More

  ಭಾನುವಾರ ಲಾಕ್​ಡೌನ್​ಗೆ ಜನಬೆಂಬಲ

  ಗದಗ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿರುವ ಭಾನುವಾರದ ಲಾಕ್​ಡೌನ್ ಹಿನ್ನೆಲೆಯಲ್ಲಿ ಜಿಲ್ಲೆ ಸ್ತಬ್ಧಗೊಂಡಿತ್ತು.

  ಜಿಲ್ಲೆಯಲ್ಲಿ ದಿನೇ ದಿನೆ ಕರೊನಾ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಏರತೊಡಗಿದೆ. ಹೀಗಾಗಿ ಆತಂಕದಲ್ಲಿರುವ ಜನರು ಮನೆ ಬಿಟ್ಟು ಹೊರಗೆ ಬರಲಿಲ್ಲ.

  ಭಾನುವಾರದ ಲಾಕ್​ಡೌನ್​ನಿಂದ ಗದಗ ಬೆಟಗೇರಿ ಅವಳಿ ನಗರದಲ್ಲಿ ಬೆಳಗ್ಗೆಯಿಂದಲೇ ಬಂದ್ ವಾತಾವರಣ ಕಂಡುಬಂದಿತು. ಹಾಲಿನ ಅಂಗಡಿ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ವಹಿವಾಟು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ನಗರದ ಹಳೇ ಬಸ್ ನಿಲ್ದಾಣ, ಹೊಸ ನಿಲ್ದಾಣ, ಸ್ಟೇಷನ್ ರಸ್ತೆ, ಬ್ಯಾಂಕ್ ರಸ್ತೆ, ಗ್ರೇನ್ ಮಾರ್ಕೆಟ್, ಮುಳಗುಂದ ನಾಕಾ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಜನರಿಲ್ಲದೆ ರಸ್ತೆಗಳು ಖಾಲಿಖಾಲಿಯಾಗಿದ್ದವು. ಅಟೋ, ಬಸ್ ಸೇರಿ ವಿವಿಧ ವಾಹನಗಳ ಸಂಚಾರ ಬಂದ್ ಆಗಿತ್ತು.

  ಅವಳಿ ನಗರದಲ್ಲಿ ಜನರು ಬೆಳಗಿನ ಜಾವ ವಾಯುವಿಹಾರ ಮಾಡುವ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಪರಸ್ಪರ ಅಂತರವೂ ಮಾಯವಾಗಿತ್ತು. ನಗರದ ಹೊರವಲಯದ ಕಳಸಾಪುರ ರಸ್ತೆ, ರಿಂಗ್ ರಸ್ತೆ, ಬಿಂಕದಕಟ್ಟಿ ರಸ್ತೆ, ರೋಣ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ವಾಯುವಿಹಾರ ಮಾಡಿದರು. ಪರಸ್ಪರ ಅಂತರ ಕಾಪಾಡಿಕೊಳ್ಳಿ, ಮುಖಕ್ಕೆ ಮಾಸ್ಕ್ ಧರಿಸಿ ಎಂದು ಅನೇಕ ಸಲ ಮನವಿ ಮಾಡಿದರೂ ವಾಯುವಿಹಾರಿಗಳಿಗೆ ತಿಳಿವಳಿಕೆ ಸಾಲದಾಗಿದೆ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದರು.

  ಅನಗತ್ಯವಾಗಿ ಬೈಕ್​ನಲ್ಲಿ ಸಂಚರಿಸುತ್ತಿದ್ದ ಯುವಕರಿಗೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದರು. ಒಟ್ಟಾರೆ ಭಾನುವಾರದ ಲಾಕ್​ಡೌನ್​ಗೆ ಬಹುತೇಕ ಜನರು ಸಹಕಾರ ನೀಡಿದ್ದು ಕಂಡುಬಂದಿತು.

  ಶಿರಹಟ್ಟಿಯಲ್ಲಿ ಬಿಗಿ ಬಂದೋಬಸ್ತ್

  ಶಿರಹಟ್ಟಿ: ಭಾನುವಾರದ ಕರ್ಫ್ಯೂಗೆ ಶಿರಹಟ್ಟಿ ಸೇರಿ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆಯಿತು. ಪಟ್ಟಣದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರಿಂದ ಜನ ಮತ್ತು ವಾಹನ ಸಂಚಾರವಿಲ್ಲದೆ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.

  ವ್ಯಾಪಾರ ವಹಿವಾಟಿನ ಕೇಂದ್ರವಾದ ಗಾಂಧಿ ವೃತ್ತದ ಅಂಗಡಿಗಳು, ಬೀದಿ ಬದಿಯ ಗೂಡಂಗಡಿಗಳು ಮುಚ್ಚಿದ್ದರಿಂದ ಮಾರ್ಕೆಟ್ ರಸ್ತೆ ಸ್ತಬ್ಧವಾಗಿದ್ದರೆ, ಬಸ್ ಸಂಚಾರ ಇಲ್ಲದ ಕಾರಣ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಆಟೋ, ಟಂಟಂ, ಓಡಾಟ ಬಂದ್ ಆಗಿದ್ದವು. ಔಷಧ, ಹಾಲು ಮಾರಾಟ ಕೇಂದ್ರಗಳು ಮಾತ್ರ ತೆರೆದ್ದಿದ್ದವು. ಅನವಶ್ಯಕವಾಗಿ ಅಲ್ಲಲ್ಲಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಬುದ್ಧಿ ಹೇಳಿ ಮನೆಗೆ ಕಳುಹಿಸುತ್ತಿದ್ದರು. ಮಧ್ಯಾಹ್ನ 1 ಗಂಟೆ ನಂತರ ಆರಂಭವಾದ ಜಿಟಿಜಿಟಿ ಮಳೆಯಿಂದ ಯಾರೂ ಮನೆಯಿಂದ ಹೊರ ಬರಲಾಗದ ಸ್ಥಿತಿ ನಿರ್ವಣವಾಗಿ ಭಾನುವಾರದ ಲಾಕ್​ಡೌನ್​ಗೆ ಮಳೆರಾಯನ ಬೆಂಬಲ ವ್ಯಕ್ತವಾಗಿತ್ತು.

