ಶಾರ್ಜಾ: ನಾಯಕ ಮೊಹಮದ್ ಅಮಾನ್ (122* ರನ್, 118 ಎಸೆತ, 7 ಬೌಂಡರಿ) ಶತಕದಾಟ ಹಾಗೂ ಕನ್ನಡಿಗ ಕೆಪಿ ಕಾರ್ತಿಕೇಯ (57 ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್ ಮತ್ತು 21ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಜಪಾನ್ ಎದುರು 211 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ.
ಶಾರ್ಜಾದಲ್ಲಿ ಸೋಮವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕ ಆಯುಷ್ ಮಹಾತ್ರೆ (54 ರನ್, 29 ಎಸೆತ, 6 ಬೌಂಡರಿ, 4 ಸಿಕ್ಸರ್) ಜತೆಯಾಗಿ ವೈಭವ್ ಸೂರ್ಯವಂಶಿ (23) ಉತ್ತಮ ಆರಂಭ ಒದಗಿಸಿದರು. 4ನೇ ವಿಕೆಟ್‌ಗೆ ಅಮಾನ್-ಕಾರ್ತಿಕೇಯ ನಡೆಸಿದ ಜತೆಯಾಟ ಹಾಗೂ ಮತ್ತೋರ್ವ ಕನ್ನಡಿಗ ಹಾರ್ದಿಕ್ ರಾಜ್ (25*) ಉಪಯುಕ್ತ ಆಟದಿಂದ ಭಾರತ 6 ವಿಕೆಟ್‌ಗೆ 339 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಆರಂಭಿಕ ಹ್ಯೂಗೋ ಕಲ್ಲಿ (50 ರನ್, 111 ಎಸೆತ, ಬೌಂಡರಿ) ಹೋರಾಟದ ನಡುವೆ ಹಾರ್ದಿಕ್ ರಾಜ್ (9ಕ್ಕೆ 2) ಸಹಿತ ಇತರ ಭಾರತೀಯರ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿದ ಜಪಾನ್, 8 ವಿಕೆಟ್‌ಗೆ 128 ರನ್‌ಗಳಿಸಲಷ್ಟೇ ಶಕ್ತಗೊಂಡಿತು.
ಭಾರತ: 6 ವಿಕೆಟ್‌ಗೆ 339 (ಆಯುಷ್ 54, ವೈಭವ್ 23, ಸಿದ್ದಾರ್ಥ್ 35, ಅಮನ್ 122*, ಕಾರ್ತಿಕೇಯ 57, ನಿಖಿಲ್ 12, ಹಾರ್ದಿಕ್ 25*, ಹ್ಯೂಗೋ ಕಲ್ಲಿ 42ಕ್ಕೆ 2). ಜಪಾನ್: 8 ವಿಕೆಟ್‌ಗೆ 128 (ಹ್ಯೂಗೋ 50, ನಿಹಾರ್ 14, ಚಾರ್ಲ್ಸ್ 35, ಆದಿತ್ಯ 9, ಹಾರ್ದಿಕ್ 9ಕ್ಕೆ 2, ಚೇತನ್ 14ಕ್ಕೆ 2, ಕಾರ್ತಿಕೇಯಾ 21ಕ್ಕೆ 2).
ಪಂದ್ಯಶ್ರೇಷ್ಠ: ಮೊಹಮದ್ ಅಮಾನ್.
ಭಾರತಕ್ಕೆ ಮುಂದಿನ ಪಂದ್ಯ
ಯಾವಾಗ: ಬುಧವಾರ
ಎದುರಾಳಿ: ಯುಎಇ
ಆರಂಭ: ಬೆಳಗ್ಗೆ 10.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್
1: ಮೊಹಮದ್ ಅಮಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಪಾನ್ ವಿರುದ್ಧ ಶತಕ ಸಿಡಿಸಿದ ಮೊದಲ ಭಾರತೀಯರೆನಿಸಿದರು.
ಮೂವರು ಕನ್ನಡಿಗರು ಕಣಕ್ಕೆ
ಕಿರಿಯರ ಏಷ್ಯಾಕಪ್‌ಗೆ ಭಾರತ ತಂಡದಲ್ಲಿ ಸ್ಥಾನದಲ್ಲಿ ಪಡೆದಿರುವ ಕರ್ನಾಟಕದ ಮೂವರು ಆಟಗಾರರು ಕೂಡ ಜಪಾನ್ ವಿರುದ್ಧದ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದು ವಿಶೇಷವಾಗಿತ್ತು. ಕೆಪಿ ಕಾರ್ತಿಕೇಯ ಮತ್ತು ಹಾರ್ದಿಕ್ ರಾಜ್ ಆಲ್ರೌಂಡ್ ನಿರ್ವಹಣೆಯೊಂದಿಗೆ ಮಿಂಚಿದರೆ, ವೇಗಿ ಸಮರ್ಥ್ ನಾಗರಾಜ್ 8 ಓವರ್‌ಗಳಲ್ಲಿ 48 ರನ್ ಬಿಟ್ಟುಕೊಟ್ಟು ಹೆಚ್ಚಿನ ಪರಿಣಾಮ ಬೀರಲು ಶಕ್ತರಾಗಲಿಲ್ಲ.