ಭಾರತದ ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರ ಕೊಡುಗೆ

ವಂದೇ ಮಾತರಂನಿಂದ ‘ಸದಾ ವತ್ಸಲೇ ಮಾತೃಭೂಮಿ’ವರೆಗೆ ಎಲ್ಲ ಕಡೆಗಳಲ್ಲಿಯೂ ನಮಗೆ ಭಾರತದ ಸ್ತ್ರೀ ಮನಸ್ಸು ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ರಾಮ ಸೀತೆಯೆಂದು ಹೇಳುವುದಿಲ್ಲ, ಸೀತಾ ರಾಮ ಎನ್ನುತ್ತಾರೆ. ಕೃಷ್ಣ ರಾಧೆಯೆಂದಲ್ಲ ರಾಧಾಕೃಷ್ಣ ಎಂದು ಕರೆಯುತ್ತಾರೆ. ನಮ್ಮ ದೇಶವನ್ನು ಪಿತೃಭೂಮಿಯೆಂದು ಹೇಳುವುದಿಲ್ಲ ಮಾತೃಭೂಮಿ ಎಂದು ಹೇಳುತ್ತೇವೆ.

ಕಳೆದ ನವೆಂಬರ್ 27-28ರಂದು ಹೈದರಾಬಾದ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಉದ್ಯಮಿಗಳ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿಯವರ ಕೋರಿಕೆಯಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರಳಾಗಿರುವ ಅವರ ಪುತ್ರಿ ಇವಾಂಕಾ ಟ್ರಂಪ್ ಉದ್ಘಾಟಿಸಿದಾಗ ದೇಶಾದ್ಯಂತ ಇದಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂತು. ವಿದೇಶಾಂಗ ಮಂತ್ರಿ, ರಕ್ಷಣಾ ಮಂತ್ರಿ, ಮಾಹಿತಿ ಮತ್ತು ಪ್ರಸರಣ ಮಂತ್ರಿಗಳೆಲ್ಲರೂ ಮಹಿಳೆಯರೇ ಆಗಿರುವ ಏಕೈಕ ರಾಷ್ಟ್ರ ಭಾರತವೆಂದೇ ಕಾಣುತ್ತದೆ. ಇದೆಲ್ಲವೂ ಔನ್ನತ್ಯದ ಸಂಕೇತವಾದರೆ ಗ್ರಾಮೀಣ ಭಾರತದಲ್ಲಿ ಮಹಿಳೆ ಇನ್ನೂ ಸಂಕಷ್ಟಗಳಲ್ಲೇ ಕಳೆದುಹೋಗುತ್ತಿದ್ದಾಳೆ ಎಂಬುದು ಕಟುವಾಸ್ತವ.

ಕೃಷಿಗೆ ಮಹಿಳೆಯರ ಕೊಡುಗೆ: ಭಾರತದಲ್ಲಿ ಕೃಷಿ ಎಂದ ಕೂಡಲೇ ಮಹಿಳೆಯ ಕೊಡುಗೆ ಪರಿಗಣನೆಗೆ ಬರುವುದೇ ಇಲ್ಲ. ರೈತನೆಂದರೆ ಪುರುಷ ಎಂಬ ಮನಸ್ಥಿತಿ ಬಹುತೇಕರದ್ದು. ಭಾರತದ ಮಹಿಳಾ ಕೃಷಿಕರ ಬಗ್ಗೆಯೂ ಚರ್ಚೆಗಳು ನಡೆಯುವುದು ಅಗತ್ಯ. ಮನೆಯಲ್ಲಿರುವ ಮಹಿಳೆಯರ ಬಗ್ಗೆ ಹೇಳುವುದಾದರೆ ಅವರು ವಾಸ್ತವದಲ್ಲಿ ಗೃಹಶಿಲ್ಪಿಗಳು. ಆದರೆ ‘ಹೌಸ್​ವೈಫ್’ ಎಂದು ಹೇಳಿ ಇಂಥ ಮಹಿಳೆಯರ ಪಾತ್ರವನ್ನು ಕಡೆಗಣಿಸಲಾಗಿದೆ. ಹೀಗಾಗಿಯೇ ಕೃಷಿ ಎಂದ ಕೂಡಲೇ ಪುರುಷರಿಗೆ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತದೆ. ಆದರೆ ಕೃಷಿಯಲ್ಲಿ ಮಹಿಳೆಯರ ಸಾಧನೆ ಪುರುಷರಿಗಿಂತ ಕಡಿಮೆಯೇನೂ ಇಲ್ಲ. ಬೀಜ ಬಿತ್ತನೆ, ನೀರು ಹಾಯಿಸುವುದು, ಕಟಾವು ಹೀಗೆ ಕೃಷಿ ಕಾರ್ಯಗಳ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪಾತ್ರ ಮಹತ್ವದ್ದು.

ಅಷ್ಟೇ ಅಲ್ಲ, ಬಿತ್ತನೆ, ಕಟಾವಿನ ಜತೆಗೆ ಮನೆಯ ನಿರ್ವಹಣೆ, ಅಡುಗೆ ತಯಾರಿ, ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿಯನ್ನೂ ಮಹಿಳೆ ಹೊರುತ್ತಾಳೆ. ನಗರಗಳು ಅದೆಷ್ಟೇ ವಿಸ್ತಾರವಾಗಿ ಬೆಳೆದಿದ್ದರೂ ಇಂದಿಗೂ ಭಾರತವನ್ನು ಗ್ರಾಮೀಣ ಭಾಗ , ಕೃಷಿ ಮುಂತಾದವುಗಳಿಂದಲೇ ಗುರುತಿಸಲಾಗುತ್ತದೆ. ಭಾರತ ಕೃಷಿ ಪ್ರಧಾನ ರಾಷ್ಟ್ರವೆಂಬ ಕಲ್ಪನೆ ಅಚ್ಚಳಿಯದೆ ಉಳಿದಿದೆ. ಅಂತೆಯೇ ಭಾರತದ ಪರಿಭಾಷೆ ಪುರುಷರಿಂದ ಆಗುವುದಲ್ಲ ಗ್ರಾಮೀಣ ಭಾಗದ ಪರಿಶ್ರಮಿ ಮಹಿಳೆಯರಿಂದಲೇ ನಿರ್ಧರಿತವಾಗುತ್ತದೆ. ಆದರೆ ಅವರ ಪರಿಶ್ರಮವನ್ನು ಗುರುತಿಸಲಾಗುವುದಿಲ್ಲ, ಅವರಿಗೆ ಯಾವುದೇ ಪದವಿ ಸಮ್ಮಾನ ನೀಡಲಾಗುವುದಿಲ್ಲ.

ಕೃಷಿ ಚಟುವಟಿಕೆ ಕೈಗೊಳ್ಳುವ, ಚಾಪೆ ನೇಯ್ಗೆ ಮಾಡುವ, ಮಾರುಕಟ್ಟೆಯಲ್ಲಿ ಉದ್ಯಮವನ್ನು ನಡೆಸಿ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಮಹಿಳೆಯರು, ಶಿಲ್ಪಕಲೆ, ಕರಕುಶಲ ಕಲೆಯಿಂದ ವಿಶ್ವಾದ್ಯಂತ ಖ್ಯಾತಿ ಪಡೆದವರು, ಸಮ್ಮೋಹಿತಗೊಳಿಸುವಂತಹ ಕಸೂತಿ ಕಲೆಗಳಿಂದ ಭಾರತಕ್ಕೆ ಹೊಸ ಗುರುತನ್ನು ನೀಡಿದ ಮಹಿಳೆಯರು ಕೂಡ ಸಮಾನತೆಯ ಪ್ರತೀಕ್ಷೆಯಲ್ಲಿಯೇ ಇದ್ದಾರೆ.