  ಅನಗತ್ಯವಾಗಿ ಓಡಾಡಿದವರಿಗೆ ಎಚ್ಚರಿಕೆ

  ಮುಂಡರಗಿ: ಸಂಡೇ ಲಾಕ್​ಡೌನ್ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಭಣಗುಡುತ್ತಿತ್ತು. ಪಟ್ಟಣದ ಕೊಪ್ಪಳ ಸರ್ಕಲ್ ಮತ್ತು ಬಸ್ ನಿಲ್ದಾಣ ಭಾಗದಲ್ಲಿ ಹೂ ವ್ಯಾಪಾರ ಎಂದಿನಂತೆ ಕಂಡುಬಂತು. ಔಷಧ ಅಂಗಡಿ, ಆಸ್ಪತ್ರೆಗಳು, ತರಕಾರಿ, ಹಾಲು, ಮಾಂಸದಂಗಡಿ ತೆರೆದಿದ್ದವು. ಜನ ಜಂಗುಳಿಯಿಂದ ಕೂಡಿರುತ್ತಿದ್ದ ಮುಖ್ಯಬಜಾರ್ ರಸ್ತೆ ಬಿಕೋ ಎನ್ನುತ್ತಿತ್ತು. ಕಳೆದ ಭಾನುವಾರ ಜನ ಸಂಚಾರ ಬಹುತೇಕ ಕಡಿಮೆ ಇತ್ತು. ಆದರೆ, ಈ ಸಾರಿ ಅಲ್ಲಲ್ಲಿ ಜನ ಮತ್ತು ಬೈಕ್ ಸಂಚಾರ ಕಂಡುಬಂತು. ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

  ಬೀದಿಗಿಳಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

  ಲಕ್ಷ್ಮೇಶ್ವರ: ಸಂಡೇ ಕರ್ಫ್ಯೂಗೆ 2ನೇ ವಾರವೂ ಪಟ್ಟಣದಲ್ಲಿ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

  ಮುಂಜಾಗ್ರತೆ ಕ್ರಮವಾಗಿ ಶನಿವಾರವೇ ಎಲ್ಲರೂ ಅಗತ್ಯ ವಸ್ತುಗಳನ್ನು ಖರೀದಿಸಿದ್ದರು. ಹಾಲು, ಹಣ್ಣು, ತರಕಾರಿ, ಔಷಧ ಸೇರಿ ಜೀವನಾವಶ್ಯಕ ವಸ್ತುಗಳ ಮಾರಾಟಕ್ಕೆ ಅನುಮತಿಯಿದ್ದರೂ ಪಟ್ಟಣದಲ್ಲಿ ಭಾನುವಾರ ಎಲ್ಲ ರೀತಿಯ ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಆಟೋ, ಬಸ್ ಸೇರಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ರಸ್ತೆಗಳು, ಬಸ್ ನಿಲ್ದಾಣ, ಪೆಟ್ರೋಲ್ ಬಂಕ್​ಗಳು ಬಿಕೋ ಎನ್ನುತ್ತಿದ್ದವು.

  ಅನಾವಶ್ಯಕವಾಗಿ ಹೊರಗಡೆ ಸುತ್ತಾಡಲು ಬಂದವರಿಗೆ ಪೊಲೀಸರು ಬುದ್ಧಿಹೇಳಿ ಲಾಠಿ ಬಿಸಿ ಮುಟ್ಟಿಸಿ ಕಳುಹಿಸಿದರು. ಲಕ್ಷ್ಮೇಶ್ವರ ಸೇರಿ ತಾಲೂಕಿನ ಹೆಚ್ಚು ಜನಸಂಖ್ಯೆ ಹೊಂದಿರುವ ಶಿಗ್ಲಿ, ಸೂರಣಗಿ, ಬಾಲೇಹೊಸೂರ ಸೇರಿ ಬಹುತೇಕ ಕಡೆ ಬಂದ್​ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಮಧ್ಯಾಹ್ನ 2 ಗಂಟೆ ಸುರಿದ ಜಿಟಿಜಿಟಿ ಮಳೆಯೂ ಸಂಡೇ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದಂತಾಯಿತು.

  ಸಿಪಿಐ ವಿಕಾಸ ಪಿ.ಎಲ್., ಪಿಎಸ್​ಐ ಶಿವಯೋಗಿ ಲೋಹಾರ, ಪಿ.ಎಂ. ಬಡಿಗೇರ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಇತರರು ಪಟ್ಟಣದಲ್ಲಿ ಪರಿಶೀಲನೆ ಕೈಗೊಂಡರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts