರೆ, ನಮ್ಮ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ನಾವು ಸ್ವಾತಂತ್ರ್ಯ ಹೋರಾಟ ಮಾಡಿದ್ದು ಇಂಗ್ಲಿಷ್ ಪ್ರಭುತ್ವದ ವಿರುದ್ಧ. ಕರ್ನಾಟಕ ಏಕೀಕರಣ ಚಳವಳಿ ಮಾಡಿದ್ದು ಕನ್ನಡಿಗರ ಜನಭಾಷೆಯಲ್ಲಿ ಸರ್ಕಾರವನ್ನು ಸ್ಥಾಪಿಸಲು. ಆದರೆ, ಈಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ಬೇಸರ ಪಟ್ಟರು.

ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇಂಗ್ಲಿಷ್ ಪ್ರಭುತ್ವದ ವಿರುದ್ಧ ನಡೆಯುತ್ತಿರುವ ಹೋರಾಟ ಕೇವಲ ಕನ್ನಡದ ಸಮಸ್ಯೆಯಾಗಿಲ್ಲ. ಭಾರತದ ಎಲ್ಲ ಭಾಷೆಗಳು ಇದನ್ನೇ ಎದುರಿಸುತ್ತಿವೆ. ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಅಧ್ಯಾಪಕರ ನೇಮಕಾತಿ ಆಗದೆ 2 ದಶಕಗಳೇ ಕಳೆದಿವೆ. ಅನುದಾನಿತ ಕಾಲೇಜುಗಳಲ್ಲೂ ಇದೇ ಸ್ಥಿತಿ. ಹಾಗಾಗಿ ಕನ್ನಡ ಕಟ್ಟಲು ಶಾಶ್ವತ ಕ್ರಿಯಾಯೋಜನೆ ರೂಪಿತವಾಗಬೇಕು ಎಂದರು.

ನಾಡಿನ ಸಾಫ್ಟ್​ವೇರ್ ಕಂಪನಿಗಳು ಕನ್ನಡಿಗರಲ್ಲದವರಿಗೆ ಕನ್ನಡ ಕಲಿಕೆಯ ಕಡ್ಡಾಯ ನಿಯಮವನ್ನು ಜಾರಿಗೊಳಿಸಬೇಕು. ಭಾಷಾ ಸಮಾನತೆ ಮತ್ತು ಭಾಷಾ ಪ್ರಾವೀಣ್ಯತೆಗೆ ಸಂಬಂಧಿಸಿ ರಾಷ್ಟ್ರೀಯ ನೀತಿ ಜಾರಿಗೆ ಬರಬೇಕು. ಕೇಂದ್ರೋದ್ಯಮ ಮತ್ತು ಎಲ್ಲ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ನಿರ್ದಿಷ್ಟ ಆದ್ಯತೆ ನೀಡುವ ರಾಷ್ಟ್ರೀಯ ನೀತಿ ನಮಗೆ ಬೇಕಾಗಿದೆ ಎಂದರು.

ಈರಪ್ಪ ಎಂ. ಕಂಬಳಿ ಸರ್ಕಾರಿ ಸಂಸ್ಥೆಗಳು’, ಡಾ. ನಾ. ಮೊಗಸಾಲೆ ಖಾಸಗಿ ಸಂಸ್ಥೆಗಳು’ ಕುರಿತು ವಿಷಯ ಮಂಡಿಸಿದರು. ಡಾ. ಸಂಗಮೇಶ ಸವದತಿಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಸುಬ್ರಹ್ಮಣ್ಯ ವಿ. ಭಟ್ ವಂದಿಸಿದರು.