ಭಾರತಕ್ಕಿದೆ ವಿಶ್ವಕ್ಕೆ ವಿಜ್ಞಾನ ಪರಿಚಯಿಸಿದ ಕೀರ್ತಿ

ಚಿಕ್ಕಬಳ್ಳಾಪುರ: ವಿಶ್ವಕ್ಕೆ ನಾಗರಿಕತೆ ಮತ್ತು ವಿಜ್ಞಾನವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಆರ್​ಎಸ್​ಎಸ್ ಕ್ಷೇತ್ರ ಬೌದ್ಧಿಕ್ ಪ್ರಮುಖ್ ಶ್ರೀಧರ್ ಸ್ವಾಮಿ ಹೇಳಿದರು.

ವಿಜಯದಶಮಿ ಪ್ರಯುಕ್ತ ನಗರದ ಸರ್ ಎಂ.ವಿ.ಸ್ಮಾರಕ ಪ್ರೌಢಶಾಲೆಯಲ್ಲಿ ಭಾನುವಾರ ಆರ್​ಎಸ್​ಎಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆಯೇ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಸಂಶೋಧನೆ ಕೈಗೊಂಡು ಗಮನ ಸೆಳೆದಿದ್ದರು. ಆದರೆ, ಬ್ರಿಟಿಷರು ಅಪಪ್ರಚಾರದಿಂದ ಹೀನಾಯವಾಗಿ ಕಾಣುವಂತೆ ಮಾಡಿದರು ಎಂದರು.

ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು ಸಂಘಟನೆ ಕೊರತೆ, ಏಕತೆ, ದೇಶಾಭಿಮಾನ ಇಲ್ಲದಿರುವುದನ್ನು ಅರಿತು ಭಾರತೀಯರನ್ನು ಗುಲಾಮರನ್ನಾಗಿಸಿಕೊಂಡರು. ಇದರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅನೇಕರು ಪಾಲ್ಗೊಂಡಿದ್ದಾರೆ. ದೇಶದಲ್ಲಿ ಇದೀಗ ಬಹುತೇಕ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಲಾಗುತ್ತಿದೆ. ಇದಕ್ಕೆ ವೈಜ್ಞಾನಿಕ ತಳಹದಿ ಇಲ್ಲ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯನಿರ್ವಹಕ ವೇಣುಗೋಪಾಲ್ ಮತ್ತಿತರರಿದ್ದರು.

ಪಥ ಸಂಚಲನ : ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರಾರು ಗಣವೇಷಧಾರಿಗಳು ಪಥ ಸಂಚಲನ ನಡೆಸಿದರು. ಕಂದವಾರದ ವೆಂಕಟರಮಣಸ್ವಾಮಿ ದೇವಾಲಯ ಬಳಿಯಿಂದ ಗರ್ಲ್ ಸ್ಕೂಲ್ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ, ಶಿಡ್ಲಘಟ್ಟ ವೃತ್ತದ ಮೂಲಕ ಸರ್ ಎಂ.ವಿ.ಸ್ಮಾರಕ ಪ್ರೌಢಶಾಲೆ ಆವರಣಕ್ಕೆ ಆಗಮಿಸಿದರು. ಪಥ ಸಂಚಲನ ನಡೆಸುತ್ತಿದ್ದ ವೇಳೆ ಸಾರ್ವಜನಿಕರು ಗಣವೇಷಧಾರಿಗಳ ಮೇಲೆ ಹೂವು ಸುರಿದು ಸ್ವಾಗತಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.