ಭಾರತದಲ್ಲಿ ಇಂದಿಗೂ ಸ್ತ್ರೀಯನ್ನು ಆಕೆಯ ಪ್ರತಿಭೆ ಮತ್ತು ಶಕ್ತಿಯ ಬಲದಲ್ಲಿ ಖ್ಯಾತಿ ಪಡೆಯಲು ವಿದೇಶಿ ಅಥವಾ ನಗರಗಳ ಜನತೆಯ ಅಂಗವಾಗಬೇಕಾಗುತ್ತದೆ. ಆಕೆ ಪೈಲಟೋ, ವಿಶ್ವ ಸುಂದರಿಯೋ, ಮಂಗಳ ಗ್ರಹಕ್ಕೆ ಉಪಗ್ರಹವನ್ನು ಕಳುಹಿಸುವ ವಿಜ್ಞಾನಿಯೋ, ವಿಶ್ವ ಚಾಂಪಿಯನ್ ಹೀಗೆ ಏನಾದರೊಂದು ಸಾಧನೆಯನ್ನು ಮಾಡಲೇಬೇಕಾಗಿರುತ್ತದೆ. ಪುರುಷ ಪ್ರಭುತ್ವವುಳ್ಳ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಿದ್ಧಿಸಿಕೊಳ್ಳಬೇಕಾಗಿರುತ್ತದೆ. ಆಗ ಮಾತ್ರವೇ ಆಕೆಗೆ ಸಮಾನತೆಯ ಅನುಭವವಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸುಮಿತ್ರಾ ಮಹಾಜನ್, ಮೀರಾ ಕುಮಾರ್, ಮಮತಾ ಬ್ಯಾನರ್ಜಿ, ಮಾಯಾವತಿ, ಆನಂದಿಬೆನ್ ಪಟೇಲ್, ಮೇರಿ ಕೋಮ್ ಮುಂತಾದವರು ಅವರವರ ಕ್ಷೇತ್ರದಲ್ಲಿ ಹೆಸರು ಪಡೆಯಲು ಅದೆಷ್ಟೋ ಸಂಘರ್ಷಗಳನ್ನು ನಡೆಸಿದ್ದು, ಪುರುಷ ಪ್ರಧಾನ ಸಮಾಜದ ಅಹಂಕಾರವನ್ನು ಮಣಿಸಿದ್ದಾರೆ.

ಗ್ರಾಮೀಣ ಮಹಿಳೆಯರ ಪಾತ್ರ: ಉತ್ತರಾಖಂಡದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇಲ್ಲಿನದು ಸ್ತ್ರೀ ಪ್ರಧಾನವಾದ ಸಮಾಜ. ಗಂಗೆ ಇಲ್ಲಿನ ತಾಯಿ, ಹಿಮಾಲಯ ಶಿವನ ತಪೋಭೂಮಿ ನಿಜ, ಆದರೆ ನಮ್ಮನ್ನು ಸಂಭಾಳಿಸುವ, ಪಾಲನೆ ಮಾಡುವ, ರಕ್ಷಿಸುವ ಹೊಣೆ ತಾಯಿ ನಂದಾ ಮೇಲಿದೆ. ಶಿವನೊಂದಿಗಿನ ಸಂಬಂಧ ಪೂಜೆ ಅಥವಾ ಕರ್ಮ ಕೇಂದ್ರಿತ ರೀತಿಯಾಗಿದೆ. ಆದರೆ ಆತ್ಮೀಯತೆಯ ಪಾಠ, ಜೀವನದ ಅನುಭೂತಿ, ಉಸಿರಾಟದ ಗೀತೆ ನಂದಾಳಿಂದಲೇ ಸಾಧ್ಯವಾಗುತ್ತದೆ.

ಉತ್ತರಾಖಂಡ ಮಹಿಳೆಯರ ಪರಿಶ್ರಮದಿಂದ, ಅವರ ಬಲಿದಾನದಿಂದ ರೂಪುಗೊಂಡದ್ದು. ಕೃಷಿ ಕಾರ್ಯಗಳು, ಪಶು ಸಾಕಾಣಿಕೆ ಮುಂತಾದವುಗಳಿಂದ ಗುಡಿಸಲಿಗೆ ಮನೆಯ ರೂಪ ನೀಡಿದ ಅವರು ಪುತ್ರ ಮತ್ತು ಪತಿಯನ್ನು ಮುಖ್ಯವಾಹಿನಿಗೆ ತಂದರು. ಸಾರಿಗೆ, ರಸ್ತೆ ವ್ಯವಸ್ಥೆಯಿಲ್ಲದ, ಸಂಪರ್ಕವೇ ಸಾಧ್ಯವಿಲ್ಲದ ಗ್ರಾಮದಲ್ಲಿ ನೆಲೆಸಿದರು. ಆದರೆ ಇವರು ಕಷ್ಟಗಳ ಭಾರದಿಂದ ವಯಸ್ಸಿಗೂ ಮೊದಲೇ ಮುದುಕರೋ ರೋಗಿಗಳೋ ಆಗಿ ಬಿಡುತ್ತಾರೆ. ಅಷ್ಟೇ ಅಲ್ಲ, ಗ್ರಾಮೀಣ ಮಹಿಳೆಯರು ಯಾವುದೇ ರಾಜಕೀಯ ಪಕ್ಷದ ಅಜೆಂಡಾದ ಭಾಗವೂ ಆಗಿರುವುದಿಲ್ಲ. ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸಲು ಒಂದು ಟ್ವೀಟ್ ಮಾಡಿ ಸುಮ್ಮನಿದ್ದುಬಿಡಬಹುದು. ಆದರೆ ಅವರಿಗೆ ಸಮಾನತೆ ಒದಗಿಸುವುದು, ಅವರ ಜೀವನಕ್ಕೆ ಅಗತ್ಯವಾದ ಸೌಲಭ್ಯ ನೀಡುವುದು, ಗ್ರಾಮದಲ್ಲಿ ಅವರ ಆರೋಗ್ಯ ಕಾಪಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡುವುದು, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನೀಡುವುದು… ಈ ಎಲ್ಲ ಕನಸುಗಳು ಅದೆಷ್ಟು ದೂರದಲ್ಲಿವೆಯಲ್ಲ ಎಂದು ಯೋಚಿಸಿದಾಗ ವ್ಯಥೆ ಆಗುತ್ತದೆ.

ಸ್ತ್ರೀ ಆಕೆಯನ್ನು ಪೂಜಿಸಬೇಕೆಂದು ಬಯಸುವುದಿಲ್ಲ ಎಂಬುದನ್ನು ನಾವು ಯಾವಾಗ ಅರ್ಥೈಸಿಕೊಳ್ಳುತ್ತೇವೆ. ಮಹಿಳೆ ನಿರ್ಣಯಿಸುವ, ಆಕೆಯ ಪ್ರಾಥಮಿಕ ಅಗತ್ಯತೆಗಳನ್ನು ನಿರ್ಧರಿಸುವ ಅಧಿಕಾರವನ್ನು ಬಯಸುತ್ತಾಳೆ. ನಾವು ಆಕೆಯನ್ನು ಸಂರಕ್ಷಿಸಲು ಬಯಸುತ್ತೇವೆ. ಓರ್ವ ಮಹಿಳೆ ರಕ್ಷಣಾ ಮಂತ್ರಿ ಆಗಿದ್ದಾಳೆಂದು ಆಕೆಯನ್ನು ಮಹಾನ್ ಎಂದು ಗುರುತಿಸುತ್ತೇವೆ. ಓರ್ವ ಪುರುಷ ರಕ್ಷಣಾ ಸಚಿವನಾಗಿದ್ದಾನೆ ಎಂದರೆ ಆಗಲೂ ಇದೇ ರೀತಿ ಹೇಳುತ್ತೇವೆಯೇ? ಪುರುಷರ ಬಗ್ಗೆ ಈ ರೀತಿ ಹೇಳಲಾಗುವುದಿಲ್ಲ. ಯಾಕೆಂದರೆ ಪುರುಷನೋರ್ವ ರಕ್ಷಣಾ ಮಂತ್ರಿಯಾಗುವುದು ಸ್ವಾಭಾವಿಕ, ಸ್ವೀಕಾರಾರ್ಹ ಮತ್ತು ಸಾಮಾನ್ಯ ಮಾತಾಗಿದೆ. ಆದರೆ ಮಹಿಳೆಯರ ಗುಣ ಮತ್ತು ಪ್ರತಿಭೆಗೆ ಅನುಸಾರವಾಗಿ ಆಕೆ ರಕ್ಷಣಾ ಮಂತ್ರಿಯಾದರೆ ಅದನ್ನು ವಿಶೇಷ, ಅಸಾಮಾನ್ಯ, ಅಭೂತಪೂರ್ವ ಮತ್ತು ಪುರುಷೋಚಿತ ಎಂದು ಪರಿಗಣಿಸಲಾಗುತ್ತದೆ. ಶಕ್ತಿಗಾಗಿ ದುರ್ಗೆಯನ್ನು ಪೂಜಿಸುವ ಈ ಜನರೇ ಮಹಿಳೆಯನ್ನು ಅವಲಂಬಿತೆಯಾಗಿ ಕಾಣುತ್ತಾರೆ. ಲೋಕಕ್ಕೆ ಶಕ್ತಿ ನೀಡುವ ದುರ್ಗೆ ಅದಾವ ರೀತಿಯಲ್ಲಿ ಅವಲಂಬಿತಳೋ?

ಕೃಷಿಯಲ್ಲಿ ತೊಡಗಿಕೊಂಡಿರುವ ಮಹಿಳೆಯರ ಬಗ್ಗೆ ಮಾತನಾಡುತ್ತಲೇ ದಲಿತ ಮಹಿಳೆಯರ ದುಃಸ್ಥಿತಿಯ ಬಗೆಗೂ ಚಿಂತನೆ ನಡೆಸಬೇಕಾಗಿದೆ. ಅಲ್ಲೂ ಚರ್ಚೆ ಕೇವಲ ಪುರುಷರ ಮಟ್ಟಕ್ಕೆ ಸೀಮಿತಗೊಳ್ಳುತ್ತದೆ. ಅಪಮಾನ ಸಹಿಸಿಕೊಳ್ಳುವುದು, ಅನ್ಯಾಯಕ್ಕೆ ತಲೆ ಬಾಗುವುದು ಆಕೆಗೆ ಸಾಮಾನ್ಯ ಎಂಬಂತಾಗಿದೆ. ಆದರೆ ಯಾವತ್ತಾದರೂ ದಲಿತ ಸ್ತ್ರೀಯ ವೇದನೆಗೆ ಬೇರೆ ರೀತಿಯ ವಿಮರ್ಶೆಗಳನ್ನು ಕಂಡಿದ್ದೇವೆಯೇ? ಇಂತಹ ಸಮಸ್ಯೆಗಳು ಮತ್ತೆ ಮತ್ತೆ ಎದುರಾಗದಂತೆ ತಡೆಯಬೇಕಾಗಿದೆ. ನಮಗೆ ಆದರ್ಶವಾಗಿ ಅಹಿಲ್ಯಾಬಾಯಿ, ಲಕ್ಷ್ಮಿಬಾಯಿ ಕೇಳ್ಕರ, ಪ್ರಮೀಳಾತಾಯಿ ಮೆಢೆ, ಶಾಂತಾ ಅಕ್ಕ ಅವರುಗಳಿದ್ದಾರೆ. ಆದರೆ ನಮ್ಮ ಆದರ್ಶಗಳಲ್ಲಿ ದಕ್ಷಿಣದ ಮಹಿಳೆಯರನ್ನು ಗುರುತಿಸದೇ ಹೋದರೆ ಅದು ಅಪೂರ್ಣಗೊಳ್ಳುತ್ತದೆ. ವೇಲು ನಾಚಿಯಾರ್, ಅಂಡಾಲಾ, ಅವ್ವಯ್ಯಾರ್, ಚೆನ್ನಮ್ಮ, ಸೇರಿದಂತೆ ಹಲವು ಸಾಧಕರನ್ನು ಈ ಪಟ್ಟಿಯಲ್ಲಿ ಸೇರಿಸಲೇ ಬೇಕಾಗಿದೆ. ಭಾರತದ ಸ್ತ್ರೀ ಮನಸ್ಸನ್ನು ಅರಿಯದ ಹೊರತು ಭಾರತ ಪರಿಪೂರ್ಣವಾಗಲು ಸಾಧ್ಯವೇ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ನಿಜಾರ್ಥಧಲ್ಲಿ ಮಹಿಳಾ ಸಬಲೀಕರಣ ಸಾಧ್ಯ. ಹಾಗಾಗಿ, ಇನ್ನಾದರೂ ಗ್ರಾಮೀಣ ಭಾಗದ ಮತ್ತು ದಮನಿತ ಸಮುದಾಯದ ಮಹಿಳೆಯರ ದನಿಯನ್ನು ಆಲಿಸಿ ಅರ್ಥೈಸಿಕೊಂಡು, ಸ್ಪಂದಿಸಬೇಕಿದೆ.

Leave a Reply

Your email address will not be published. Required fields are marked *